ADVERTISEMENT

ಕಲಬುರ್ಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆಗೆ ಡಿ.10 ರಂದು ಭವ್ಯ ಸ್ವಾಗತ: PH ನೀರಲಕೇರಿ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2022, 19:02 IST
Last Updated 8 ಡಿಸೆಂಬರ್ 2022, 19:02 IST
PH ನೀರಲಕೇರಿ
PH ನೀರಲಕೇರಿ   

ಧಾರವಾಡ: ‘ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಮಲ್ಲಿಕಾರ್ಜುನ ಖರ್ಗೆಯವರು ಇದೇ ಮೊದಲ ಬಾರಿಗೆ ಡಿ.10ರಂದು ಕಲಬುರ್ಗಿಗೆ ಆಗಮಿಸುತ್ತಿದ್ದು, ಅವರ ಭವ್ಯ ಸ್ವಾಗತಕ್ಕೆ ಕಾಂಗ್ರೆಸ್ ನಾಯಕರು ಸಿದ್ಧತೆ ಮಾಡಿಕೊಂಡಿದ್ದಾರೆ’ ಎಂದು ಕೆಪಿಸಿಸಿ ಮಾಧ್ಯಮ ವಕ್ತಾರ ಪಿ.ಎಚ್. ನೀರಲಕೇರಿ ತಿಳಿಸಿದರು.

‘ಕಲ್ಯಾಣ ಕರ್ನಾಟಕಕ್ಕೆ 370ಜೆ ಒದಗಿಸುವಲ್ಲಿ ಮಲ್ಲಿಕಾರ್ಜುನ ಖರ್ಗೆಯವರ ಕೊಡುಗೆ ಹಿರಿದಾಗಿದೆ. ಆದ್ದರಿಂದ ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ’ ಎಂದುಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಮತದಾರ ಪಟ್ಟಿ ಪರಿಷ್ಕರಣೆಯಲ್ಲಿ ಸಾಕಷ್ಟು ಲೋಪ ದೋಷಗಳಾಗಿದ್ದು, ಗೊಂದಲಗಳು ಮುಂದುವರೆದಿವೆ. ಕಾರಣವಿಲ್ಲದೆ ಪಟ್ಟಿಯಿಂದ ಮತದಾರರ ಹೆಸರು ಅಳಿಸಿ ಹಾಕಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು, ಚುನಾವಣಾ ಆಯೋಗ, ಜಿಲ್ಲಾಧಿಕಾರಿಗೆ ತಿಳಿಸಿದರೂ ಪರಿಗಣಿಸುತ್ತಿಲ್ಲ. ಇದರಿಂದ ಸಾಕಷ್ಟು ಜನ ಮತದಾನದಿಂದ ವಂಚಿತರಾಗಲಿದ್ದಾರೆ. ಆದ್ದರಿಂದ ಬೂತ್ ಮಟ್ಟದ ಬದಲು, ಮತದಾರರ ಪಟ್ಟಿಯ ಪ್ರತಿ ಪುಟಗಳ ಆಧಾರದಲ್ಲಿ ಪರಿಶೀಲನೆ ನಡೆಸಬೇಕು’ ಎಂದುಒತ್ತಾಯಿಸಿದರು.

ADVERTISEMENT

‘ಮತದಾರರ ಪಟ್ಟಿ ಪರಿಷ್ಕರಣೆಯ ಕಾರ್ಯ ಪ್ರಾಮಾಣಿಕವಾಗಿ ಆಗಬೇಕು. ಸ್ಥಳೀಯ ನಾಯಕರ ಜತೆ ಸಮನ್ವಯತೆ ಸಾಧಿಸಿ, ಮಾಹಿತಿ ಪಡೆಯಬೇಕು. ಬಿಜೆಪಿಯ ಕುಮ್ಮಕ್ಕಿನಿಂದಲೇ ಹೆಸರುಗಳನ್ನು ಅಳಿಸಿ ಹಾಕಲಾಗುತ್ತಿದೆ. ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿ ಬಿಎಲ್‌ಒಗಳ ಜತೆ ತೆರಳಲು ಕಾಂಗ್ರೆಸ್ ಕಾರ್ಯಕರ್ತರು ಸಿದ್ಧರಿದ್ದಾರೆ. ಜತೆಗೆ ಪರಿಷ್ಕರಣೆ ಅವಧಿಯನ್ನು ವಿಸ್ತರಿಸಬೇಕು’ ಎಂದುಮನವಿ ಮಾಡಿದರು.

‘ಅತಿಯಾದ ಮಳೆಯಿಂದ ಜಿಲ್ಲೆಯ 10 ಸಾವಿರಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಆದರೆ, ಸರಿಯಾಗಿ ಸಮೀಕ್ಷೆ ನಡೆಸದೇ, ಸಂತ್ರಸ್ತರಿಗೆ ಅನ್ಯಾಯ ಮಾಡಲಾಗಿದೆ. ಮಳೆಯಿಂದ ಶೇ 26ಕ್ಕೂ ಹೆಚ್ಚು ಹಾನಿಯಾದ ಮನೆಗಳಿಗೆ ₹5 ಲಕ್ಷ ಹಾಗೂ ಶೇ 26ಕ್ಕಿಂತ ಕಡಿಮೆ ಹಾನಿಯಾದ ಮನೆಗಳಿಗೆ ₹3 ಲಕ್ಷ ಪರಿಹಾರ ಒದಗಿಸುವ ನಿಯಮವಿದೆ. ಆದರೆ, ಜಿಲ್ಲೆಯಲ್ಲಿ ಅದು ಪಾಲನೆಯಾಗಿಲ್ಲ. ಜಿಲ್ಲೆಯ ಶೇ 70 ಮನೆಗಳಿಗೆ ಪರಿಹಾರ ದೊರೆತಿಲ್ಲ. ಹಲವರಿಗೆ ಪೂರ್ಣ ಪ್ರಮಾಣದ ಪರಿಹಾರದ ಅನುದಾನ ಜಮೆಯಾಗಿಲ್ಲ. ಈ ಸಂಬಂಧ ಸಾಕಷ್ಟು ಪ್ರತಿಭಟನೆ ನಡೆಸಿದರೂ ಜಿಲ್ಲಾಡಳಿತವಾಗಲಿ, ಸರ್ಕಾರವಾಗಲಿ ಕ್ಯಾರೆ ಎನ್ನುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಐ.ಜಿ. ಸನದಿ, ಶಿವಾನಂದ ಹೊಳೆಹಡಗಲಿ, ಭೀಮಪ್ಪ ಕಸಾಯಿ, ದಾಕ್ಷಾಯಿಣಿ, ವಿರುಪಾಕ್ಷಪ್ಪ ಕೊಂಗವಾಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.