ನವಲೂರು ಬಳಿಯ ಮಾವಿನ ತೋಟ
ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ಹುಬ್ಬಳ್ಳಿ: ಮಾವಿನ ಋತು ಬರುತ್ತಿದ್ದಂತೆ ಧಾರವಾಡದ ಸಿಹಿಯಾದ ಕಲ್ಮಿ, ಸವಿಯಾದ ಆಪೂಸ್ ಮಾವಿನ ಹಣ್ಣುಗಳು ಕೈಬೀಸಿ ಕರೆಯುತ್ತವೆ. ಮಾವಿನ ಹಣ್ಣಿನ ಸೀಕರಣೆಗೆ ನೆನಪಿಗೆ ಬರುವುದೇ ಈ ಮಾವಿನ ಹಣ್ಣುಗಳು. ಈ ವರ್ಷ ಸಾಕಷ್ಟು ಮಳೆ, ಹದವಾದ ಚಳಿ, ಈಗಷ್ಟೇ ಚುರುಗುಡುವ ಬಿಸಿಲು ಆರಂಭವಾಗಿದ್ದು ಮಾವಿನ ಹೂಗಳಿಗೆ ಸದ್ಯಕ್ಕಂತೂ ಅನುಕೂಲಕರ ವಾತಾವರಣವಿದೆ.
ಜಿಲ್ಲೆಯಲ್ಲಿ ಈ ವರ್ಷ ಅಂದಾಜು 9 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗಿದೆ. 36 ಸಾವಿರ ಮೆಟ್ರಿಕ್ ಟನ್ ಫಸಲನ್ನು ನಿರೀಕ್ಷೆ ಮಾಡಲಾಗಿದೆ ಎಂದು ತೋಟಗಾರಿಕೆ ಇಲಾಖೆ ತಿಳಿಸಿದೆ.
ಕಳೆದ ವರ್ಷ ಮಳೆಗಾಲ ಕೈಕೊಟ್ಟು, ಸುಡು ಬೇಸಿಗೆಯ ಪರಿಣಾಮ ಮಾವಿನ ಬೆಳೆಯಲ್ಲಿ ಭಾರೀ ಕುಸಿತವಾಗಿತ್ತು. ಮಾವಿನ ಫಸಲು ಕೂಡ ತಡವಾಗಿ ಬಂದ ಕಾರಣ ಮಾವಿನ ಬೆಳೆಗಾರರು ಪಡಿಪಾಟಲು ಪಟ್ಟಿದ್ದರು. ಆದರೆ ಈ ಬಾರಿ ಫಲಸಿಗೆ ಹದವಾದ ಉಷ್ಣತೆ, ಚಳಿ, ಇಬ್ಬನಿ ಕಡಿಮೆಯ ವಾತಾವರಣವಿದೆ. ಆದಾಗ್ಯೂ ಕೆಲವೆಡೆ ಮಾವಿನ ತೋಟದಲ್ಲಿ ಅಷ್ಟಾಗಿ ಹೂಬಿಟ್ಟಿಲ್ಲ; ಮತ್ತೇನಾದರೂ ಚಳಿ ಹೆಚ್ಚಿಯೋ ಇಲ್ಲ. ಮಳೆ ಹನಿಸಿದರೆ ಇದ್ದ ಹೂಗೊಂಚಲು ಮುದುಡಿ ಹೋದಾವು ಎಂಬ ಆತಂಕವೂ ರೈತರಲ್ಲಿದೆ.
ಜಿಲ್ಲೆಯಲ್ಲಿ ಸಾಮಾನ್ಯವಾಗಿ ಉಷ್ಣಾಂಶ 28–36 ಡಿಗ್ರಿ ಸೆಲ್ಷಿಯಸ್ ನಲ್ಲಿರುತ್ತದೆ. ಈ ಭಾಗದ ಅರೆ ಮಲೆನಾಡು ಪ್ರದೇಶದ ನೀರು, ಹವಾಮಾನ ಇವೆಲ್ಲ ಮಾವಿನ ಬೆಳೆಗೆ ಪೂರಕವಾಗಿವೆ. ವಿಶೇಷವಾಗಿ ಆಲ್ಫಾನ್ಸೋ ತಳಿ ಬೆಳೆಯಲು ಪೂರಕ ಎನ್ನುತ್ತಾರೆ ಕೃಷಿ ತಜ್ಞರು. ಆದಾಗ್ಯೂ ಜಿಲ್ಲೆಯಲ್ಲಿ ಕೆಲ ವರ್ಷಗಳಿಂದ ಮಾವು ಬೆಳೆಯುವ ಪ್ರದೇಶಗಳು ಕಡಿಮೆಯಾಗುತ್ತಲೇ ಬಂದಿವೆ.
ಧಾರವಾಡ, ಹುಬ್ಬಳ್ಳಿ ಕಲಘಟಗಿ ಹಾಗೂ ಅಳ್ನಾವರ ತಾಲ್ಲೂಕುಗಳಲ್ಲಿ ಮಾವಿನ ಬೆಳೆ ಹೆಚ್ಚು. ಕುಂದಗೋಳ ತಾಲ್ಲೂಕಿನಲ್ಲಿ ಛಬ್ಬಿಯಲ್ಲಿ ಮಾತ್ರ ಮಾವು ಬೆಳೆಯಲಾಗುತ್ತದೆ. ಶೇ 99ರಷ್ಟು ‘ಆಪೂಸ್’ ತಳಿಯ ಮಾವನ್ನೇ ಜಿಲ್ಲೆಯಲ್ಲಿ ಪ್ರಧಾನವಾಗಿ ಬೆಳೆಯಲಾಗುತ್ತದೆ. ಇಲ್ಲಿನ ಆಪೂಸ್ ಗೆ ಹೊರ ರಾಜ್ಯ, ವಿದೇಶಗಳಲ್ಲಿಯೂ ಬಹಳ ಬೇಡಿಕೆ. ಕಲ್ಮಿ, ದಶೇರಿ, ತೋತಾಪುರಿ, ಮಲ್ಲಿಕಾ, ಆಲ್ಫಾನ್ಸೋ ಹೆಚ್ಚಾಗಿ ಬೆಳೆಯುವ ಮಾವಿನ ತಳಿಗಳಾದರೂ ಆಲ್ಫಾನ್ಸೋ, ಕಲ್ಮಿಗೆ ಗ್ರಾಹಕರಿಂದ ಬೇಡಿಕೆ ಹೆಚ್ಚು. ಹೀಗಾಗಿ ಇವೆರಡು ತಳಿ ಬೆಳೆಯುವ ಪ್ರಮಾಣವೂ ಹೆಚ್ಚು.
‘ಕಳೆದ ಬಾರಿಗಿಂತ ಈ ಬಾರಿ ಈ ಭಾಗದಲ್ಲಿ ಮಾವಿನ ಫಸಲಿಗೆ ಹದವಾದ ವಾತಾವರಣವಿದೆ. ಕಳೆದ ಬಾರಿ ಬಿರು ಬಿಸಿಲು ಜೊತೆಗೆ ಫಸಲು ತಡವಾಗಿದ್ದರಿಂದ ಮಾವಿನ ಇಳುವರಿಯೂ ಕುಂಠಿತವಾಗಿತ್ತು. ರೈತರಿಗೂ ತೊಂದರೆಯಾಗಿತ್ತು. ಆದರೆ ಈ ಬಾರಿ ಪೂರಕ ವಾತಾವರಣವಿದೆ’ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಕಾಶಿನಾಥ ಭದ್ರಣ್ಣವರ.
ಸದ್ಯಕ್ಕಂತೂ ಧಾರವಾಡ ಜಿಲ್ಲೆಯಲ್ಲಿ ಉತ್ತಮ ವಾತಾವರಣವಿದೆ. ಈ ವರ್ಷ ಉತ್ತಮ ಮಾವಿನ ಫಸಲನ್ನು ನಿರೀಕ್ಷಿಸಬಹುದು.–ಕಾಶೀನಾಥ ಭದ್ರಣ್ಣವರ, ಉಪನಿರ್ದೇಶಕ, ತೋಟಗಾರಿಕಾ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.