ADVERTISEMENT

ಹುಬ್ಬಳ್ಳಿ: ಮಹದಾಯಿಗಾಗಿ ಒಗ್ಗಟ್ಟಿನ ಮಂತ್ರ

ಹುಬ್ಬಳ್ಳಿಯಲ್ಲಿ ಮೊದಲ ಬಾರಿಗೆ ನಡೆದ ಪಕ್ಷಾತೀತ ಜನಪ್ರತಿನಿಧಿಗಳ ಸಭೆ, ರೈತರಲ್ಲಿ ಹೊಸ ಆಶಾಭಾವನೆ

​ಪ್ರಜಾವಾಣಿ ವಾರ್ತೆ
Published 6 ಜನವರಿ 2020, 10:45 IST
Last Updated 6 ಜನವರಿ 2020, 10:45 IST
ಲೋಕನಾಥ ಹೆಬಸೂರು
ಲೋಕನಾಥ ಹೆಬಸೂರು   

ಹುಬ್ಬಳ್ಳಿ:ಮಹದಾಯಿ ನದಿ ನೀರನ್ನು ಮಲಪ್ರಭೆಗೆ ಹರಿಸುವ ಕಳಸಾ ಬಂಡೂರಿ ನಾಲಾ ಜೋಡಣೆ ಯೋಜನೆ ಕುರಿತು ಚರ್ಚಿಸಲು ಮೊದಲ ಬಾರಿಗೆ ನಗರದಲ್ಲಿ ನಡೆದ ಮಲಪ್ರಭಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಪಕ್ಷಾತೀತ ಜನಪ್ರತಿನಿಧಿಗಳ ಸಭೆಯಲ್ಲಿ ಎಲ್ಲ ನಾಯಕರು ಒಗ್ಗಟ್ಟಿನ ಮಂತ್ರ ಜಪಿಸಿದರು.

ಸಭೆಗೆ ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಅವರು ಮುಂದಾಳತ್ವ ವಹಿಸಿಕೊಂಡಿದ್ದರು. ಆದ್ದರಿಂದ ಹೊರಟ್ಟಿ ಅವರು ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯ ಜಿಲ್ಲೆಗಳಲ್ಲಿ ಪೂರ್ವಭಾವಿ ಸಭೆ ನಡೆಸಿ ಎಲ್ಲ ಜಿಲ್ಲೆಗಳ ನಾಯಕರನ್ನು ಭಾನುವಾರ ಇಲ್ಲಿನ ಸರ್ಕಿಟ್‌ ಹೌಸ್‌ನಲ್ಲಿ ಆಯೋಜನೆಯಾಗಿದ್ದಸಭೆಗೆ ಆಹ್ವಾನಿಸಿದ್ದರು.

ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಧಾನ ಪರಿಷತ್‌ ಸದಸ್ಯ ಎಸ್‌.ಆರ್. ಪಾಟೀಲ ‘ಮಹದಾಯಿ ಕಗ್ಗಂಟು ಪರಿಹರಿಸಲು ಎಲ್ಲರೂ ಒಂದಾಗುವುದು ಅಗತ್ಯವಿತ್ತು. ಆ ಕೆಲಸ ಈಗ ಆಗಿದೆ. ಇದೊಂದು ಐತಿಹಾಸಿಕ ಹೆಜ್ಜೆಯಾಗಿದ್ದು, ಸಮಸ್ಯೆ ಪರಿಹಾರವಾಗುವ ತನಕ ಎಲ್ಲರೂ ಒಂದಾಗಿ ಹೋರಾಟ ಮಾಡಬೇಕಿದೆ’ ಎಂದರು.

ADVERTISEMENT

ಸಚಿವ ಜಗದೀಶ ಶೆಟ್ಟರ್‌ ಮಾತನಾಡಿ ‘ಪಕ್ಷಾತೀತವಾಗಿ ಎಲ್ಲ ನಾಯಕರು ಕೆಲಸ ಮಾಡಿದರೆ ಮಹದಾಯಿ ವಿವಾದ ತಾರ್ಕಿಕ ಅಂತ್ಯ ಕಾಣುತ್ತದೆ. ಕೇಂದ್ರ ಅಧಿಸೂಚನೆ ಹೊರಡಿಸಬೇಕು ಎನ್ನುವುದು ಎಲ್ಲರ ಬೇಡಿಕೆ. ಇದಕ್ಕೆ ಇರುವ ತೊಡಕುಗಳು, ಮುಂದಿನ ಹಾದಿಗಳ ಬಗ್ಗೆ ಮತ್ತೊಮ್ಮೆ ಚರ್ಚಿಸಲಾಗುವುದು. ಸದ್ಯಕ್ಕೆ ಕಾನೂನು ತಜ್ಞರ ಸಲಹೆ ಪಡೆಯಲಾಗುವುದು’ ಎಂದು ಹೇಳಿದರು.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ‘ಸಮಸ್ಯೆಯ ವಾಸ್ತವಿಕತೆ ಅರಿತು ಕೆಲಸ ಮಾಡದರೆ ಸಮಸ್ಯೆ ಪರಿಹಾರವಾಗುತ್ತದೆ. ಪರಸ್ಪರ ಒಬ್ಬರ ಮೇಲೊಬ್ಬರನ್ನು ದೂರದೇ ಮಹದಾಯಿ ಸಲುವಾಗಿ ಮುಂದೆ ಆಗಬೇಕಾದ ಕೆಲಸಗಳ ಬಗ್ಗೆ ಚರ್ಚಿಸಿದ್ದೇವೆ. ತಜ್ಞರ ಸಭೆಯ ಬಳಿಕ ಮತ್ತೆ ಸಭೆ ಸೇರುತ್ತೇವೆ’ ಎಂದರು.

ಅನುಮತಿ ನೀಡದ್ದಕ್ಕೆ ಆಕ್ರೋಶ

ಸಭೆ ಆರಂಭಕ್ಕೂ ಮೊದಲೇ‌ ಗದಗ ಹಾಗೂ ಧಾರವಾಡ ಜಿಲ್ಲೆಯ ರೈತರು, ಹೋರಾಟಗಾರರು ಸರ್ಕಿಟ್‌ ಹೌಸ್‌ಗೆ ಬಂದು ‘ನಮಗೂ ಸಭೆಯಲ್ಲಿ ಪಾಲ್ಗೊಳ್ಳಲು ಅವಕಾಶ ಕೊಡಬೇಕು’ ಎಂದು ಆಗ್ರಹಿಸಿದರು. ಘೋಷಣೆಗಳನ್ನೂ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಆಗ ಹೋರಾಟಗಾರರ ಬಳಿ ಬಂದು ಮಾತನಾಡಿದಹೊರಟ್ಟಿ ‘ಇದು ಜನಪ್ರತಿನಿಧಿಗಳ ಸಭೆಯಾದ ಕಾರಣ ನಿಮಗೆ ಅವಕಾಶವಿಲ್ಲ. ಸಭೆಯ ಬಳಿಕ ಅಲ್ಲಿ ಚರ್ಚೆಯಾದ ವಿಷಯವನ್ನು ನಿಮಗೆ ತಿಳಿಸುತ್ತೇವೆ. ನಿಮ್ಮೊಂದಿಗೂ ಸಭೆ ಮಾಡುತ್ತೇವೆ’ ಎಂದು ಸಮಾಧಾನಪಡಿಸಿದರು. ಇದಕ್ಕೆ ಒಪ್ಪಿದ ರೈತರು ಸಭೆ ಮುಗಿಯುವ ತನಕ ಕಾದರು.

ಸಭೆ ಆರಂಭವಾದ ಬಳಿಕವೂ ಕೆಲ ಹೋರಾಟಗಾರರು ಮಾಜಿ ಶಾಸಕ ಎನ್‌.ಎಚ್‌. ಕೋನರಡ್ಡಿ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ನಮಗೂ ಸಭೆ ಒಳಗೆ ಬಿಡಬೇಕು ಎಂದು ಪೊಲೀಸರ ಜೊತೆ ಮಾತಿನ ಚಕಮಕಿ ನಡೆಸಿದರು. ಮಧ್ಯಪ್ರವೇಶಿಸಿದ ಪೊಲೀಸರು ವಾತಾವರಣ ತಿಳಿಗೊಳಿಸಿದರು.

ರೈತರ ಬಳಿ ಬಂದರು

ಸಭೆಯ ಬಳಿಕ ಎಲ್ಲ ಜನಪ್ರತಿನಿಧಿಗಳು ರೈತರ ಜೊತೆ ಸಭೆ ನಡೆಸಿ ‘ಸದ್ಯಕ್ಕೆ ಕಾನೂನು ತಜ್ಞರ ಅಭಿಪ್ರಾಯ ಪಡೆಯಲು ನಿರ್ಧರಿಸಲಾಗಿದೆ. ಸಮಸ್ಯೆ ಪರಿಹಾರವಾಗುವ ತನಕ ನೀವೆಲ್ಲರೂ ಶಾಂತರಾಗಿ ಇರಬೇಕು’ ಎಂದು ಹೊರಟ್ಟಿ ಹೇಳಿದರು. ಇದಕ್ಕೆ ಪ್ರಹ್ಲಾದ ಜೋಶಿ ದನಿಗೂಡಿಸಿದರು.

ಬಹುತೇಕ ಜನಪ್ರತಿನಿಧಿಗಳು ಗೈರು

ಮಹದಾಯಿ ನದಿ ವ್ಯಾಪ್ತಿಯ ಪ್ರದೇಶಗಳಾದಧಾರವಾಡ, ಗದಗ, ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆಗಳ ಶಾಸಕರು, ಸಚಿವರು, ಸಂಸದರು ಮತ್ತು ವಿಧಾನ ಪರಿಷತ್‌ ಸದಸ್ಯರಿಗೆ ಮಹತ್ವದ ಸಭೆಯಲ್ಲಿ ಪಾಲ್ಗೊಳ್ಳುವಂತೆ ಖುದ್ದು ಹೊರಟ್ಟಿ ಅವರೇ ಮನವಿ ಮಾಡಿ, ಪತ್ರಗಳನ್ನು ಕಳುಹಿಸಿದ್ದರು. ಆದರೂ, ಬಹುತೇಕ ಜನಪ್ರತಿನಿಧಿಗಳು ಗೈರಾಗಿದ್ದರು. ಧಾರವಾಡ ಜಿಲ್ಲೆಯ ಜನಪ್ರತಿನಿಧಿಗಳಷ್ಟೇ ಹೆಚ್ಚಿನ ಸಂಖ್ಯೆಯಲ್ಲಿದ್ದರು.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಚಿವ ಜಗದೀಶ ಶೆಟ್ಟರ್, ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಎಸ್‌.ಆರ್‌. ಪಾಟೀಲ, ಬಿಜೆಪಿ ಶಾಸಕರಾದ ಆನಂದ ಮಾಮನಿ,ಶಂಕರ ಪಾಟೀಲ ಮುನೇನಕೊಪ್ಪ, ಅಮೃತ ದೇಸಾಯಿ, ಅರವಿಂದ ಬೆಲ್ಲದ, ಕಾಂಗ್ರೆಸ್‌ ಶಾಸಕ ಪ್ರಸಾದ ಅಬ್ಬಯ್ಯ, ಜೆಡಿಎಸ್‌ನ ಮಾಜಿ ಶಾಸಕ ಎನ್‌.ಎಚ್‌. ಕೋನರಡ್ಡಿ, ವಿಧಾನ ಪರಿಷತ್‌ ಸದಸ್ಯರಾದ ಪ್ರದೀಪ ಶೆಟ್ಟರ್‌, ಶ್ರೀನಿವಾಸ ಮಾನೆ ಮಾತ್ರ ಪಾಲ್ಗೊಂಡಿದ್ದರು.

ನಾಲ್ಕು ಜಿಲ್ಲೆಗಳ ವ್ಯಾಪ್ತಿಯಲ್ಲಿ ಏಳು ಜನ ಶಾಸಕರು, ಐವರು ವಿಧಾನಪರಿಷತ್‌ ಸದಸ್ಯರು, ಒಬ್ಬರು ರಾಜ್ಯಸಭಾ ಸದಸ್ಯರು ಮತ್ತು ನಾಲ್ವರು ಸಂಸದರು ಗೈರಾಗಿದ್ದು ಕೆಲ ಹೋರಾಟಗಾರರ ಬೇಸರಕ್ಕೆ ಕಾರಣವಾಯಿತು.

ಈ ಬಗ್ಗೆ ಪ್ರತಿಕ್ರಿಯಿಸಿದ ಹೊರಟ್ಟಿ ‘ಎಲ್ಲ ಜನಪ್ರತಿನಿಧಿಗಳಿಗೂ ಆಹ್ವಾನ ನೀಡಲಾಗಿತ್ತು. ಅನಿವಾರ್ಯ ಕಾರಣಗಳಿಂದ ಕೆಲವರು ಬಂದಿಲ್ಲ. ಆದರೆ, ಅವರು ಸಭೆಯಲ್ಲಿ ನೀವು ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧರಾಗಿದ್ದೇವೆ ಎಂದು ತಿಳಿಸಿದ್ದಾರೆ. ಅನೇಕ ಶಾಸಕರು ನಮ್ಮ ನಡೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಬಾದಾಮಿ ಶಾಸಕ ಸಿದ್ದರಾಮಯ್ಯ ಅವರು ಪತ್ರ ಬರೆದು ಒಪ್ಪಿಗೆ ನೀಡಿದ್ದಾರೆ. ಮುಂದಿನ ಸಭೆಯಲ್ಲಿಮಲಪ್ರಭಾ ಅಚ್ಚುಕಟ್ಟು ಪ್ರದೇಶ ಎಲ್ಲ ಜನಪ್ರತಿನಿಧಿಗಳು ಪಾಲ್ಗೊಳ್ಳುತ್ತಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.