ADVERTISEMENT

ಬಿಡಾಡಿ ದನ, ಹಂದಿಗಳ ಮಾಲೀಕರಿಗೆ ಎಚ್ಚರಿಕೆ

ನಿಯಂತ್ರಣಕ್ಕೆ ಮೂರು ತಿಂಗಳ ಗಡುವು; ಮೇಯರ್ ರಾಮಪ್ಪ ಬಡಿಗೇರ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2024, 16:10 IST
Last Updated 24 ಸೆಪ್ಟೆಂಬರ್ 2024, 16:10 IST
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರ ಸಭಾಭವನದಲ್ಲಿ ಮಂಗಳವಾರ ಪಾಲಿಕೆ ಅಧಿಕಾರಿಗಳು, ಸದಸ್ಯರ ಜೊತೆ ಬಿಡಾಡಿ ಜಾನುವಾರುಗಳು ಮತ್ತು ಹಂದಿಗಳ ಮಾಲೀಕರ ಸಭೆಯಿತು.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರ ಸಭಾಭವನದಲ್ಲಿ ಮಂಗಳವಾರ ಪಾಲಿಕೆ ಅಧಿಕಾರಿಗಳು, ಸದಸ್ಯರ ಜೊತೆ ಬಿಡಾಡಿ ಜಾನುವಾರುಗಳು ಮತ್ತು ಹಂದಿಗಳ ಮಾಲೀಕರ ಸಭೆಯಿತು.    

ಹುಬ್ಬಳ್ಳಿ: ‘ಬಿಡಾಡಿ ದನಗಳು, ಹಂದಿಗಳನ್ನು ಅವುಗಳ ಮಾಲೀಕರು ಸಾರ್ವಜನಿಕ ಸ್ಥಳಗಳಲ್ಲಿ ಬಿಡಬಾರದು. ತಮ್ಮ ಅಧೀನದಲ್ಲಿ ಇಟ್ಟುಕೊಳ್ಳಬೇಕು’ ಎಂದು ಮೇಯರ್ ರಾಮಪ್ಪ ಬಡಿಗೇರ ಸೂಚನೆ ನೀಡಿದರು.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರ ಸಭಾಭವನದಲ್ಲಿ ಮಂಗಳವಾರ ನಡೆದ ಬಿಡಾಡಿ ಜಾನುವಾರುಗಳು ಮತ್ತು ಹಂದಿಗಳ ಮಾಲೀಕರ ಸಭೆಯಲ್ಲಿ ಅವರು ಮಾತನಾಡಿದರು.

‘ಮೂರು ತಿಂಗಳ ಕಾಲಾವಕಾಶ ನೀಡಲಾಗಿದ್ದು, ಅಷ್ಟರಲ್ಲಿ ಹತೋಟಿಯಲ್ಲಿ ಇಟ್ಟುಕೊಳ್ಳಬೇಕು. ಮೂರು ತಿಂಗಳ  ನಂತರ ಬಿಡಾಡಿ ದನಗಳು, ಹಂದಿಗಳು ಸಾರ್ವಜನಿಕ ಸ್ಥಳಗಳಲ್ಲಿ ಕಂಡು ಬಂದರೆ ನಿಯಮಾನುಸಾರ ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಸಿದರು.

ADVERTISEMENT

ಮಹಾನಗರ ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ಮಾತನಾಡಿ, ‘ನಗರದ ಪ್ರಮುಖ ರಸ್ತೆಗಳು, ವೃತ್ತ, ಆಟದ ಮೈದಾನ, ಮಾರುಕಟ್ಟೆ, ಉದ್ಯಾನ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಬಿಡಾಡಿ ದನಗಳು ಮತ್ತು ಹಂದಿಗಳು ಹೆಚ್ಚು ಕಂಡುಬರುತ್ತಿವೆ. ಇದರಿಂದ ಪಾದಚಾರಿಗಳು, ಮಕ್ಕಳು, ವೃದ್ಧರು, ವಾಹನ ಸವಾರರಿಗೆ ತೊಂದರೆಯಾಗುತ್ತಿದೆ’ ಎಂದರು.

‘ಬಿಡಾಡಿ ದನಗಳು ಮತ್ತು ಹಂದಿಗಳಿಂದ ಪ್ರಾಣಿ ಜನ್ಯ ರೋಗಗಳು ಬರುವ ಸಾಧ್ಯತೆ ಇದೆ. ಈ ಕುರಿತು ಸಾರ್ವಜನಿಕರು ಮತ್ತು ರೈತರು ಪಾಲಿಕೆಯ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಿದ್ದಾರೆ’ ಎಂದು ಹೇಳಿದರು.

‘ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಹಂದಿಗಳ ಸಾಕಾಣಿಕೆದಾರರಿಗೆ ಸಾರ್ವಜನಿಕ ಸ್ಥಳಗಳಲ್ಲಿ ಹಂದಿಗಳನ್ನು ಬಿಡಬಾರದು ಎಂದು ಎಚ್ಚರಿಕೆ ನೀಡಿದ್ದರೂ ಕ್ರಮ ಕೈಗೊಂಡಿಲ್ಲ’ ಎಂದರು.

ಹಂದಿ ಮಾಲೀಕರು ಮಾತನಾಡಿ, ಹಂದಿಗಳನ್ನು ಹತೋಟಿಯಲ್ಲಿಟ್ಟುಕೊಳ್ಳಲು ಮೂರು ತಿಂಗಳ ಸಮಯ ನೀಡಬೇಕು ಎಂದು ಮನವಿ ಮಾಡಿದರು.

ಮಹಾನಗರ ಪಾಲಿಕೆ ಸದಸ್ಯೆ ಸುವರ್ಣಾ ಕಲ್ಲಕುಂಟ್ಲ ಮಾತನಾಡಿದರು. ಪಾಲಿಕೆ ಆರೋಗ್ಯಾಧಿಕಾರಿ ಶ್ರೀಧರ ದಂಡಪ್ಪನವರ, ಉಪ ಮೇಯರ್‌ ದುರ್ಗಮ್ಮ ಬಿಜವಾಡ, ವಿರೋಧ ಪಕ್ಷ ನಾಯಕ ರಾಜಶೇಖರ ಕಮತಿ, ಇಕ್ಬಾಲ ನವಲೂರ, ಆರಿಫ್ ಭದ್ರಾಪುರ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.