
ಹುಬ್ಬಳ್ಳಿ: ‘ಆರು ತಿಂಗಳಲ್ಲಿ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳಿಸದಿದ್ದರೆ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್., ಹೇಳಿದರು.
ನಗರದ ಹೊಸೂರು ವೃತ್ತದಿಂದ ಚನ್ನಮ್ಮ ವೃತ್ತದವರೆಗೆ ಬುಧವಾರ ಕಾಲ್ನಡಿಗೆಯಲ್ಲಿ ತೆರಳಿ ಮೇಲ್ಸೇತುವೆ ಕಾಮಗಾರಿ ವೀಕ್ಷಿಸಿದ ಅವರು, ಅಧಿಕಾರಿಗಳಿಂದ ಮಾಹಿತಿ ಪಡೆದರು.
‘ಕಾಮಗಾರಿ ಪರಿಶೀಲಿಸಿದ್ದು, ಪೂರ್ಣಗೊಳಿಸಲು ಗರಿಷ್ಠ ಆರು ತಿಂಗಳ ಗಡುವು ನೀಡಲಾಗಿದೆ. ಮುಂದಿನ ವಾರ ಈ ಬಗ್ಗೆ ಅಧಿಕಾರಿಗಳ ಸಭೆ ನಡೆಸಿ ಚರ್ಚಿಸಲಾಗುವುದು’ ಎಂದರು.
‘ನಗರದ ಒಳಭಾಗದಲ್ಲಿ ಕಾಮಗಾರಿ ನಡೆಯುತ್ತಿರುವುದರಿಂದ ಸಾಕಷ್ಟು ಸಮಸ್ಯೆಗಳು ಎದುರಾಗುತ್ತವೆ. ಎಲ್ಲವನ್ನೂ ಸರಿಪಡಿಸಿಕೊಂಡು ಕಾಮಗಾರಿ ಮುಂದುವರಿಸಬೇಕಿದೆ’ ಎಂದು ಹೇಳಿದರು.
‘ಎಲ್ಲ ಇಲಾಖೆಗಳ ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡುತ್ತಿದ್ದಾರೆ. ಹೆಚ್ಚುವರಿ ಸಿಬ್ಬಂದಿ ನಿಯೋಜನೆ, ಅಗತ್ಯ ಯಂತ್ರೋಪಕರಣಗಳೊಂದಿಗೆ ಕಾಮಗಾರಿಯನ್ನು ಇನ್ನಷ್ಟು ಚುರುಕುಗೊಳಿಸಲು ಸೂಚಿಸಲಾಗಿದೆ’ ಎಂದರು.
ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ‘ಹೊಸೂರು ವೃತ್ತದಲ್ಲಿ ನಾಲ್ಕು ಫಿಲ್ಲರ್ ನಿರ್ಮಿಸಬೇಕಿತ್ತು. ಆ ಕಾಮಗಾರಿ ಮುಗಿದಿದೆ. ಇನ್ನಿತರ ಕಾಮಗಾರಿಗೆ ಗಾಳಿ ದುರ್ಗಮ್ಮ ದೇವಸ್ಥಾನದ ಬಳಿ ಸಂಚಾರ ಬಂದ್ ಮಾಡಬೇಕು ಎಂದು ಗುತ್ತಿಗೆದಾರರು ಹೇಳಿದ್ದಾರೆ. ಲಘು ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿ, ಉಳಿದ ವಾಹನಗಳ ಸಂಚಾರ ಬಂದ್ ಮಾಡಿ, ಕಾಮಗಾರಿ ನಿರ್ವಹಿಸಲು ಸೂಚಿಸಲಾಗಿದೆೆ’ ಎಂದು ಹೇಳಿದರು.
‘ಏಪ್ರಿಲ್ ಒಳಗೆ ಕಾಮಗಾರಿ ಮುಗಿಸುವಂತೆ ಈ ಹಿಂದೆ ಗಡುವು ನೀಡಲಾಗಿತ್ತು. ಅದರಂತೆಎ ಕೆಲವೊಂದು ಕಾಮಗಾರಿಗಳನ್ನು ಮುಗಿಸಿದ್ದಾರೆ. ಇನ್ನು ಮುಂದೆ ಜನರಿಗೆ ತೊಂದರೆ ಆಗದಂತೆ ಕಾಲಮಿತಿಯಲ್ಲಿ ಕಾಮಗಾರಿ ಮುಗಿಸಬೇಕು ಎಂದು ತಾಕೀತು ಮಾಡಲಾಗಿದೆ’ ಎಂದರು.
‘ಗದಗ ರಸ್ತೆಯಲ್ಲಿನ ಕಾಮಗಾರಿ ಈಗಾಗಲೇ ಆರಂಭವಾಗಿದೆ. ಉಪನಗರ ಪೊಲೀಸ್ ಠಾಣೆ ಕಟ್ಟಡ ತೆರವು ವಿಳಂಬವಾಗಿದ್ದರಿಂದ ಕಾಮಗಾರಿ ಕುಂಠಿತವಾಗಿತ್ತು. ಈಗ ವೇಗ ದೊರೆತಿದೆ. ಮುಂದಿನ 15 ದಿನಗಳಲ್ಲಿ ಚನ್ನಮ್ಮ ವೃತ್ತದಲ್ಲಿ 80ಕ್ಕೂ ಹೆಚ್ಚು ಗರ್ಡರ್‌ಗಳನ್ನು ಅಳವಡಿಸಲಾಗುತ್ತಿದೆ’ ಎಂದು ಹೇಳಿದರು.
‘ಮೇಲ್ಸೇತುವೆ ಕಾಮಗಾರಿಯಿಂದ ದೂಳಿನ ಸಮಸ್ಯೆ ಹೆಚ್ಚಾಗಿದ್ದು, ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವುದು ಗಮನಕ್ಕೆ ಬಂದಿದೆ. ಮೇಲ್ಸೇತುವೆ ಕೆಳಗೆ ಪಾಲಿಕೆಯಿಂದ ₹7 ಕೋಟಿ ವೆಚ್ಚದಲ್ಲಿ ತಾತ್ಕಾಲಿಕ ರಸ್ತೆ ನಿರ್ಮಿಸಲು ಉದ್ದೇಶಿಸಲಾಗಿತ್ತು. ಕಾಮಗಾರಿಯಿಂದ ಮತ್ತೆ ರಸ್ತೆ ಹಾಳಾದರೆ ಹಣ ವ್ಯರ್ಥವಾಗುತ್ತದೆ. ಹೀಗಾಗಿ ಕಾಮಗಾರಿ ಮುಗಿದ ನಂತರ ಸಿ.ಸಿ ರಸ್ತೆ ನಿರ್ಮಿಸಲಾಗುವುದು’ ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಸಿ.ಡಿ., ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಾರ್ಯನಿರ್ವಾಹಕ ಎಂಜಿನಿಯರ್ ವಿ.ಎನ್.ಪಾಟೀಲ್, ಎಇಇ ಸತೀಶ ನಾಗನೂರ, ಹುಬ್ಬಳ್ಳಿ– ಧಾರವಾಡ ಮಹಾನಗರ ಪಾಲಿಕೆ ಉಪ ಆಯುಕ್ತ ವಿಜಯಕುಮಾರ್, ಹುಬ್ಬಳ್ಳಿ ಶಹರ ತಹಶೀಲ್ದಾರ್ ಮಹೇಶ ಗಸ್ತೆ ಇದ್ದರು.
‘ಸರ್ಕಾರದಲ್ಲಿ ಎಲ್ಲವೂ ಸರಿ ಇಲ್ಲ’ ‘
ಶಾಸಕರು ವಿದೇಶ ಪ್ರವಾಶಕ್ಕೆ ಹೋಗಿದ್ದು ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರ. ಇದರಲ್ಲಿ ನಾವು ತಲೆ ಹಾಕುವುದಿಲ್ಲ. ಆದರೆ ಸರ್ಕಾರದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಸ್ಪಷ್ಟವಾಗಿದೆ’ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು. ‘ಕಾಂಗ್ರೆಸ್ ಪಕ್ಷ ಮನೆಯೊಂದು ಮೂರು ಬಾಗಿಲು ಆಗುವ ನಿಟ್ಟಿನಲ್ಲಿ ಸಾಗುತ್ತಿದೆ.
ಡಿ.ಕೆ.ಶಿವಕುಮಾರ್ ಸಿದ್ದರಾಮಯ್ಯ ಮತ್ತು ಸತೀಶ ಜಾರಕಿಹೊಳಿ ಬಣಗಳ ಬಡಿದಾಟದಲ್ಲಿ ರಾಜ್ಯ ಸೊರಗುತ್ತಿದೆ’ ಎಂದರು. ‘ರಾಜ್ಯದ ಅಭಿವೃದ್ಧಿ ಸಂಪೂರ್ಣ ಸ್ಥಗಿತವಾಗಿದೆ. ಗುತ್ತಿಗೆದಾರರು ಟೆಂಡರ್‌ನಲ್ಲಿ ಭಾಗವಹಿಸಲು ಮುಂದೆ ಬರುತ್ತಿಲ್ಲ. ಗೃಹಲಕ್ಷ್ಮಿ ಯೋಜನೆಯ ₹12500 ಕೋಟಿ ಹಣವನ್ನು ಈವರೆಗೂ ಫಲಾನುಭವಿಗಳ ಖಾತೆಗೆ ಹಾಕಿಲ್ಲ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.