ADVERTISEMENT

ಹುಬ್ಬಳ್ಳಿ: ಮನರೇಗಾ ದುರ್ಬಳಕೆ; 5 ವರ್ಷದಲ್ಲಿ 275 ಪ್ರಕರಣ ದಾಖಲು

ವಿಬಿ–ಜಿ ರಾಮ್‌ ಜಿ (ಮನರೇಗಾ) ಯೋಜನೆಯ ದುರುಪಯೋಗದ ಕುರಿತು ಓಂಬುಡ್ಸ್‌ಪರ್ಸನ್‌ಗೆ ದೂರು

ಗೌರಮ್ಮ ಕಟ್ಟಿಮನಿ
Published 10 ಫೆಬ್ರುವರಿ 2026, 6:46 IST
Last Updated 10 ಫೆಬ್ರುವರಿ 2026, 6:46 IST
<div class="paragraphs"><p>ಎಫ್‌ಐಆರ್</p></div>

ಎಫ್‌ಐಆರ್

   

ಹುಬ್ಬಳ್ಳಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಮನರೇಗಾ) ದುರ್ಬಳಕೆ ಮಾಡಿಕೊಂಡ ಬಗ್ಗೆ ಜಿಲ್ಲೆಯಲ್ಲಿ 2021ರಿಂದ 2025ರ ಡಿಸೆಂಬರ್‌ವರೆಗೆ ಒಟ್ಟು 275 ಪ್ರಕರಣಗಳು ದಾಖಲಾಗಿವೆ. 249 ಪ್ರಕರಣಗಳನ್ನು ವಿಲೇವಾರಿಯಾಗಿದ್ದು, 26 ಪ್ರಕರಣಗಳು ವಿಚಾರಣಾ ಹಂತದಲ್ಲಿವೆ.

ಮನರೇಗಾ ಯೋಜನೆಯಡಿ ಕೆಲ ಕೃಷಿ ಹೊಂಡ ನಿರ್ಮಾಣ ವೇಳೆ ಜನರಿಂದ ಕೆಲಸ ಮಾಡಿಸದೇ ಯಂತ್ರಗಳನ್ನು  ಬಳಸಿ ಕಾಮಗಾರಿ ನಡೆಸಿ, ಕೂಲಿಕಾರ್ಮಿಕರ ನಕಲಿ ದಾಖಲಾತಿ ನೀಡಿ ಇಷ್ಟು ಜನ ಕೆಲಸ ಮಾಡಿದ್ದಾರೆ ಎಂದು ನಕಲಿ ಬಿಲ್ ಸೃಷ್ಟಿಸಿ ಹೆಚ್ಚಿನ ಹಣ ಪಡೆಯಲಾಗಿತ್ತು,  ಶಾಲೆ ಹಾಗೂ ಕಾಲೇಜು ಆವರಣದಲ್ಲಿ ಫೇವರ್ಸ್ ಅಳವಡಿಸದೇ, ಅಳವಡಿಸಲಾಗಿದೆ ಎಂದು ಸುಳ್ಳು ದಾಖಲೆ, ಜಮೀನಿನಲ್ಲಿ ಬದು ನಿರ್ಮಿಸಿಕೊಳ್ಳಲಾಗಿದೆ ಎಂದು ನಕಲಿ ಬಿಲ್ ಸೃಷ್ಟಿಸಿ ಲಕ್ಷಾಂತರ ರೂಪಾಯಿ ಅವ್ಯವಹಾರ ನಡೆದಿತ್ತು.

ADVERTISEMENT

ರಸ್ತೆ ದುರಸ್ತಿ, ಸಿ.ಡಿ.ನಿರ್ಮಾಣ, ದನದ ಕೊಟ್ಟಿಗೆ ಕಾಮಗಾರಿ, ಜಮೀನಿನಲ್ಲಿ ಬದು ನಿರ್ಮಾಣ, ಇಂಗು ಗುಂಡಿ ನಿರ್ಮಾಣ, ಅರಣ್ಯೀಕರಣ, ಶಾಲೆ ಆವರಣ ಅಭಿವೃದ್ಧಿ, ವಿವಿಧ ಶಾಲೆಗಳಿಗೆ ಕಾಂಪೌಂಡ್ ನಿರ್ಮಾಣ,ವಿವಿಧ ಕಾಲೇಜು ಆವರಣದಲ್ಲಿ ಫೇವರ್ಸ್‌ ಅಳವಡಿಸಿಕೊಳ್ಳುವುದು, ಕೃಷಿ ಹೊಂಡ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗಳಲ್ಲಿ ಜಿಲ್ಲೆಯ ಭೂ ತರ್ಲಘಟ್ಟ, ಮತ್ತಿಗಟ್ಟೆ, ರಾಮನಕೊಪ್ಪ, ಉಪ್ಪಿನಬೆಟಗೇರಿ, ಹಾಲಕುಸುಗಲ್, ಮನಗುಂಡಿ, ಮಾಧನಬಾವಿ, ತಡಕೋಡ, ಕೋಟಬಾಗಿ, ಬೆಣಚಿ, ಅರವಟಗಿ, ಸುಳ್ಳ, ಲೋಕುರ, ಗಳಗಿ, ಹುಲಿಕಟ್ಟಿ ಸೇರಿದಂತೆ ವಿವಿಧ ಗ್ರಾಮ ಪಂಚಾಯಿತಿಯಲ್ಲಿ ₹30ಲಕ್ಷಕ್ಕೂ ಅಧಿಕ ಹಣ ದುರ್ಬಳಕೆ ಮಾಡಿಕೊಂಡಿದ್ದು, ಅದರಲ್ಲಿ ಈವರೆಗೆ ಕೇವಲ ₹13.66 ಲಕ್ಷ ಮಾತ್ರ ವಸೂಲಿ ಮಾಡಲಾಗಿದೆ.

‘ನರೇಗಾ ಯೋಜನೆಯಡಿ ನಡೆಯುತ್ತಿದ್ದ ಅವ್ಯವಹಾರಗಳನ್ನು ತಡೆಗಟ್ಟಲು  2010ರಲ್ಲಿ ನರೇಗಾ ಓಂಬುಡ್ಸ್‌ಮನ್ ಎಂಬ ಅಧಿಕಾರಿ ನೇಮಿಸಲಾಯಿತು. ಒಂದು ವೇಳೆ ದೂರು ದಾಖಲಾದಲ್ಲಿ, ದೂರುದಾರರು ಮತ್ತು ಕಾಮಗಾರಿ ಅನುಷ್ಠಾನ ಅಧಿಕಾರಿಗಳ ವಿಚಾರಣೆ ಮಾಡಿ, ದಾಖಲೆಗಳನ್ನು ಪರಿಶೀಲಿಸಲಾಗುತ್ತದೆ. ಅಗತ್ಯ ಇದ್ದಲ್ಲಿ ಕಾಮಗಾರಿಗಳ ಸ್ಥಳಕ್ಕೆ ಭೇಟಿ ನೀಡುತ್ತೇವೆ. ಯೋಜನೆಯ ನಿಯಮ ಉಲ್ಲಂಘನೆ ಕಂಡು ಬಂದಲ್ಲಿ ಮುಂದಿನ ಕ್ರಮಕ್ಕೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗೆ ಶಿಫಾರಸು ಮಾಡುತ್ತಾರೆ. ಅವರು ಕ್ರಮ ಕೈಗೊಳ್ಳುತ್ತಾರೆ ಎಂದು ಧಾರವಾಡ ಜಿಲ್ಲಾ ಮನರೇಗಾ ಓಂಡಬುಡ್ಸ್‌ಮನ್‌ ಮಹಾರುದ್ರಪ್ಪ ಇಚ್ಚಂಗಿ ತಿಳಿಸಿದರು.

2023–24ರಲ್ಲಿ ಅತೀ ಹೆಚ್ಚು ಅಂದರೆ 82 ದೂರುಗಳು ದಾಖಲಾಗಿದ್ದವು. ಐದು ವರ್ಷದಲ್ಲಿ ಧಾರವಾಡದಲ್ಲಿ ಅತೀ ಹೆಚ್ಚು 75 ಹಾಗೂ ಅತೀ ಕಡಿಮೆ ಅಣ್ಣಿಗೇರಿಯಲ್ಲಿ 12 ‍ಪ್ರಕರಣಗಳು ದಾಖಲಾಗಿವೆ. ಕೂಲಿ ಕಾರ್ಮಿಕರಿಗೆ ಕೂಲಿ ಪಾವತಿ ವಿಳಂಬ, ನಿರುದ್ಯೋಗ ಭತ್ಯೆ ವಿಳಂಬ, ಕಾಮಗಾರಿಗಳಲ್ಲಿ ಕೂಲಿಕಾರರ ಬದಲಾಗಿ ಯಂತ್ರ ಬಳಕೆ, ದಾಖಲಾತಿಗಳ ಸರ್ಮಪಕ ನಿರ್ವಹಣೆ  ಸೇರಿದಂತೆ ಇನ್ನಿತರ ವಿಷಯಗಳಿಗೆ ಸಂಬಂಧಿಸಿದಂತೆ ಕೂಲಿಕಾರ್ಮಿಕರು ಅಥವಾ ಸಾರ್ವಜನಿಕರು ಲಿಖಿತವಾಗಿ ದೂರು ನೀಡಬಹುದು. ದೂರಿಗೆ ಇ–ಮೇಲ್ ವಿಳಾಸ: ombud.dhw@gmail.co 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.