ADVERTISEMENT

ಎಲ್ಲದಕ್ಕೂ ಸಚಿವರೇ ಬರಬೇಕಾ: ಶೆಟ್ಟರ್‌

ಸಮನ್ವಯತೆಯಿಂದ ಕೆಲಸ ಮುಗಿಸಲು ಸೂಚನೆ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2020, 15:56 IST
Last Updated 2 ನವೆಂಬರ್ 2020, 15:56 IST
ಹುಬ್ಬಳ್ಳಿಯಲ್ಲಿ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌ ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಚೇರಿ ಬಳಿ ನಡೆಯುತ್ತಿರುವ ರಸ್ತೆ ನಿರ್ಮಾಣ ಕಾಮಗಾರಿ ಪರಿಶೀಲಿಸಿದರು
ಹುಬ್ಬಳ್ಳಿಯಲ್ಲಿ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌ ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಚೇರಿ ಬಳಿ ನಡೆಯುತ್ತಿರುವ ರಸ್ತೆ ನಿರ್ಮಾಣ ಕಾಮಗಾರಿ ಪರಿಶೀಲಿಸಿದರು   

ಹುಬ್ಬಳ್ಳಿ: ಅಧಿಕಾರಿಗಳು ಬೇರೆ ಇಲಾಖೆಗಳ ಜೊತೆ ಸಮನ್ವಯತೆ ಸಾಧಿಸಿ ತ್ವರಿತವಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಇದೆಲ್ಲವನ್ನು ಹೇಳಲು ಸಚಿವರೇ ಬರಬೇಕಾ? ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌ ಅಧಿಕಾರಿಗಳ ಮೇಲೆ ಗರಂ ಆದರು.

ಸೋಮವಾರ ಅವರು ನಗರದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಪರಿಶೀಲಿಸಿದರು. ಕೋಟಿಲಿಂಗ ನಗರಲ್ಲಿ ನಡೆಯುತ್ತಿರುವ ಕುಡಿಯುವ ನೀರಿನ ಕಾಮಗಾರಿ, ನ್ಯೂ ಕಾಟನ್‌ ಮಾರ್ಕೆಟ್‌, ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಚೇರಿ ಬಳಿಯ ರಸ್ತೆ ನಿರ್ಮಾಣ, ಗೋಪನಕೊಪ್ಪ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ನಿರ್ಮಿಸುತ್ತಿರುವ ಶಾಲಾ ಕೊಠಡಿ, ಸ್ಮಾಟ್ ಸಿಟಿ ಯೋಜನೆಯಡಿ ದೇವಾಂಗ ಪೇಟೆಯ ಬಳಿ ನಿರ್ಮಿಸುತ್ತಿರುವ ಸಾರ್ವಜನಿಕ ಶೌಚಾಲಯ ಕಾಮಗಾರಿಗಳನ್ನು ಪರಿಶೀಲಿಸಿದರು.

ಬಳಿಕ ಮಾತನಾಡಿದ ಶೆಟ್ಟರ್‌ ‘ಲೋಕೋಪಯೋಗಿ ಇಲಾಖೆ ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡಬೇಕು. ಸಣ್ಣ ಸಮಸ್ಯೆಗಳ ಕಾರಣಕ್ಕೆ ವಿಳಂಬವಾಗಬಾರದು. ಪ್ರತಿ ಹಂತದಲ್ಲೂ ಖುದ್ದು ಸಚಿವರೇ ಬಂದು ಕಾಮಗಾರಿ ಚುರುಕುಗೊಳಿಸುವಂತೆ ಹೇಳುವಂತಾಗಬಾರದು. ಅನಗತ್ಯವಾಗಿ ಮರಗಳನ್ನು ಕತ್ತರಿಸಬೇಡಿ’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ADVERTISEMENT

ಗದಗ ರಸ್ತೆಯಿಂದ ಸರ್ವೋದಯ ಸರ್ಕಲ್‌ ತನಕ ₹50 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಕಾಂಕ್ರೀಟ್‌ ರಸ್ತೆ ನಿರ್ಮಾಣದ ದಾರಿಯಲ್ಲಿ ಜಲಮಂಡಳಿ ಮತ್ತು ಮಹಾನಗರ ಪಾಲಿಕೆಯ ಕೊಳವೆಗಳು ಹೋಗಿವೆ. ಇದರಿಂದ ಕಾಮಗಾರಿಗೆ ತೊಂದರೆಯಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದರು. ಸ್ಥಳಕ್ಕೆ ಎಂಜಿನಿಯರ್‌ಗಳನ್ನು ಕರೆಯಿಸಿ ಸಮಸ್ಯೆ ಪರಿಹರಿಸಿದರು. ಎರಡ್ಮೂರು ತಿಂಗಳಲ್ಲಿ ಈ ಕೆಲಸ ಮುಗಿಸಬೇಕು ಎಂದು ತಾಕೀತು ಮಾಡಿದರು.

ಪಾಲಿಕೆ ವಲಯ ಅಧಿಕಾರಿ ಎಸ್.ಬಿ. ಬೇವೂರ, ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್‌ ವಿಜಯ ಕುಮಾರ್, ಬಿಜೆಪಿ ಮುಖಂಡರಾದ ಮಲ್ಲಿಕಾರ್ಜುನ ಸಾವುಕಾರ, ಸಂತೋಷ ಚವ್ಹಾಣ, ಈಶ್ವರಗೌಡ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.