
ಅಣ್ಣಿಗೇರಿ: ‘ಗ್ರಾಮಗಳು ನಮ್ಮ ದೇಶದ ಆತ್ಮಗಳು ಇದ್ದಂತೆ. ಆತ್ಮ ಒಳ್ಳೆಯದಿದ್ದರೆ ಎಲ್ಲರೂ ಸಂತೋಷದಿಂದ ಇರುತ್ತೇವೆ. ಗ್ರಾಮಗಳ ಅಭಿವೃದ್ಧಿಯಾಗದ ಹೊರತು ದೇಶ ಅಭಿವೃದ್ಧಿ ಆಗದು’ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ಹೇಳಿದರು.
ತಾಲ್ಲೂಕಿನ ನಲವಡಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡ ಗ್ರಾಮ ಪಂಚಾಯಿತಿ ಕಟ್ಟಡವನ್ನು ಶನಿವಾರ ಉದ್ಘಾಟನೆ ಮಾಡಿ ಅವರು ಮಾತನಾಡಿದರು.
‘ಗ್ರಾಮ ಪಂಚಾಯಿತಿಯಿಂದ ಕೆಲಸಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪುವಂತೆ ಆಗಬೇಕು. ರಾಜ್ಯದಲ್ಲಿ ಗ್ರಾಮ ಸ್ವರಾಜ್, ಪಂಚಾಯತ್ ರಾಜ್ ಕಾನೂನು ಯಶಸ್ವಿಯಾಗಿ ಜಾರಿಗೆ ಬಂದಿಲ್ಲ. ಅದನ್ನು ವ್ಯಾಪಕವಾಗಿ ಅನುಷ್ಠಾನ ಮಾಡಬೇಕಾಗಿದೆ’ ಎಂದರು.
‘ಪ್ರತಿ ಮನೆಗೂ ಶೌಚಾಲಯ ನಿರ್ಮಾಣ ಮಾಡಿ, ಬಯಲು ಬಹಿರ್ದೆಸೆ ಮುಕ್ತ ಗ್ರಾಮವನ್ನಾಗಿ ಮಾಡಲು ಸ್ಥಳೀಯ ಆಡಳಿತ ಹೆಜ್ಜೆ ಇಡಬೇಕು. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಎಲ್ಲ ಜನಾಂಗದವರಿಗೆ ಸ್ಮಶಾನ, ಸಹಕಾರ ಸಂಸ್ಥೆಗಳು ಸೇರಿದಂತೆ ವಿವಿಧ ಯೋಜನೆಗಳ ಅನುಷ್ಠಾನ ಆಗಬೇಕು’ ಎಂದು ಕಿವಿಮಾತು ಹೇಳಿದರು.
‘ಪಂಚಾಯಿತಿ ವ್ಯಾಪ್ತಿಯಲ್ಲಿ ಬಾಪೂಜಿ ಸೇವಾ ಕೇಂದ್ರ ಕುಂಟುತ್ತ ಸಾಗಿವೆ. ಈ ಹಿಂದೆ ಸೇವಾ ಕೇಂದ್ರದಲ್ಲಿ 62 ಸೇವೆಗಳು ಕಾರ್ಯ ನಿರ್ವಹಿಸುತ್ತಿದ್ದವು. ಈಚಿನ ದಿನಗಳಲ್ಲಿ ಕೆಲವು ಸೇವೆಗಳು ಸ್ಥಗಿತವಾಗಿವೆ. ಎಲ್ಲ ಸೇವೆಗಳು ಜನರಿಗೆ ಪುನಃ ದೊರೆಯುವಂತೆ ಆಗಲಿ’ ಎಂದರು.
ಶಾಸಕ ಎನ್. ಎಚ್. ಕೋನರಡ್ಡಿ ಮಾತನಾಡಿ, ‘ಹೊಸ ಗ್ರಾಮ ಪಂಚಾಯಿತಿ ಕಟ್ಟಡ ಉತ್ತಮವಾಗಿದ್ದು, ಜನರಿಗೆ ಉತ್ತಮ ಸೇವೆಗಳು ದೊರೆಯಲಿ. ಮಾದರಿ ಕ್ಷೇತ್ರವನ್ನಾಗಿಸಲು ಪ್ರತಿಯೊಬ್ಬರ ಸಹಾಯ, ಸಹಕಾರ ಅಗತ್ಯ’ ಎಂದರು.
ಮಣಕವಾಡದ ಅಭಿನವ ಮೃತ್ಯುಂಜಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಸಿಇಒ ಭುವನೇಶ ಪಾಟೀಲ, ತಹಶೀಲ್ದಾರ್ ಮಂಜುನಾಥ ದಾಸಪ್ಪನವರ, ತಾಲ್ಲೂಕು ಪಂಚಾಯಿತಿ ಇಒ ಪಿ.ಆರ್. ಬಡೇಖಾನವರ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ದೇವಕ್ಕ ತಳವಾರ, ಉಪಾಧ್ಯಕ್ಷ ನಿತೀನಕುಮಾರ ಗಾಣಿಗೇರ, ಪಿಡಿಒ ಆನಂದ ನಾವಳ್ಳಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.