ADVERTISEMENT

₹5 ಸಾವಿರ ಕೋಟಿ ಹೂಡಿಕೆ, 21 ಸಾವಿರ ಉದ್ಯೋಗ ಸೃಷ್ಟಿ: ಜಗದೀಶ ಶೆಟ್ಟರ್‌

​ಪ್ರಜಾವಾಣಿ ವಾರ್ತೆ
Published 14 ಜನವರಿ 2021, 8:27 IST
Last Updated 14 ಜನವರಿ 2021, 8:27 IST
ಜಗದೀಶ ಶೆಟ್ಟರ್‌
ಜಗದೀಶ ಶೆಟ್ಟರ್‌   

ಹುಬ್ಬಳ್ಳಿ: ಇಲ್ಲಿನ ಇಟಗಟ್ಟಿ, ಮುಮ್ಮಿಗಟ್ಟಿ ಕೈಗಾರಿಕೆಗಳ ಪ್ರದೇಶಗಳಲ್ಲಿ ₹4,968 ಕೋಟಿ ಬಂಡವಾಳ ಹೂಡಿಕೆಯಾಗಲಿದ್ದು, 21 ಸಾವಿರ ಜನರಿಗೆ ಉದ್ಯೋಗವಕಾಶ ದೊರೆಯಲಿದೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಹೇಳಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೃಹ ಬಳಕೆ ಹಾಗೂ ಎಲೆಕ್ಟ್ರಾನಿಕ್ಸ್‌ ಉತ್ಪಾದಿಸುವ ಏಕಸ್‌ ಎಸ್‌ಇಝಡ್‌ ಪ್ರೈವೇಟ್‌ ಲಿಮಿಟೆಡ್‌ ಹಾಗೂ ಪ್ಯಾಕೇಜಿಂಗ್‌ ಮಟೇರಿಯಲ್ಸ್‌ ಉತ್ಪಾದಿಸುವ ಯುಫ್ಲೆಕ್ಸ್‌ ಕಂಪನಿಗೆ ಸಚಿವ ಸಂಪುಟದ ಉಪ ಸಮಿತಿ ಒಪ್ಪಿಗೆ ನೀಡಿದೆ. ಒಂದೆರಡು ದಿನಗಳಲ್ಲಿ ಅವರಿಗೆ ಕಾರ್ಯಾರಂಭದ ಪತ್ರ ನೀಡಲಾಗುವುದು ಎಂದರು.

ಏಕಸ್‌ ₹3,540 ಕೋಟಿ ಬಂಡವಾಳ ಹೂಡಿಕೆ ಮಾಡಲಿದ್ದು ಇಟಗಟ್ಟಿ ಕೈಗಾರಿಕಾ ಪ್ರದೇಶದಲ್ಲಿ 350 ಎಕರೆ ಭೂಮಿ ನೀಡಲಾಗಿದೆ. 20 ಸಾವಿರ ಜನರಿಗೆ ಉದ್ಯೋಗ ದೊರೆಯಲಿದೆ. ರೆಫ್ರಿಜರೇಟರ್, ಎಸಿ, ಸ್ಪೀಕರ್, ಹೀಟರ್, ಮಿಕ್ಸರ್, ಕ್ಯಾಮೆರಾ ಮುಂತಾದ ವಸ್ತುಗಳ ಬಿಡಿ ಭಾಗಗಳನ್ನು ಉತ್ಪಾದಿಸಲಾಗುವುದು ಎಂದರು.

ADVERTISEMENT

ಮುಮ್ಮಿಗಟ್ಟಿಯಲ್ಲಿ 50 ಎಕರೆ ಭೂಮಿಯನ್ನು ಯುಫ್ಲೆಕ್ಸ್‌ ಕಂಪನಿಗೆ ನೀಡಲಾಗಿದ್ದು, ₹1,464 ಕೋಟಿ ಬಂಡವಾಳ ಹೂಡಿಕೆ ಮಾಡಲಿದೆ. ₹1 ಸಾವಿರ ಜನರಿಗೆ ಉದ್ಯೋಗ ದೊರೆಯಲಿದೆ. ಪ್ಯಾಕೇಜಿಂಗ್‌ ಮಟೇರಿಯಲ್ಸ್‌ಗಳ ಉತ್ಪಾದನೆ ಮಾಡಲಿದೆ ಎಂದು ತಿಳಿಸಿದರು.

ಎರಡನೇ ಹಂತದ ನಗರಗಳಲ್ಲಿ ಕೈಗಾರಿಕೆಗಳು ಬರಬೇಕು ಎಂಬ ದೃಷ್ಟಿಯಿಂದ ಈ ಎರಡೂ ಕೈಗಾರಿಕೆಗಳಿಗೆ ಬಂಡವಾಳ ಹೂಡಿಕೆಯ ಮೇಲೆ ಶೇ25 ರಷ್ಟು ರಿಯಾಯ್ತಿ, ವಹಿವಾಟಿನ ಮೇಲೆ ಶೇ2 ರಷ್ಟು ಉತ್ತೇಜನ ಸಹಾಯಧನ ನೀಡಲಾಗುವುದು. ಕೌಶಲ ಬೇಡುವ ಕೆಲವು ಉದ್ಯೋಗಗಳನ್ನು ಹೊರತುಪಡಿಸಿ ಉಳಿದ ಉದ್ಯೋಗಗಳಿಗೆ ಸ್ಥಳೀಯರಿಗೆ ದೊರೆಯಲಿವೆ ಎಂದರು.

ಎಫ್ಎಂಸಿಜಿ ಕ್ಲಸ್ಟರ್‌ ಆರಂಭಿಸುವ ಬಗೆಗೂ ಈಗಾಗಲೇ ಹಣಕಾಸು ಇಲಾಖೆಗೆ ಪ್ರಸ್ತಾವ ಸಲ್ಲಿಕೆಯಾಗಿದೆ. ಮೂರು ಹಂತಗಳಲ್ಲಿ ₹7,500 ಕೋಟಿ ಹೂಡಿಕೆಯಾಗಲಿದ್ದು, 1 ಲಕ್ಷ ಜನರಿಗೆ ಉದ್ಯೋಗ ದೊರೆಯಲಿದೆ. ದಕ್ಷಿಣ ಭಾರತದ ಎಫ್‌ಎಂಸಿಜಿ ಕ್ಲಸ್ಟರ್‌ ಇದಾಗಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.