ADVERTISEMENT

ಕೊರೊನಾ ಬಗ್ಗೆ ಭಯಪಡದೆ ಜಾಗೃತರಾಗಿ: ಜಗದೀಶ ಶೆಟ್ಟರ್

ಅಂಜುಮನ್ ಸಂಸ್ಥೆಯ ಕೋವಿಡ್ ಕೇರ್ ಕೇಂದ್ರ ಉದ್ಘಾಟಿಸಿದ ಸಚಿವ ಶೆಟ್ಟರ್

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2020, 14:17 IST
Last Updated 23 ಆಗಸ್ಟ್ 2020, 14:17 IST
ಅಂಜುಮನ್ ಸಂಸ್ಥೆಯು ಆರಂಭಿಸಿರುವ ಕೋವಿಡ್ ಕೇರ್ ಕೇಂದ್ರಗಳನ್ನು ಸಚಿವ ಜಗದೀಶ ಶೆಟ್ಟರ್ ಉದ್ಘಾಟಿಸಿದರು. ಶಾಸಕರಾದ ಪ್ರಸಾದ ಅಬ್ಬಯ್ಯ, ಕುಸುಮಾವತಿ ಶಿವಳ್ಳಿ, ಜಿಲ್ಲಾಧಿಕಾರಿ ನಿತೇಶ ಪಾಟೀಲ, ಸಂಸ್ಥೆಯು ಅಧ್ಯಕ್ಷ ಯೂಸುಫ್ ಸವಣೂರ ಇದ್ದಾರೆ
ಅಂಜುಮನ್ ಸಂಸ್ಥೆಯು ಆರಂಭಿಸಿರುವ ಕೋವಿಡ್ ಕೇರ್ ಕೇಂದ್ರಗಳನ್ನು ಸಚಿವ ಜಗದೀಶ ಶೆಟ್ಟರ್ ಉದ್ಘಾಟಿಸಿದರು. ಶಾಸಕರಾದ ಪ್ರಸಾದ ಅಬ್ಬಯ್ಯ, ಕುಸುಮಾವತಿ ಶಿವಳ್ಳಿ, ಜಿಲ್ಲಾಧಿಕಾರಿ ನಿತೇಶ ಪಾಟೀಲ, ಸಂಸ್ಥೆಯು ಅಧ್ಯಕ್ಷ ಯೂಸುಫ್ ಸವಣೂರ ಇದ್ದಾರೆ   

ಹುಬ್ಬಳ್ಳಿ: ‘ವಿಶ್ವವನ್ನೇ ಕಾಡುತ್ತಿರುವ ಕೊರೊನಾ ಸೋಂಕಿಗೆ ಭಯಪಡದೆ ಜಾಗೃತರಾಗಬೇಕು. ಆಗ ಮಾತ್ರ ಸೋಂಕು ಹೆಚ್ಚಾಗಿ ಹರಡದಂತೆ ತಡೆಯಬಹುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದರು.

ಅಂಜುಮನ್ ಎ ಇಸ್ಲಾಂ ಸಂಸ್ಥೆಯು ನಗರದ ನೆಹರು ಕಾಲೇಜಿನ ಮಹಿಳಾ ಹಾಸ್ಟೆಲ್‌ನಲ್ಲಿ ಆರಂಭಿಸಿರುವ 150 ಹಾಸಿಗೆಗಳ ಕೋವಿಡ್ ಕೇರ್ ಕೇಂದ್ರವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.

‘ಕೊರೊನಾ ತಡೆಯಲು ಕೇವಲ ಸರ್ಕಾರದ ಪ್ರಯುತ್ನಗಳಷ್ಟೇ ಸಾಲದು. ಅದಕ್ಕೆ ಸಂಘ–ಸಂಸ್ಥೆಗಳು ಹಾಗೂ ಸಾರ್ವಜನಿಕರ ಸಹಕಾರವೂ ಬೇಕು. ಈ ನಿಟ್ಟಿನಲ್ಲಿ ಅಂಜುಮನ್ ಸಂಸ್ಥೆಯು ಕೋವಿಡ್ ಕೇರ್ ಕೇಂದ್ರ ಆರಂಭಿಸಿ ಎಲ್ಲರಿಗೂ ಮಾದರಿಯಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ADVERTISEMENT

‘ಸುದ್ದಿವಾಹಿನಿಗಳು ಕೊರೊನಾ ಬಗ್ಗೆ ಜನರಲ್ಲಿ ಆತಂಕ ಮೂಡಿಸದೆ, ರೋಗ ಹರಡದಂತೆ ತೆಗೆದುಕೊಳ್ಳಬೇಕಾದ ಎಚ್ಚರಿಕೆ ಕ್ರಮಗಳನ್ನು ಪ್ರಸಾರ ಮಾಡಬೇಕು’ ಎಂದು ಸಲಹೆ ನೀಡಿದರು.

ಜಿಲ್ಲಾಧಿಕಾರಿಗೆ ಮೆಚ್ಚುಗೆ
‘ಸಂಕಷ್ಟದ ಸಮಯದಲ್ಲಿ ಜಿಲ್ಲೆಗೆ ಜಿಲ್ಲಾಧಿಕಾರಿಯಾಗಿ ಬಂದ ನಿತೇಶ ಪಾಟೀಲ ಅವರು, ಕೊರೊನಾ ಹಾಗೂ ಪ್ರವಾಹದ ಸವಾಲುಗಳನ್ನು ಉತ್ತಮವಾಗಿ ನಿಭಾಯಿಸುತ್ತಿದ್ದಾರೆ. ಸರಣಿ ಸಭೆಗಳನ್ನು ಮಾಡುವ ಜತೆಗೆ, ಜಿಲ್ಲೆಯಾದ್ಯಂತ ಓಡಾಡುತ್ತಾ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ’ ಎಂದು ಜಗದೀಶ ಶೆಟ್ಟರ್ ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ‘ನನಗೆ ಸೋಂಕು ದೃಢಪಟ್ಟಾಗ ಆತಂಕಗೊಂಡಿದ್ದೆ. ಸಚಿವರಾದ ಶೆಟ್ಟರ್ ಸೇರಿದಂತೆ ಹಿರಿಯ ಮುಖಂಡರು, ಅಧಿಕಾರಿಗಳು ನೀಡಿದ ನೈತಿಕ ಸ್ಥೈರ್ಯ ನೀಡಿದರು. ಜತೆಗೆ ಕಿಮ್ಸ್‌ನಲ್ಲಿ ಸಿಕ್ಕ ಉತ್ತಮ ಚಿಕಿತ್ಸೆಯಿಂದ ಗುಣಮುಖನಾದೆ’ ಎಂದರು.

ತಮ್ಮ ಕ್ಷೇತ್ರದಲ್ಲಿ ಎರಡು ಸ್ಮಶಾನಗಳಿಗೆ ಜಾಗ ಮಂಜೂರು ಮಾಡಬೇಕು ಎಂದು ಶೆಟ್ಟರ್‌ಗೆ ಅಬ್ಬಯ್ಯ ಮನವಿ ಮಾಡಿದರು. ಪ್ಲಾಸ್ಮಾ ದಾನ ಮಾಡಿದ ಯೂಸುಫ್ ಗಾಂಜಾವಾಲ ಅವರನ್ನು ಸನ್ಮಾನಿಸಲಾಯಿತು.

ಶಾಸಕಿ ಕುಸುಮಾವತಿ ಶಿವಳ್ಳಿ, ಜಿಲ್ಲಾಧಿಕಾರಿ ನಿತೇಶ ಪಾಟೀಲ, ಉಪ ವಿಭಾಗಾಧಿಕಾರಿ ಮಹ್ಮದ ಜುಬೇರ, ಸಂಸ್ಥೆಯ ಅಧ್ಯಕ್ಷ ಯೂಸುಫ್ ಸವಣೂರ,ಉಪಾಧ್ಯಕ್ಷ ಅಲ್ತಾಫ್ ಕಿತ್ತೂರ,ಕಾರ್ಯದರ್ಶಿ ಬಷೀರ್ ಹಳ್ಳೂರ, ಸಹ ಕಾರ್ಯದರ್ಶಿ ಅಬ್ದುಲ್ ಮುನಾಫ್ ದೇವಗಿರಿ,ಮುಖಂಡರಾದ ಎ.ಎಂ. ಹಿಂಡಸಗೇರಿ, ಐ.ಜಿ. ಸನದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.