
ನವಲಗುಂದ: ‘ರೈತರ ಮೇಲಿನ ಪ್ರಕರಣಗಳನ್ನು ಹಿಂಪಡೆಯದೇ ಇರುವುದರ ಹಿಂದೆ ದುರುದ್ದೇಶ ಕೂಡಿದೆ. ಇದಕ್ಕೆಲ್ಲ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರೇ ಕಾರಣ’ ಎಂದು ರೈತ ಸೇನಾ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷರ ವೀರೇಶ ಸೊಬರದಮಠ ಆರೋಪಿಸಿದ್ದಾರೆ.
‘ಜೋಶಿ ಅವರಿಗೆ ಮಹದಾಯಿ ಯೋಜನೆ ಜಾರಿ ಮಾಡುವುದರಲ್ಲಿ ಆಸಕ್ತಿ ಇಲ್ಲವಾದರೂ ರೈತರನ್ನು ಜೈಲಿಗೆ ಕಳಿಸುವುದರಲ್ಲಿ ಆಸಕ್ತಿ ಹೆಚ್ಚಾಗಿದೆ’ ಎಂದು ಶುಕ್ರವಾರ ಪತ್ರಿಕಾ ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.
‘ನೀರಿಗಾಗಿ ಹೋರಾಟ ಮಾಡಿದ ಕುತುಬುದ್ದೀನ್ ಖಾಜಿ ಅವರನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡು ಜೈಲಿಗೆ ಕಳಿಹಿಸಿದ್ದು ಅತ್ಯಂತ ಖಂಡನೀಯ’ ಎಂದರು.
‘ಮಹದಾಯಿ– ಕಳಸಾ ಬಂಡೂರಿ ಯೋಜನೆ ಶೀಘ್ರವಾಗಿ ಜಾರಿಯಾಗಲೆಂದು ಕೇಂದ್ರ ಸರ್ಕಾರಕ್ಕೆ ಹಲವು ಬಾರಿ ಮನವಿ ಕೊಟ್ಟರೂ ನಿರ್ಲಕ್ಷ್ಯ ಮಾಡಿದ್ದರಿಂದ ರೈಲ್ ರೋಖೊ ಚಳವಳಿ ಮಾಡಲಾಯಿತು. ಅದರಲ್ಲಿ ಭಾಗವಹಿಸಿದ 500 ರೈತರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡು ವಿನಾಕಾರಣ ತೊಂದರೆ ಕೊಡುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.