ADVERTISEMENT

ನಿವೇಶನ ದುರ್ಬಳಕೆ; ಮಾಹಿತಿಗೆ ಸೂಚನೆ

ಅಧಿಕಾರಿಗಳ ಜೊತೆಗಿನ ಸಭೆಯಲ್ಲಿ ಹುಡಾ ಅಧ್ಯಕ್ಷ ಕಲಬುರ್ಗಿ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2021, 16:06 IST
Last Updated 13 ಆಗಸ್ಟ್ 2021, 16:06 IST
ಹುಬ್ಬಳ್ಳಿಯ ಹುಡಾ ಕಚೇರಿಯಲ್ಲಿ ಶುಕ್ರವಾರ ಅಧಿಕಾರಿಗಳ ಜೊತೆ ಸಭೆ ನಡೆಯಿತು
ಹುಬ್ಬಳ್ಳಿಯ ಹುಡಾ ಕಚೇರಿಯಲ್ಲಿ ಶುಕ್ರವಾರ ಅಧಿಕಾರಿಗಳ ಜೊತೆ ಸಭೆ ನಡೆಯಿತು   

ಹುಬ್ಬಳ್ಳಿ: ಅವಳಿ ನಗರಗಳ ಸಂಘ ಸಂಸ್ಥೆಗಳಿಗೆ ಹಿಂದೆ ನೀಡಲಾಗಿದ್ದ ಸಿಎ ನಿವೇಶನಗಳನ್ನು ಕೆಲವರು ದುರ್ಬಳಕೆ ಮಾಡಿಕೊಂಡಿದ್ದು, ಈ ಕುರಿತು ಮಾಹಿತಿ ಕಲೆಹಾಕುವಂತೆ ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ ಅಧಿಕಾರಿಗಳಿಗೆ ಸೂಚಿಸಿದರು.

ಪ್ರಾಧಿಕಾರಿದ ಕಚೇರಿಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು ‘ಹಿಂದೆ 375 ಸಿಎ ನಿವೇಶನಗಳನ್ನು ಹಂಚಿಕೆ ಮಾಡಲಾಗಿತ್ತು. ಅವುಗಳನ್ನು ಸಂಘ ಸಂಸ್ಥೆಗಳಿಗೆ ಬಳಕೆ ಮಾಡಿಕೊಳ್ಳದೆ ಕೆಲವರು ಮನೆ ಕಟ್ಟಿಕೊಂಡಿದ್ದಾರೆ. ಇನ್ನೂ ಕೆಲವರು ಗ್ಯಾರೇಜ್‌ ನಿರ್ಮಿಸಿಕೊಂಡಿರುವ ಮಾಹಿತಿ ಲಭ್ಯವಾಗಿದೆ. ಆದ್ದರಿಂದ ಮಾಹಿತಿ ಸಂಗ್ರಹಿಸಬೇಕು’ ಎಂದು ಹೇಳಿದರು. ಈಗ ಮತ್ತೆ 75 ಸಿಎ ನಿವೇಶನಗಳನ್ನು ಮಾರಾಟ ಮಾಡಲು ತೀರ್ಮಾನಿಸಲಾಗಿದೆ ಎಂದರು.

ಹೆಬ್ಬಳ್ಳಿ ರಸ್ತೆಯಲ್ಲಿ 20 ಎಕರೆ ಪ್ರದೇಶದಲ್ಲಿ ಶೇ 50ರ ಪಾಲುದಾರಿಕೆಯಲ್ಲಿ ಮತ್ತು ಸುಳ್ಳ ರಸ್ತೆಯಲ್ಲಿ 67 ಎಕರೆ ಪ್ರದೇಶದಲ್ಲಿ ನಿವೇಶನ ಮಾಡಲು ಹುಡಾ ಹಿಂದಿನ ಸಭೆಯಲ್ಲಿ ಚರ್ಚೆಯಾಗಿತ್ತು. ಇದರ ಬಗ್ಗೆ ಮತ್ತೊಂದು ಸಲ ಚರ್ಚೆ ನಡೆಯಿತು. ಬಳಿಕ ಅನುಮೋದನೆಗೆ ಸರ್ಕಾರಕ್ಕೆ ಕಳುಹಿಸಲು ತೀರ್ಮಾನಿಸಲಾಯಿತು.

ADVERTISEMENT

3000 ಅರ್ಜಿ: ತಡಸಿನಕೊಪ್ಪದಲ್ಲಿ ನೀಡಲು ಉದ್ದೇಶಿಸಿರುವ 275 ನಿವೇಶನಗಳಿಗೆ ಮೂರು ಸಾವಿರ ಅರ್ಜಿಗಳು ಸಲ್ಲಿಕೆಯಾಗಿವೆ.

ಈ ಕುರಿತು ಪ್ರತಿಕ್ರಿಯಿಸಿದ ನಾಗೇಶ ಕಲಬುರ್ಗಿ ‘ಡ್ರಾ ಮೂಲಕ ಲಕಮನಹಳ್ಳಿಯಲ್ಲಿ ನಿವೇಶನ ಹಂಚಿದ ರೀತಿಯಲ್ಲಿಯೇ ತಡಸಿನಕೊಪ್ಪದಲ್ಲಿಯೂ ಹಂಚಬೇಕು. ಯಾರ ಶಿಫಾರಸಿಗೂ ಮಣೆ ಹಾಕಬಾರದು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ಶಾಸಕ ಜಗದೀಶ ಶೆಟ್ಟರ್‌ ಅವರು ಸ್ಪಷ್ಟವಾಗಿ ಸೂಚಿಸಿದ್ದಾರೆ. ಪಾಲಿಕೆ ಚುನಾವಣೆ ನಡೆದರೆ ನೀತಿಸಂಹಿತೆ ಬಳಿಕ ತಡಸಿನಕೊಪ್ಪದ ನಿವೇಶನಗಳನ್ನು ಹಂಚಲಾಗುವುದು. ಇಲ್ಲವಾದರೆ 15 ದಿನಗಳ ಒಳಗೆ ಹಂಚಿಕೆ ನಡೆಯಲಿದೆ’ ಎಂದು ತಿಳಿಸಿದರು.

ಜಗದೀಶ ಶೆಟ್ಟರ್‌, ಹುಡಾ ಆಯುಕ್ತ ಎನ್.ಎಚ್‌. ಕುಮ್ಮಣ್ಣನವರ, ಸದಸ್ಯರಾದ ಸುನೀಲ ಮೊರೆ, ಮೀನಾಕ್ಷಿ ವಂಟಮುರಿ, ಚಂದ್ರಶೇಖರ ಗೋಕಾಕ, ನಗರ ಯೋಜಕ ಸದಸ್ಯ ವಿವೇಕ ಕಾರೆಕರ, ಕಾರ್ಯನಿರ್ವಾಹಕ ಎಂಜಿನಿಯರ್‌ ಎಂ. ರಾಜಶೇಖರ, ಎಚ್‌. ಪ್ರಾಣೇಶ ಹಾಗೂ ಅಧಿಕಾರಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.