
ಹುಬ್ಬಳ್ಳಿ: ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯನ್ನು ಘೋಷಿಸಲಾಗಿದ್ದು, ಕೆಪಿಸಿಸಿ ಉಪಾಧ್ಯಕ್ಷ ಮೋಹನ್ ಲಿಂಬಿಕಾಯಿ ಅವರಿಗೆ ಟಿಕೆಟ್ ಲಭಿಸಿದೆ.
ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಬಿಜೆಪಿಯ ಎಸ್.ವಿ.ಸಂಕನೂರ ಎದುರು ಪರಾಭವಗೊಂಡಿದ್ದ ಆರ್.ಎಂ.ಕುಬೇರಪ್ಪ ಸೇರಿ 15ಕ್ಕೂ ಹೆಚ್ಚು ಜನ ಕಾಂಗ್ರೆಸ್ ಟಿಕೆಟ್ ಬಯಸಿ ಅರ್ಜಿ ಸಲ್ಲಿಸಿದ್ದರು.
ಈ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾಗಿರುವ ಬಿಜೆಪಿಯ ಎಸ್.ವಿ.ಸಂಕನೂರ ಅವರ ಅವಧಿ 2026ರ ನವೆಂಬರ್‌ನಲ್ಲಿ ಕೊನೆಯಾಗಲಿದೆ. ಚುನಾವಣೆಗೆ ಇನ್ನೂ ಎಂಟು–ಹತ್ತು ತಿಂಗಳು ಇರುವ ಮುನ್ನವೇ ಕಾಂಗ್ರೆಸ್ ಅಭ್ಯರ್ಥಿಯನ್ನು ಘೋಷಿಸಿ, ಸಿದ್ಧತೆ ಆರಂಭಿಸಿದೆ.
ಸತತ ನಾಲ್ಕು ಬಾರಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಎಚ್.ಕೆ.ಪಾಟೀಲ ಅವರನ್ನು 2008ರ ಚುನಾವಣೆಯಲ್ಲಿ ಪರಾಭವಗೊಳಿಸಿದ್ದ ಮೋಹನ್ ಲಿಂಬಿಕಾಯಿ ಅವರು ಬಿಜೆಪಿಗೆ ಜಯ ತಂದುಕೊಟ್ಟಿದ್ದರು. ಅವರು ಈಗ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕಾಂಗ್ರೆಸ್‌ನಲ್ಲಿದ್ದಾರೆ. ಅವರು ಎರಡನೇ ಬಾರಿ ಈ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. 2013ರ ವಿಧಾನಸಭಾ ಚುನಾವಣೆಯಲ್ಲಿ ಕೆಜೆಪಿಯಿಂದ ಸ್ಪರ್ಧಿಸಿದ್ದ ಅವರು ಬಿಜೆಪಿಯ ಅರವಿಂದ ಬೆಲ್ಲದ ವಿರುದ್ಧ ಸೋಲು ಕಂಡಿದ್ದರು.
ಟಿಕೆಟ್ ಸಿಕ್ಕಿರುವ ಬಗ್ಗೆ ಮೋಹನ್ ಲಿಂಬಿಕಾಯಿ ಪ್ರತಿಕ್ರಿಯಿಸಿ, ‘ಪಕ್ಷದ ಎಲ್ಲ ಶಾಸಕರು, ಪದಾಧಿಕಾರಿಗಳ ಒತ್ತಾಸೆಯಿಂದ ವರಿಷ್ಠರು ನನ್ನ ಮೇಲೆ ವಿಶ್ವಾಸ ಇಟ್ಟು ಟಿಕೆಟ್ ನೀಡಿದ್ದಕ್ಕೆ ಖುಷಿಯಾಗಿದೆ’ ಎಂದರು.
‘ಈ ಕ್ಷೇತ್ರವು ಉತ್ತರ ಕನ್ನಡ, ಧಾರವಾಡ, ಹಾವೇರಿ ಮತ್ತು ಗದಗ ಜಿಲ್ಲೆ ಒಳಗೊಂಡಿದೆ. ಈ ಜಿಲ್ಲೆಗಳಲ್ಲಿರುವ 23 ಶಾಸಕರ ಪೈಕಿ, ಐವರು ಶಾಸಕರು ಮಾತ್ರ ಬಿಜೆಪಿಯವರು. ಹೀಗಾಗಿ ಪಕ್ಷದ ಎಲ್ಲ ಶಾಸಕರು ನನ್ನ ಗೆಲುವಿಗೆ ಶ್ರಮಿಸುವರು’ ಎಂದು ಹೇಳಿದರು.
‘ನಮ್ಮ ಸರ್ಕಾರ ಜಾರಿಗೆ ತಂದ ಯುವನಿಧಿ ಯೋಜನೆಯಿಂದ ಹೆಚ್ಚು ಅನುಕೂಲವಾಗಲಿದೆ. ಯೋಜನೆಯ ಫಲಾನುಭವಿಗಳು ನನ್ನನ್ನು ಬೆಂಬಲಿಸುವ ವಿಶ್ವಾಸವಿದೆ. ನಾನು ವಕೀಲರ ಪರಿಷತ್ ಸದಸ್ಯ, ಉಪಾಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ’ ಎಂದರು.
‘ಕ್ಷೇತ್ರದಲ್ಲಿ ಪಕ್ಷದ ಕಾರ್ಯಕರ್ತರ ಬಹುದೊಡ್ಡ ಪಡೆ ಇದೆ. ಈ ಬಾರಿ ಹೆಚ್ಚಿನ ಮತದಾರರ ನೋಂದಣಿಯಾಗಿದೆ. ಕ್ಷೇತ್ರ ಮತ್ತೆ ಕಾಂಗ್ರೆಸ್ ತೆಕ್ಕೆಗೆ ಬರಲಿದೆ. ಕೋವಿಡ್ ಕಾರಣಕ್ಕೆ 2020ರಲ್ಲಿ ಐದು ತಿಂಗಳು ಚುನಾವಣೆಯನ್ನು ಮುಂದೂಡಲಾಗಿತ್ತು. ಈ ಬಾರಿ ಜೂನ್‌ನಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ’ ಎಂದು ತಿಳಿಸಿದರು.
ಮೋಹನ್ ಲಿಂಬಿಕಾಯಿ ಪರಿಚಯ
ಲಿಂಗಾಯತ ಸಮಾಜದ ಮೋಹನ್ ಲಿಂಬಿಕಾಯಿ ಎಂ.ಎ. ಎಲ್‌ಎಲ್‌ಬಿ ಪದವೀಧರರು. ಹುಬ್ಬಳ್ಳಿಯ ಮಂಜುನಾಥ ನಗರದ ಅಪೂರ್ವ ನಗರ ಬಡಾವಣೆಯ ನಿವಾಸಿ. ಹೈಕೋರ್ಟ್ ವಕೀಲರಾಗಿ ಜೆಎಸ್‌ಎಸ್ ಸಕ್ರಿ ಕಾನೂನು ಕಾಲೇಜಿನ ಪ್ರಾಧ್ಯಾಪಕರಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಮತ್ತು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾಗಿ ಕೆಲಸ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.