ADVERTISEMENT

ಅಣ್ಣಿಗೇರಿ: ಮಂಗಗಳ ಹಾವಳಿಗೆ ತತ್ತರಿಸಿದ ಜನ !

​ಪ್ರಜಾವಾಣಿ ವಾರ್ತೆ
Published 12 ಜುಲೈ 2025, 5:13 IST
Last Updated 12 ಜುಲೈ 2025, 5:13 IST
ಅಣ್ಣಿಗೇರಿ ತಾಲ್ಲೂಕಿನ ಹಳ್ಳಿಕೇರಿ ಗ್ರಾಮದ ಮನೆಯೊಂದರ ಮುಂದೆ ಕಾಣಿಸಿಕೊಂಡ ಮಂಗಗಳ ಗುಂಪು
ಅಣ್ಣಿಗೇರಿ ತಾಲ್ಲೂಕಿನ ಹಳ್ಳಿಕೇರಿ ಗ್ರಾಮದ ಮನೆಯೊಂದರ ಮುಂದೆ ಕಾಣಿಸಿಕೊಂಡ ಮಂಗಗಳ ಗುಂಪು   

ಅಣ್ಣಿಗೇರಿ: ತಾಲ್ಲೂಕಿನ ಹಳ್ಳಿಕೇರಿ ಗ್ರಾಮದಲ್ಲಿ ಮಂಗಗಳ ಹಾವಳಿ ಹೆಚ್ಚಾಗಿದ್ದು, ಜನರು ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ. ಮನೆಯ ಅಂಗಳದಲ್ಲಿ, ಮಾಳಿಗೆ ಮೇಲೆ ತಂಡೋಪತಂಡವಾಗಿ ಬರುವ ಮಂಗಗಳು ಜನರ ಮೇಲೆ ಎರಗುತ್ತಿವೆ, ಕಣ್ಣಿಗೆ ಕಂಡಿದ್ದನ್ನು ಕಿತ್ತುಕೊಂಡು ಹೋಗುತ್ತಿವೆ.

ಕೆಲವೊಮ್ಮೆ ಮನೆಯ ಒಳಗಡೆಯೂ ನುಗ್ಗಿ ಗದ್ದಲ ಎಬ್ಬಿಸಿವೆ. ಮಕ್ಕಳು, ಮಹಿಳೆಯರಿಗೆ ಹೆದರಿಕೆ ಉಂಟು ಮಾಡುತ್ತಿವೆ.  ಮಂಗಗಳ ಕಾಟದಿಂದಾಗಿ ಮಕ್ಕಳು ಶಾಲೆಗೆ ಹೋಗುವುದಕ್ಕೂ ಹೆದರುತ್ತಿದ್ದಾರೆ. ರಸ್ತೆಯ ಮೇಲೆ ದ್ವಿಚಕ್ರ ಸವಾರರು ಸಂಚರಿಸುವುದಕ್ಕೂ ಕಷ್ಟವಾಗುತ್ತಿದೆ. ರಸ್ತೆಯ ಒಂದು ಬದಿಯಿಂದ ಇನ್ನೊಂದು ಬದಿಗೆ ಮಂಗಗಳು ಜಿಗಿಯುತ್ತ ಬರುವುದರಿಂದ ಹಲವರು ಬೈಕ್‌ನಿಂದ  ಬಿದ್ದು ಗಾಯಗೊಂಡಿರುವ ಘಟನೆಗಳು ನಡೆದಿವೆ.

ಗ್ರಾಮದ ಮೊಬೈಲ್ ಟವರ್, ದೇವಸ್ಥಾನ ಇನ್ನಿತರ ಸ್ಥಳಗಳಲ್ಲಿ ರಾತ್ರಿ ಕಳೆಯುವ ಮಂಗಗಳು ಹಗಲಿನಲ್ಲಿ ಮನೆಗಳ ಮಾಳಿಗೆಯಿಂದ ಮಾಳಿಗೆಗೆ ಜಿಗಿಯುತ್ತ ನಾಗರಿಕರಿಗೆ ಕಿರುಕುಳ ನೀಡುತ್ತಿವೆ. ಈ ಮಂಗಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಹಿಡಿದು ಅರಣ್ಯ ಪ್ರದೇಶದಲ್ಲಿ ಬಿಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. 

ADVERTISEMENT

'ಮಹಿಳೆಯರು ಮಾಳಿಗೆ ಮೇಲೆ ಬಟ್ಟೆ ಒಣಗಿಸುವುದಕ್ಕೂ ಹೋಗಲಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಮೂರು-ನಾಲ್ಕು ಮಂಗಗಳು ಗುಂಪು ಗೂಡಿ ಹೆದರಿಸುತ್ತಿವೆ. ಮನೆಯಂಗಳದಲ್ಲಿ ಬೆಳೆಸಿದ ಹಣ್ಣು, ಹೂವಿನ ಗಿಡಗಳು ಸಂಪೂರ್ಣವಾಗಿ ತಿಂದು ಬಿಸಾಕುತ್ತಿವೆ. ಕೇಬಲ್‌ ಡಿಶ್‌ಗಳನ್ನು ಹಾಳುಮಾಡುತ್ತಿವೆ. ನಿತ್ಯವೂ ಮಂಗಗಳ ಉಪಟಳದಿಂದ ವಸ್ತು ಹಾಳಾಗುತ್ತಿದೆ. ತಕ್ಷಣ ನಾಡಿನಿಂದ ಕಾಡಿಗೆ ಸೇರಿಸುವ ಕೆಲಸ ಮಾಡಬೇಕು' ಎಂದು ಗ್ರಾಮಸ್ಥ ಮಾಲಿಂಗವ್ವ ಹೂಗಾರ ಕೋರಿದರು.

ಅರಣ್ಯ ಇಲಾಖೆ ಹಾಗೂ ಗ್ರಾಮ ಪಂಚಾಯ್ತಿಗೆ ಗ್ರಾಮದಲ್ಲಿ ಮಂಗನ ಹಾವಳಿ ತಡೆಗಟ್ಟಲು ಸಾಕಷ್ಟು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಮಂಗಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೆಲವು ದಿನಗಳಿಂದ ಮನೆಗಳಿಗೆ ನುಗ್ಗಿ ದಾಂದಲೆ ನಡೆಸುತ್ತಿವೆ. ಅವುಗಳ ಹಾವಳಿಯಿಂದ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ  ಎಂದು ಫಕ್ಕಿರವ್ವ ತಳವಾರ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.