ADVERTISEMENT

ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಅಗತ್ಯ ಅನುದಾನ, ಸೌಲಭ್ಯಕ್ಕೆ ಆಗ್ರಹ 

​ಪ್ರಜಾವಾಣಿ ವಾರ್ತೆ
Published 4 ಜುಲೈ 2018, 15:21 IST
Last Updated 4 ಜುಲೈ 2018, 15:21 IST
ಪ್ರಸಕ್ತ ಸಾಲಿನ ಬಜೆಟ್‌ ನಲ್ಲಿ ಜಿಲ್ಲೆಯ ಶಿಕ್ಷಣ ಕ್ಷೇತ್ರಕ್ಕೆ ಅಗತ್ಯ ಅನುದಾನ ನೀಡಬೇಕು ಎಂದು ಆಗ್ರಹಿಸಿ ಎಬಿವಿಪಿ ಸದಸ್ಯರು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.  
ಪ್ರಸಕ್ತ ಸಾಲಿನ ಬಜೆಟ್‌ ನಲ್ಲಿ ಜಿಲ್ಲೆಯ ಶಿಕ್ಷಣ ಕ್ಷೇತ್ರಕ್ಕೆ ಅಗತ್ಯ ಅನುದಾನ ನೀಡಬೇಕು ಎಂದು ಆಗ್ರಹಿಸಿ ಎಬಿವಿಪಿ ಸದಸ್ಯರು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.     

ಧಾರವಾಡ: ನೂತನ ಸರ್ಕಾರ ಮಂಡಿಸುತ್ತಿರುವ ಬಜೆಟ್‌ ರಾಜ್ಯದ ಶಿಕ್ಷಣ ಕ್ಷೇತ್ರಕ್ಕೆ ಪೂರಕವಾಗಿರಬೇಕು. ಶಿಕ್ಷಣ ಕ್ಷೇತ್ರದ ಉನ್ನತೀಕರಣ ಆದ್ಯತೆಯಾಗಬೇಕು. ಸರ್ಕಾರಿ ಶಾಲಾ, ಕಾಲೇಜುಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ಮುಂದಾಗಬೇಕು ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಸರ್ಕಾರವನ್ನು ಒತ್ತಾಯಿಸಿದೆ.

ಈ ಕುರಿತು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿರುವ ಸಂಘಟನೆ, ‘ಕಳೆದ ಕೆಲ ವರ್ಷಗಳಿಂದ ಶಿಕ್ಷಣ ಕ್ಷೇತ್ರಕ್ಕೆ ಬೇಕಾಗಿರುವಷ್ಟು ಅನುದಾನ ಬಿಡುಗಡೆ ಆಗಿಲ್ಲ.ಶಿಕ್ಷಣ ಕಾಶಿ ಎಂದು ಕರೆಯಲ್ಪಡುವ ಧಾರವಾಡ ನಗರದಲ್ಲಿ ಸರ್ಕಾರಿ ಎಂಜನಿಯರಿಂಗ್‌ ಹಾಗೂ ವೈದ್ಯಕೀಯ ಕಾಲೇಜು ಇಲ್ಲದಿರುವುದು ಶೋಚನೀಯ ಸಂಗತಿ. ಈ ಕುರಿತು ಯಾವುದೇ ಸರ್ಕಾರ ಗಮನ ಹರಸಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ.

’ಸರ್ಕಾರ ಶಾಲಾ ಕಾಲೇಜುಗಳ ಮೂಲಭೂತ ಸೌಕರ್ಯ, ವಿಶ್ವವಿದ್ಯಾಲಯಗಳ ಸಬಲೀಕರಣ, ಕಾಲೇಜುಗಳಿಗೆ ಅವಶ್ಯವಿರುವ ಗ್ರಂಥಾಲಯ, ಪ್ರಯೋಗಾಲಯ ಸೇರಿದಂತೆ ಆಧುನಿಕ ತಂತ್ರಜ್ಞಾನದ ಅಳವಡಿಕೆಗೆ ಈ ಬಾರಿ ಅನುದಾನ ಒದಗಿಸುವ ಅಗತ್ಯವಿದೆ. ಕಾರಣ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ರಾಜ್ಯದ ಶಿಕ್ಷಣ ಕ್ಷೇತ್ರಕ್ಕೆ ಅಗತ್ಯ ಅನುದಾನ ನೀಡಬೇಕು’ ಎಂದು ಹೇಳಿದೆ.

ADVERTISEMENT

‘ಕಳೆದ ವರ್ಷದ ಬಜೆಟ್‌ನಲ್ಲಿ ಘೋಷಿಸಿದ ಹಾಗೆ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಣೆ ಮಾಡಬೇಕು. ಎಸ್.ಸಿ, ಎಸ್.ಟಿ, ಒಬಿಸಿ ಹಾಸ್ಟೆಲ್‌ಗಳ ಸ್ಥಿತಿ ಶೋಚನೀಯವಾಗಿದ್ದು, ತಕ್ಷಣ ಹಾಸ್ಟೆಲ್‌ಗಳನ್ನು ಮೇಲ್ದರ್ಜೆಗೇರಿಸಲು ಸೂಕ್ತ ಅನುದಾನ ಬಿಡುಗಡೆಗೊಳಿಸಬೇಕು’ ಎಂದು ಎಬಿವಿಪಿ ಸರ್ಕಾರವನ್ನು ಒತ್ತಾಯಿಸಿದೆ. ಈ ಸಂದರ್ಭದಲ್ಲಿ ಜಗದೀಶ ಮಾನೆ, ಪವನ ಕರಿಕಟ್ಟಿ, ಮಂಜುಳಾ ಕುಂಬಾರ, ಹನುಂತ ಬಗಲಿ, ಶಿವಾನಂದ ಘಂಟಿಕರ್‌, ಸದ್ದಾಂ ಹುಸೇನ್‌, ಬಸವರಾಜ, ಶಶಿಕುಮಾರ, ಸುಕನ್ಯಾ ಸಿಂಗಟಾಲೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.