
ಹುಬ್ಬಳ್ಳಿ: ‘ಉತ್ತರ ಕರ್ನಾಟಕದಿಂದ ಆಹಾರ, ಪಾನೀಯ ಹಾಗೂ ಇನ್ನಿತರೆ ಉತ್ಪನ್ನಗಳನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ರಫ್ತು ಮಾಡಲು ಮೊರ್ಮುಗಾವ್ ಬಂದರು ಪುನರ್ ಆರಂಭವಾಗಿದ್ದು, ಇದು ಕಂಟೈನರ್ ಸಾಗಣೆಗೆ ಅನುಕೂಲವಾಗಲಿದೆ’ ಎಂದು ಮೊರ್ಮುಗಾವ್ ಬಂದರು ಪ್ರಾಧಿಕಾರದ ಅಧ್ಯಕ್ಷ ಎನ್.ವಿನೋದಕುಮಾರ್ ಹೇಳಿದರು.
ನಗರದಲ್ಲಿ ಗುರುವಾರ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಆಯೋಜಿಸಿದ್ದ ‘ವ್ಯಾಪಾರ ಉತ್ತೇಜನ ಸಭೆ’ಯನ್ನು ಉದ್ಘಾಟಿಸಿ, ಮಾತನಾಡಿದರು.
‘ತಾಂತ್ರಿಕ ಸಮಸ್ಯೆಗಳ ಕಾರಣದಿಂದ ಬಂದರಿನಲ್ಲಿ ಕಂಟೈನರ್ ಸಾಗಣೆ ಸ್ಥಗಿತಗೊಂಡಿತ್ತು. ಇದೀಗ ಪುನಃ ಆರಂಭಿಸಲಾಗಿದೆ. ವ್ಯಾಪಾರ ಚಟುವಟಿಕೆಗಳನ್ನು ಸುಧಾರಿಸಲು ಹಾಗೂ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಲು ಸಾರ್ವಜನಿಕ–ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ಖಾಸಗಿ ಸಂಸ್ಥೆಗಳೊಂದಿಗೆ ಕೈಜೋಡಿಸಿ ಬಂದರು ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ‘ ಎಂದು ಹೇಳಿದರು.
‘ಉತ್ತರ ಕರ್ನಾಟಕ ಭಾಗದಲ್ಲಿ ವ್ಯಾಪಾರ ವಹಿವಾಟು ಹೆಚ್ಚಾಗಿದ್ದು, ಇದರಿಂದಾಗಿ ರಫ್ತು ಪ್ರಕ್ರಿಯೆಯೂ ಹೆಚ್ಚಾಗಿದೆ. ನಮ್ಮ ಬಂದರಿನಿಂದ ಕಬ್ಬಿಣದ ಅದಿರು ರಫ್ತಾಗುತ್ತಿದೆ. ಇದಲ್ಲದೇ ವರ್ಷಕ್ಕೆ ಸುಮಾರು 1 ಲಕ್ಷ ವ್ಯಾಪಾರಿಗಳು ತಮ್ಮ ವ್ಯಾಪಾರು ವಹಿವಾಟಿಗೆ ಈ ಬಂದರಿನ ಸೇವೆ ಬಳಸಿಕೊಳ್ಳುತ್ತಿದ್ದಾರೆ’ ಎಂದರು.
‘ಉದ್ದಿಮೆ, ವ್ಯಾಪಾರಿಗಳಿಗೆ ಅಗತ್ಯ ಸೇವೆ, ಸೌಲಭ್ಯ ನೀಡಲು ನಾವು ಸಿದ್ಧರಿದ್ದು, ಆಮದು– ರಫ್ತು ಚಟುವಟಿಕೆಗಳಿಗೆ ಉತ್ತೇಜನ ನೀಡಲಾಗುತ್ತದೆ’ ಎಂದರು.
ವಿಟಿಪಿಸಿ ವ್ಯವಸ್ಥಾಪಕ ನಿರ್ದೇಶಕ ಬಿ.ಕೆ.ಶಿವಕುಮಾರ ಅವರು, ‘ರಫ್ತು ಚಟುವಟಿಕೆಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಗತ್ಯ ಆರ್ಥಿಕ ನೆರವು ಹಾಗೂ ತರಬೇತಿ ಸೇರಿದಂತೆ ವಿವಿಧ ಯೋಜನೆಗಳ ಮೂಲಕ ಬೆಂಬಲ ನೀಡುತ್ತಿವೆ. ರಫ್ತುಗಾರರು ಈ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡು ತಮ್ಮ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳಬೇಕು‘ ಎಂದರು.
‘ದೇಶದ ಒಟ್ಟು ರಫ್ತಿನಲ್ಲಿ ಕರ್ನಾಟಕದ ಪಾಲು ಶೇ 41ರಷ್ಟಿದೆ. ಇದರಲ್ಲಿ ಶೇ 35ರಷ್ಟು ಸೇವಾ ವಲಯದ ರಫ್ತು ಆಗಿದೆ. ಮುಂದಿನ 10 ವರ್ಷಗಳಲ್ಲಿ ಸರಕು ರಫ್ತನ್ನು ಶೇ 15ಕ್ಕೆ ಹೆಚ್ಚಿಸುವ ಗುರಿಯಿದೆ’ ಎಂದು ಹೇಳಿದರು.
ಕೆಸಿಸಿಐ ಅಧ್ಯಕ್ಷ ಜಿ.ಕೆ.ಆದಪ್ಪಗೌಡರ್, ಗೌರವ ಕಾರ್ಯದರ್ಶಿ ಉದಯ ರೇವಣ್ಣಕರ, ಪ್ರಮುಖರಾದ ಉಮೇಶ್ ವಿ., ವಿವೇಕ್ ನಾಯಕ್, ವೀರಣ್ಣ ಹವಲ್ದಾರ್, ಬೃಂದಾ ಅಮ್ಮಣವರ ಸೇರಿದಂತೆ ರಫ್ತುದಾರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.