ADVERTISEMENT

ಶವಾಗಾರ ಕೊಠಡಿ ಸಮಸ್ಯೆ: ಬಯಲಿನಲ್ಲಿಯೇ ಮರಣೋತ್ತರ ಪರೀಕ್ಷೆ?

ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಇಂಥದ್ದೇ ಸ್ಥಿತಿ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2025, 3:59 IST
Last Updated 7 ಏಪ್ರಿಲ್ 2025, 3:59 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಧಾರವಾಡ: ರಾಜ್ಯದ ಶೇ 50ಕ್ಕೂ ಹೆಚ್ಚು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ (ಪಿಎಚ್‌ಸಿ) ಶವಾಗಾರ ಕೊಠಡಿಗಳಿಲ್ಲ. ಮರಣೋತ್ತರ ಪರೀಕ್ಷೆ ಮಾಡಲು ವೈದ್ಯಾಧಿಕಾರಿಗಳು ಸಮಸ್ಯೆ ಎದುರಿಸುತ್ತಿದ್ದು, ಆಸ್ಪತ್ರೆಯ ಹೊರಗಿನ ಬಯಲು ಜಾಗ ಇಲ್ಲವೇ ಹೊಲಗಳಲ್ಲಿ ಮರಣೋತ್ತರ ಪರೀಕ್ಷೆ ಮಾಡುವಂತಹ ಸ್ಥಿತಿ ಎದುರಾಗಿದೆ.

ಬಾಗಲಕೋಟೆ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯೊಬ್ಬರು ಕಳೆದ 12 ತಿಂಗಳಲ್ಲಿ ಅರ್ಧ ಡಜನ್‌ಗೂ ಹೆಚ್ಚು ಮರಣೋತ್ತರ ಪರೀಕ್ಷೆಯನ್ನು ಮೈದಾನದಲ್ಲಿಯೇ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. 

ADVERTISEMENT

1990ರ ಮುಂಚೆ ನಿರ್ಮಿಸಲಾದ 650 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಶವಾಗಾರ ಕೊಠಡಿಗಳನ್ನು ಹೊಂದಿವೆ. ಆದರೆ, ಅವು ಕಾರ್ಯ ನಿರ್ವಹಿಸುತ್ತಿಲ್ಲ. ನಂತರ ನಿರ್ಮಿಸಲಾದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೌಲಭ್ಯಗಳಿಲ್ಲ. ಮರಣೋತ್ತರ ಪರೀಕ್ಷೆಗೆ ಕೊಠಡಿ ಇಲ್ಲ.  ಉತ್ತರ ಕರ್ನಾಟಕ ಭಾಗದಲ್ಲಿ ಈ ಸಮಸ್ಯೆ ತೀವ್ರವಾಗಿದ್ದು, ಇಲ್ಲಿನ ಕೆಲ ಜಿಲ್ಲೆಗಳಲ್ಲಿನ ನಾಲ್ಕು ಅಥವಾ ಆರು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿನ ಒಂದರಲ್ಲಿ ಮಾತ್ರ ಶವಾಗಾರ ಕೊಠಡಿಯಿದೆ.

‘ಧಾರವಾಡ ಜಿಲ್ಲೆಯಲ್ಲಿ ಒಂದು ತಿಂಗಳಲ್ಲಿ ಅಸಹಜ ಸಾವುಗಳಿಗೆ ಸರಾಸರಿ 20 ಮರಣೋತ್ತರ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಅವುಗಳಲ್ಲಿ ಸುಮಾರು 14 ಜಿಲ್ಲಾ ಆಸ್ಪತ್ರೆಯಲ್ಲಿ ನಡೆಯುತ್ತವೆ. ಆದರೆ ಜಿಲ್ಲಾ ಆಸ್ಪತ್ರೆಯ ವೈದ್ಯರು ಈಗ ಸಂಬಂಧಪಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಮರಣೋತ್ತರ ಪರೀಕ್ಷೆ ಮಾಡಬೇಕೆಂದು ಒತ್ತಾಯಿಸುತ್ತಿದ್ದಾರೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶಶಿ ಪಾಟೀಲ್ ಹೇಳಿದರು.

‘ಧಾರವಾಡ ಜಿಲ್ಲೆಯಲ್ಲಿ ಸುಮಾರು 53 ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದು, ಅವುಗಳಲ್ಲಿ 50 ವರ್ಷಗಳ ಹಿಂದೆ ನಿರ್ಮಿಸಲಾದ 20 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಶವಾಗಾರ ಕೊಠಡಿಯನ್ನು ಹೊಂದಿವೆ. ಆದರೆ ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಇಂತಹ ಕೊಠಡಿ ಇಲ್ಲ. ಶವಾಗಾರವನ್ನು ಸ್ಥಾಪಿಸಲು ಆರೋಗ್ಯ ಇಲಾಖೆಯು ಜಿಲ್ಲಾ ಪಂಚಾಯಿತಿಯಿಂದ ಅನುದಾನ ಪಡೆದಿದ್ದು ಸರಾಸರಿ, ಒಂದು ವರ್ಷದಲ್ಲಿ ಒಂದು ಶವಾಗಾರವನ್ನು ನಿರ್ಮಿಸಲಾಗುತ್ತಿದೆ’ ಎಂದು ಅವರು ಹೇಳಿದರು.

ಗ್ರಾಮೀಣ ಪ್ರದೇಶಗಳಲ್ಲಿ ಸಂಕಷ್ಟ

ಬೆಳಗಾವಿ ವಿಭಾಗ–59 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಪೈಕಿ 43 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಶವಾಗಾರವಿಲ್ಲ, ಚಿಕ್ಕೋಡಿ ವಿಭಾಗ–80 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 57ರಲ್ಲಿ ಶವಾಗಾರವಿಲ್ಲ. ಧಾರವಾಡ ಜಿಲ್ಲೆ–53 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 33 ಕೇಂದ್ರಗಳಲ್ಲಿ ಶವಾಗಾರವಿಲ್ಲ. ಈ ಕೊರತೆಯಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿ ಹೊಲಗಳಲ್ಲಿ ಮರಣೋತ್ತರ ಪರೀಕ್ಷೆ ನಡೆಸುವ ಪ್ರಕರಣಗಳು ಹೆಚ್ಚಿವೆ. ಇನ್ನೂ ಕೆಲವೆಡೆ ವೈದ್ಯರು ಪರೀಕ್ಷೆಗಾಗಿ ದೇಹವನ್ನು ತಾಲ್ಲೂಕು ಅಥವಾ ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸುತ್ತಾರೆ. ಹಲವೆಡೆ, ಮರಣೋತ್ತರ ಪರೀಕ್ಷೆ ಮಾಡಲು ವೈದ್ಯರು ಹಾಗೂ ತರಬೇತಿ ಪಡೆದ ಸಿಬ್ಬಂದಿ ಕೊರತೆ ಇರುವುದು ಕೂಡ ಸಮಸ್ಯೆಗೆ ಕಾರಣವಾಗಿದೆ.

ಮರಣೋತ್ತರ ಪರೀಕ್ಷೆಯ ವೆಚ್ಚವನ್ನು ಮೃತರ ಕುಟುಂಬದ ಸದಸ್ಯರಿಗೆ ವರ್ಗಾಯಿಸಬಾರದು. ಇಲಾಖೆಯೇ ಭರಿಸುತ್ತದೆ
ಶಿವಕುಮಾರ್ ಕೆ. ಬಿ., ಆಯುಕ್ತ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.