ಹುಬ್ಬಳ್ಳಿ: ಏಳನೇ ವೇತನ ಆಯೋಗದ ಸೌಲಭ್ಯ ನೀಡಲು ಮಹಾನಗರ ಪಾಲಿಕೆ ಸಿಬ್ಬಂದಿಗೂ ಆರ್ಥಿಕ ಇಲಾಖೆಯಿಂದ ಅನುದಾನ ಬಿಡುಗಡೆ ಮಾಡಬೇಕು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ನೌಕರರ ಸಂಘದ ಸದಸ್ಯರು ಪಾಲಿಕೆ ಆವರಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಸಾಮೂಹಿಕ ರಜೆ ಹಾಕಿ ಪ್ರತಿಭಟನೆಯಲ್ಲಿ ಪಾಲ್ಗೊಂಡ ನೌಕರರು, ಶೀಘ್ರ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು. ಪಾಲಿಕೆಯ ಮುಖ್ಯ ಕಚೇರಿ ಸೇರಿದಂತೆ ಎಲ್ಲ ವಲಯ ಕಚೇರಿಗಳಿಗೂ ಬೀಗ ಹಾಕಲಾಗಿತ್ತು. ಇದರಿಂದಾಗಿ ವಿವಿಧ ಕೆಲಸಗಳಿಗಾಗಿ ಪಾಲಿಕೆ ಕಚೇರಿಗೆ ಬಂದ ಸಾರ್ವಜನಿಕರು ಪರದಾಡಬೇಕಾಯಿತು.
ಸಂಘದ ಉಪಾಧ್ಯಕ್ಷ ಕೆ.ಪಿ.ಜಾಧವ ಮಾತನಾಡಿ, ‘ಹು–ಧಾ ಮಹಾನಗರ ಪಾಲಿಕೆಯಲ್ಲಿ 2 ಸಾವಿರಕ್ಕೂ ಹೆಚ್ಚು ನೌಕರರಿದ್ದಾರೆ. ಬೇಡಿಕೆಗಳನ್ನು ಈಡೇರಿಸುವವರೆಗೂ ಕರ್ತವ್ಯಕ್ಕೆ ಹಾಜರಾಗುವುದಿಲ್ಲ’ ಎಂದರು.
‘ಪಾಲಿಕೆಯ ಕಾಯಂ ಪೌರಕಾರ್ಮಿಕರು ಸೇರಿದಂತೆ ಎಲ್ಲ ನೌಕರರಿಗೂ ಆರೋಗ್ಯ ಸಂಜೀವಿನಿ ಯೋಜನೆಯನ್ನು ಜಾರಿಗೊಳಸಬೇಕು. ಪಾಲಿಕೆಗಳಲ್ಲಿ ವೃಂದ ಮತ್ತು ನೇಮಕಾತಿ ನಿಯಮಾವಳಿಗೆ ತಿದ್ದುಪಡಿ ತಂದು ಕರಡು ಮಸೂದೆ ಪ್ರಕಟಿಸಬೇಕು. ವೃಂದವಾರು ಮುಂಬಡ್ತಿ ನೀಡಬೇಕು’ ಎಂದು ಆಗ್ರಹಿಸಿದರು.
‘ರಾಜ್ಯ ಸರ್ಕಾರಿ ನೌಕರರಿಗೆ ಪ್ರತಿ ವರ್ಷ ಆಯೋಜಿಸುವ ಕ್ರೀಡಾಕೂಟವನ್ನು ಮಹಾನಗರ ಪಾಲಿಕೆ ನೌಕರರಿಗೂ ಆಯೋಜಿಸಬೇಕು. ಅಧಿಕಾರಿ/ನೌಕರರಿಗೂ ಸಹ ಕೆ.ಜಿ.ಐ.ಡಿ. ಮತ್ತು ಜಿ.ಪಿ.ಎಫ್ ಸೌಲಭ್ಯವನ್ನು ಜಾರಿ ಮಾಡಬೇಕು’ ಎಂದು ಒತ್ತಾಯಿಸಿದರು.
ಸಂಘದ ಗೌರವಾಧ್ಯಕ್ಷ ರಮೇಶ ಬಿ.ಪಾಲಿಮ, ಮಂಜುನಾ ನಾಟೇಕರ, ದೀಪಿಕಾ ಆರ್., ವಿದ್ಯಾ ಪಾಟೀಲ, ಮಂಜುನಾಥ ನರಗುಂದ ಇದ್ದರು.
ಪ್ರತಭಟನೆ ಮುಂದುವರಿಕೆ
ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದ್ದು ಪೌರಾಡಳಿತ ನಿರ್ದೇಶನಾಲಯದ ಅಧಿಕಾರಿ ಮಂಗಳವಾರ ಮನವಿ ಸ್ವೀಕರಿಸಿದರು. ಆದರೆ ಬೇಡಿಕೆಗಳ ಈಡೇರಿಕೆ ಕುರಿತು ಭರವಸೆ ನೀಡಿಲ್ಲ. ಹೀಗಾಗಿ ಬುಧವಾರವೂ ಪ್ರತಿಭಟನೆ ಮುಂದುವರಿಸಲು ನಿರ್ಧರಿಸಲಾಗಿದೆ. ಹುಬ್ಬಳ್ಳಿ– ಧಾರವಾಡದಲ್ಲೂ ನೌಕರರು ಕರ್ತವ್ಯಕ್ಕೆ ಹಾಜರಾಗದೆ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಬೆಂಗಳೂರಿನಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವ ಹು-ಧಾ ಮಹಾನಗರ ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಪ್ರಸಾದ ಪೆರೂರ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.