ADVERTISEMENT

ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ರಚನೆ ಪ್ರಸ್ತಾವ: ಅಂತಿಮ ಅಧಿಸೂಚನೆ ಯಾವಾಗ?

ಜನಪ್ರತಿನಿಧಿಗಳ ಜಾಣ ಮೌನ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2025, 2:50 IST
Last Updated 16 ನವೆಂಬರ್ 2025, 2:50 IST
ಅರವಿಂದ ಬೆಲ್ಲದ
ಅರವಿಂದ ಬೆಲ್ಲದ   

ಧಾರವಾಡ: ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ವಿಭಜಿಸಿ ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ರಚನೆಗೆ ಜನವರಿಯಲ್ಲಿ ಕರಡು ಅಧಿಸೂಚನೆ ಪ್ರಕಟಿಸಲಾಗಿತ್ತು. ಆದರೆ, ಅಂತಿಮ ಅಧಿಸೂಚನೆ ಈವರೆಗೆ ಪ್ರಕಟವಾಗಿಲ್ಲ.

ಸರ್ಕಾರವು ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ರಚನೆ ನಿರ್ಣಯ ಘೋಷಿಸಿದಾಗ ಪಕ್ಷಾತೀತವಾಗಿ ಎಲ್ಲರೂ ಸ್ವಾಗತಿಸಿದ್ದರು. ಪಾಲಿಕೆ ಸಭೆಯಲ್ಲೂ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಗಿತ್ತು. ಜನಪ್ರತಿನಿಧಿಗಳು ಒಪ್ಪಿಗೆ ಪತ್ರ ನೀಡಿದ್ದರು. ಧಾರವಾಡ ನಗರದ ವಿಸ್ತೀರ್ಣ, ವಾರ್ಡ್‌ಗಳು, ಜನಸಂಖ್ಯೆ ಸಹಿತ ಸಮಗ್ರ‌ ವಿವರಗಳ ಪ್ರಸ್ತಾವ ಸಲ್ಲಿಕೆ ಪ್ರಕ್ರಿಯೆಗಳು ವೇಗವಾಗಿ ನಡೆದವು.

ಜನವರಿ 21ರಂದು ಕರಡು ಅಧಿಸೂಚನೆ ಪ್ರಕಟಿಸಲಾಗಿತ್ತು. ನಂತರ, ಪ್ರಕ್ರಿಯೆ ವಿಳಂಬ ಹಾದಿ ಹಿಡಿದಿದೆ. ಜನಪ್ರತಿನಿಧಿಗಳು ಜಾಣ ಮೌನವಹಿಸಿದ್ದಾರೆ. ಉತ್ಸಾಹ ತೋರುತ್ತಿಲ್ಲ.

ADVERTISEMENT

ಪತ್ಯೇಕ ಪಾಲಿಕೆ ರಚನೆಯಾದರೆ ಧಾರವಾಡದ ಅಭಿವೃದ್ಧಿಗೆ ಅನುಕೂಲವಾಗಲಿದೆ. ತಾರತಮ್ಯದ (ಹುಬ್ಬಳ್ಳಿಗೆ ಒತ್ತು, ಧಾರವಾಡ ಉಪೇಕ್ಷೆ) ದೂರುಗಳು ಪರಿಹಾರವಾಗಲಿವೆ ಎಂಬ ನಿರೀಕ್ಷೆಗಳು ಇವೆ. ಆದರೆ, ಪ್ರಕ್ರಿಯೆ ವಿಳಂಬ ಹಾದಿ ಹಿಡಿದಿರುವುದು ಜನರಲ್ಲಿ ನಿರಾಸೆ ಮೂಡಿಸಿದೆ.

‘ಪ್ರತ್ಯೇಕ ಪಾಲಿಕೆಗಾಗಿ ಹಲವು ವರ್ಷದ ಹೋರಾಟಕ್ಕೆ ಸ್ಪಂದನೆ ಸಿಕ್ಕಿದೆ. ಆದರೆ, ವಿಳಂಬದ ಹಿಂದೆ ಜನಪ್ರತಿನಿಧಿಯೊಬ್ಬರ ಕೈವಾಡ ಇರುವ ಗುಮಾನಿ ಇದೆ. ರಾಜಕೀಯ ಲಾಭ ಬದಿಗಿರಿಸಿ ಎಲ್ಲರೂ ಒಗ್ಗೂಡಿ ಇಚ್ಛಾಶಕ್ತಿ ಪ್ರದರ್ಶಿಸಬೇಕು’ ಎಂದು ಹೋರಾಟ ವೇದಿಕೆ ಸದಸ್ಯರೊಬ್ಬರು ಒತ್ತಾಯಿಸಿದರು.

ವೆಂಕಟೇಶ ಮಾಚಕನೂರ
ಧಾರವಾಡದಲ್ಲಿನ ಪಾಲಿಕೆ ಕಚೇರಿ 
ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ರಚನೆ ಪ್ರಸ್ತಾವ ಸಲ್ಲಿಕೆಯಾಗಿದೆ. ಪಕ್ರಿಯೆಗಳು ನಡೆಯುತ್ತಿವೆ. ಪಾಲಿಕೆ ರಚನೆ ಸಾಕಾರಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಗಳು ಸಾಗಿವೆ
ಅರವಿಂದ ಬೆಲ್ಲದ ಶಾಸಕ

‘ರಾಜ್ಯಪಾಲರ ಅನುಮೋದನೆಗೆ ಪ್ರಸ್ತಾವ ಸಲ್ಲಿಕೆ‘

‘ಸರ್ಕಾರವು ‌ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಪ್ರಸ್ತಾವವನ್ನು ರಾಜ್ಯಪಾಲರ ಅನುಮೋದನೆಗೆ ಕಳುಹಿಸಿದೆ. ನಾವೂ ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ. ಬೆಳಗಾವಿಯಲ್ಲಿ ಡಿಸೆಂಬರ್‌ 8ರಿಂದ ವಿಧಾನಸಭೆ ಅಧಿವೇಶನ ನಡೆಯಲಿದೆ. ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸಲು ಶಾಸಕರಿಗೆ ಒತ್ತಡ ಹೇರುತ್ತೇವೆ. ರಾಜ್ಯಪಾಲರ ಅನುಮೋದನೆ ಪಡೆದು ಅಂತಿಮ ಅಧಿಸೂಚನೆ ಪ್ರಕಟಿಸಲು ಕ್ರಮ ವಹಿಸುತವಂತೆ ಒತ್ತಾಯಿಸುತ್ತೇವೆ’ ಎಂದು ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ಅಭಿವೃದ್ಧಿ ವೇದಿಕೆ ಅಧ್ಯಕ್ಷ ವೆಂಕಟೇಶ ಮಾಚಕನೂರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.