
ಧಾರವಾಡ: ‘ಸಂಗೀತವು ಕಠಿಣ ಪರಿಶ್ರಮ, ಶ್ರದ್ಧೆಗೆ ಒಲಿಯುವ ವಿದ್ಯೆ. ಸಂಗೀತ ಸಿದ್ಧಿಸಲು ಮೊದಲು ಉತ್ತಮ ಕೇಳುಗರಾಗಿರಬೇಕು’ ಎಂದು ಪಂಡಿತ ವೆಂಕಟೇಶಕುಮಾರ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಕರ್ನಾಟಕ ರಾಜ್ಯೋತ್ಸವ ಹಾಗೂ ಕರ್ನಾಟಕ ಸಂಭ್ರಮ 50ರ ಸಂಭ್ರಮದ ಅಂಗವಾಗಿ ಬುಧವಾರ ಆಯೋಜಿಸಿದ್ದ ‘ಧರೆಗೆ ದೊಡ್ಡವರು’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸಾಧನೆಗೆ ಪೂರಕವಾದ ವಾತಾವರಣ ಸೃಷ್ಟಿಸುವ ಶಕ್ತಿ ಸಂಗೀತಕ್ಕಿದೆ. ಯುವಜನರು ಸಂಗೀತದ ಆಸಕ್ತಿ ಬೆಳೆಸಿಕೊಳ್ಳಬೇಕು. ಬೇಗ ಸಾಧಕರಾಗಬೇಕೆಂಬ ಹಂಬಲ ಇರಬಾರದು’ ಎಂದರು.
‘ಪಂಚಾಕ್ಷರಿ ಮತ್ತು ಪುಟ್ಟರಾಜ ಗವಾಯಿಯವರು ನನಗೆ ಸಂಗೀತದ ಜತೆಗೆ ಸಂಸ್ಕಾರ ಕಲಿಸಿದರು. ಪಂಡಿತ ಮಲ್ಲಿಕಾರ್ಜುನ ಮನ್ಸೂರ, ಗಂಗೂಬಾಯಿ ಹಾನಗಲ್ ಮೊದಲಾದವರು ಶ್ರೇಷ್ಠ ಸಂಗೀತಗಾರಾಗಿದ್ದರು. ಸಂಗೀತಗಾರರ ಬಗ್ಗೆ ವಿದ್ಯಾರ್ಥಿಗಳು ಹೆಚ್ಚು ಅಧ್ಯಯನ ನಡೆಸಬೇಕು’ ಎಂದು ಸಲಹೆ ನೀಡಿದರು.
ಪ್ರಾಚಾರ್ಯ ಶಶಿಧರ ತೋಡಕರ, ಜಯದೇವಿ ಜಂಗಮಶೆಟ್ಟಿ ಮಾತನಾಡಿದರು. ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರ ಕುಂಬಿ, ಸತೀಶ ತುರಮರಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.