ADVERTISEMENT

ರಂಜಾನ್‌ ಆಚರಣೆಗೆ ಕ್ಷಣಗಣನೆ; ಖರೀದಿ ಭರಾಟೆ

ಝಗಮಗಿಸಿದ ಮಸೀದಿಗಳು, ಮಾರುಕಟ್ಟೆಯಲ್ಲಿ ಖರೀದಿ ಭರಾಟೆ

​ಪ್ರಜಾವಾಣಿ ವಾರ್ತೆ
Published 3 ಮೇ 2022, 5:22 IST
Last Updated 3 ಮೇ 2022, 5:22 IST
ಹುಬ್ಬಳ್ಳಿಯಲ್ಲಿ ಸೋಮವಾರ ಚಂದ್ರ ಕಾಣಿಸಿಕೊಂಡಿದ್ದು ಹೀಗೆ...
ಹುಬ್ಬಳ್ಳಿಯಲ್ಲಿ ಸೋಮವಾರ ಚಂದ್ರ ಕಾಣಿಸಿಕೊಂಡಿದ್ದು ಹೀಗೆ...   

ಹುಬ್ಬಳ್ಳಿ: ಸೋಮವಾರ ಚಂದ್ರ ದರ್ಶನವಾದ ಹಿನ್ನೆಲೆಯಲ್ಲಿ ಮಂಗಳವಾರ ಸಂಭ್ರಮದಿಂದ ರಂಜಾನ್‌ (ಈದ್‌ ಉಲ್‌ ಫಿತ್ರ್) ಆಚರಿಸಲು ನಿರ್ಧರಿಸಲಾಗಿದೆ. ಹೀಗಾಗಿ ಸಕಲ ಸಿದ್ಧತೆ ನಡೆಸಲಾಯಿತು.

ನಗರದ ದುರ್ಗದ ಬೈಲ್ ಹಾಗೂ ಶಹಾ ಬಜಾರ್‌ ಜನಜಂಗುಳಿಯಿಂದ ಕೂಡಿತ್ತು. ಹಬ್ಬಕ್ಕೆ ಅಗತ್ಯವಿದ್ದ ವಸ್ತುಗಳ ಖರೀದಿ ಭರಾಟೆಯೂ ಜೋರಾಗಿತ್ತು.

ಹಣ್ಣು, ತರಕಾರಿ, ಹೂವು ಮೊದಲಾದ ಅಗತ್ಯ ವಸ್ತುಗಳ ದರ ತೀರಾ ಏರಿಕೆಯಾಗದ ಕಾರಣ ಖರೀದಿಗೆ ಜನ ಮುಗಿಬಿದ್ದರು. ವ್ಯಾಪಾರಿಗಳು ಖುಷಿಯಿಂದ ವ್ಯಾಪಾರ ಮಾಡಿದರು. ವಿವಿಧ ಮಸೀದಿಗಳು ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸಿದವು.

ADVERTISEMENT

10.35 ಪ್ರಾರ್ಥನೆ: ‘ನಗರದ ಎಲ್ಲಾ ಮಸೀದಿಗಳಲ್ಲಿ ಮಂಗಳವಾರ 10.35ಕ್ಕೆ ಮುಸ್ಲಿಮರಿಂದ ಸಾಮೂಹಿಕ ಪ್ರಾರ್ಥನೆ ನಡೆಯಲಿದೆ. ಬಳಿಕ ಧರ್ಮಗುರುಗಳು ಹಬ್ಬದ ಸಂದೇಶ ತಿಳಿಸಲಿದ್ದಾರೆ. ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ, ಮೂರುಸಾವಿರ ಮಠಕ್ಕೆ ತೆರಳಿ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಅವರಿಗೆ ಶುಭಾಶಯ ತಿಳಿಸಿ, ಆಶೀರ್ವಾದ ಪಡೆಯುತ್ತೇವೆ’ ಎಂದು ಹುಬ್ಬಳ್ಳಿ ಅಂಜುಮನ್ ಸಂಸ್ಥೆಯ ಅಧ್ಯಕ್ಷ ಯೂಸುಫ್‌ ಸವಣೂರ ತಿಳಿಸಿದರು.

ಶಾಂತಿಸಭೆ: ರಂಜಾನ್ ಹಿನ್ನೆಲೆಯಲ್ಲಿ ಭಾನುವಾರ ಮಧ್ಯಾಹ್ನ 12.15ಕ್ಕೆ ಪೊಲೀಸ್‌ ಹಾಗೂ ಪಾಲಿಕೆ ಅಧಿಕಾರಿಗಳು ಅಂಜುಮನ್‌ ಸಂಸ್ಥೆ ಹಾಗೂ ಜಮಾತ್ ಮುಖಂಡರೊಂದಿಗೆ ಶಾಂತಿಸಭೆ ನಡೆಸಿದರು.

‘ಶಾಂತಿಯುತವಾಗಿ ಹಬ್ಬ ಆಚರಿಸಬೇಕು. ಸಾಮೂಹಿಕ ಪ್ರಾರ್ಥನೆ, ಮೆರವಣಿಗೆ ವೇಳೆ ಏನಾದರೂ ಸಮಸ್ಯೆಯಾದರೆ ಅಂಜುಮನ್ ಸಮಿತಿಗೆ ತಿಳಿಸಬೇಕು. ಅವರು ಪೊಲೀಸರಿಗೆ ತಿಳಿಸಿ, ಸಮಸ್ಯೆ ಬಗೆಹರಿಸಲು ಯತ್ನಿಸುತ್ತಾರೆ. ಅದರ ಹೊರತಾಗಿ ಯಾರೂ ಕಾನೂನು ಕೈಗೆತ್ತಿಕೊಳ್ಳಬಾರದು. ಗಲಭೆ ನಡೆದ ವೇಳೆ ಸೇರಿದಂತೆ ಹೆಚ್ಚು ಜನ ಸೇರಬಾರದು. ಅಂಜುಮನ್ ಸಂಸ್ಥೆಯವರು ಯುವಕರನ್ನು ನಿಯಂತ್ರಿಸಬೇಕು. ಸಂಚಾರ ದಟ್ಟಣೆ ಉಂಟಾಗದಂತೆ ವಾಹನಗಳನ್ನು ದೂರದಲ್ಲಿ ನಿಲ್ಲಿಸಿ, ಪ್ರಾರ್ಥನೆಗೆ ಬರಬೇಕು’ ಎಂದು ಪೊಲೀಸ್‌ ಆಯುಕ್ತ ಲಾಭೂರಾಮ್ ಸೂಚಿಸಿದರು.

‘ಚಿಕ್ಕ ಮಕ್ಕಳು ಹಾಗೂ ವಯಸ್ಸಾದವರು ಮಸೀದಿಗೆ ಬರುವಂತಿಲ್ಲ. ಅಂಜುಮನ್ ಸಂಸ್ಥೆಯಿಂದ 10 ಮಂದಿ ಸ್ವಯಂಸೇವಕರನ್ನು ಶಾಂತಿಪಾಲನೆಗಾಗಿ ಮಸೀದಿಗಳ ಬಳಿ ನಿಯೋಜಿಸಲು ನಿರ್ಧರಿಸಲಾಗಿದೆ’ ಎಂದು ಯೂಸುಫ್‌ ಸವಣೂರ ತಿಳಿಸಿದರು. ಸುಮಾರು 50 ಮಂದಿ ಮುಸ್ಲಿಂ ಮುಖಂಡರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.