ಹುಬ್ಬಳ್ಳಿ: ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವ ಗುರಿ ಹೊಂದಿರುವ ಹುಬ್ಬಳ್ಳಿಯ ರಾಜನಗರದ ನಾಗರಾಜ್ ವಿ.ದಿವಟೆ ಅಥ್ಲೆಟಿಕ್ಸ್‌ನ ಸ್ಟೀಪಲ್ ಚೇಸ್ ಸ್ಪರ್ಧೆಯಲ್ಲಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಮಿಂಚಿದ್ದಾರೆ. ಅವರು ಧಾರವಾಡದ ಕೆಸಿಡಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಪದವಿ (ವಾಣಿಜ್ಯ) ವಿದ್ಯಾರ್ಥಿ.
2024ರ ಡಿಸೆಂಬರ್‌ನಲ್ಲಿ ಒಡಿಶಾದ ಭುವನೇಶ್ವರದಲ್ಲಿ ನಡೆದ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್ಸ್‌ನ 3000 ಮೀ. ಸ್ಟೀಪಲ್ ಚೇಸ್‌ನಲ್ಲಿ ಚಿನ್ನದ ಪದಕದೊಂದಿಗೆ ದಾಖಲೆ ನಿರ್ಮಿಸಿದ್ದಾರೆ. ಅವರು 8 ನಿಮಿಷ 45.95 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು.
2023ರ ಡಿಸೆಂಬರ್‌ನಲ್ಲಿ ನಡೆದ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನ 3000 ಮೀ. ಸ್ಟೀಪಲ್ ಚೇಸ್ (8ನಿ. 46.77ಸೆ) ಮತ್ತು 2024ರ ಜನವರಿಯಲ್ಲಿ ಅಖಿಲ ಭಾರತ ವಿಶ್ವವಿದ್ಯಾಲಯಗಳ ಒಕ್ಕೂಟವು ತಮಿಳುನಾಡು ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಶ್ವವಿದ್ಯಲಯದಲ್ಲಿ ಏರ್ಪಡಿಸಿದ್ದ ಅಖಿಲ ಭಾರತ ಅಂತರ ವಿ.ವಿ ಅಥ್ಲೆಟಿಕ್ಸ್‌ನ 3000 ಮೀ. ಸ್ಟೀಪಲ್ ಚೇಸ್‌ನಲ್ಲಿ (8ನಿ.49.49ಸೆ) ಚಿನ್ನ ಗೆದ್ದಿದ್ದಾರೆ.
ಕಳೆದ ಫೆಬ್ರುವರಿಯಲ್ಲಿ ನಡೆದ ಖೇಲೊ ಇಂಡಿಯಾ ವಿಶ್ವವಿದ್ಯಾಲಯಗಳ ಕ್ರೀಡಾಕೂಟ, ಕರ್ನಾಟಕ ವಿಶ್ವವಿದ್ಯಾಲಯ ಅಂತರ ಕಾಲೇಜು ಕ್ರೀಡಾಕೂಟದ 3000 ಮೀ. ಸ್ಟೀಪಲ್ ಚೇಸ್, ಕರ್ನಾಟಕ ಅಥ್ಲೆಟಿಕ್ಸ್ ಅಸೋಸಿಯೇಷನ್ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಕರ್ನಾಟಕ ರಾಜ್ಯ ಹಿರಿಯರ ಅಥ್ಲೆಟಿಕ್ಸ್ ಕೂಟದ 1,500 ಮೀ. ಓಟದಲ್ಲಿಯೂ ಪದಕ ಗಳಿಸಿದ್ದಾರೆ.
‘ವಿಲಾಸ್ ನೀಲಗುಂದ, ಹರೀಶಗೌಡ ಅವರು ತರಬೇತಿ ನೀಡಿದ್ದಾರೆ. ಪ್ರತಿ ದಿನ ಬೆಳಿಗ್ಗೆ ಮತ್ತು ಸಂಜೆ ಸೇರಿ ನಾಲ್ಕು ಗಂಟೆಗೂ ಹೆಚ್ಚು ಸಮಯ ಅಭ್ಯಾಸ ಮಾಡುತ್ತೇನೆ. ಹುಬ್ಬಳ್ಳಿಯಲ್ಲಿ ಸಿಂಥೆಟಿಕ್ ಟ್ರ್ಯಾಕ್ ಕೊರತೆ ಇರುವುದಕ್ಕೆ ವಾರದಲ್ಲಿ ಮೂರು ದಿನ ಧಾರವಾಡದ ಆರ್.ಎನ್.ಶೆಟ್ಟಿ ಕ್ರೀಡಾಂಗಣಕ್ಕೆ ಹೋಗುತ್ತೇನೆ. ಉಳಿದ ಸಮಯದಲ್ಲಿ ಹುಬ್ಬಳ್ಳಿಯ ರೈಲ್ವೆ ಮೈದಾನದಲ್ಲಿ ಅಭ್ಯಾಸ ಮಾಡುತ್ತೇನೆ’ ಎಂದು ನಾಗರಾಜ್ ವಿ.ದಿವಟೆ ‘ಪ್ರಜಾವಾಣಿ’ಗೆ ತಿಳಿಸಿದರು.
ನಾಗರಾಜ್‌ಗೆ 8 ವರ್ಷ ತರಬೇತಿ ನೀಡಿದ್ಧೇನೆ. ಬಡತನದಲ್ಲಿ ಬೆಳೆದ ಅವರಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವ ಸಾಮರ್ಥ್ಯ ಇದೆಹರೀಶಗೌಡ ತರಬೇತುದಾರ
ವಿವಿಧ ಮ್ಯಾರಥಾನ್‌ಗಳಲ್ಲಿ ಭಾಗವಹಿಸುತ್ತೇನೆ. ಅದರಲ್ಲಿ ಬಂದ ಹಣವನ್ನು ಡಯಟ್ ಜಿಮ್‌ಗೆ ಬಳಸುತ್ತೇನೆ. ನನ್ನ ತಾಯಿ ಕಾಲೇಜು ತರಬೇತುದಾರರಿಂದ ಪ್ರೋತ್ಸಾಹ ಸಿಕ್ಕಿದೆ.ನಾಗರಾಜ್ ವಿ.ದಿವಟೆಸ್ಟೀಪಲ್‌ಚೇಸ್ ಪಟು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.