ADVERTISEMENT

ರಾಷ್ಟ್ರ–ದೇಶದ ವ್ಯತ್ಯಾಸದ ಅರಿವಾಗಲಿ

ಬಸವರಾಜ ಕಟ್ಟೀಮನಿ ಪ್ರತಿಷ್ಠಾನ ಕಾರ್ಯಕ್ರಮದಲ್ಲಿ ಡಾ. ರಾಜೇಂದ್ರ ಚೆನ್ನಿ ಅಭಿಮತ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2022, 15:30 IST
Last Updated 19 ಮಾರ್ಚ್ 2022, 15:30 IST
ಧಾರವಾಡದ ಆಲೂರು ವೆಂಕಟರಾವ್ ಸಭಾಭವನದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಬಸವರಾಜ ಕಟ್ಟೀಮನಿ ಅವರ ಭಾವಚಿತ್ರಕ್ಕೆ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಪುಷ್ಪ ನಮನ ಸಲ್ಲಿಸಿದರು. ರಾಮಕೃಷ್ಣ ಮರಾಠೆ, ಡಾ. ಬಸವರಾಜ ಸಾದರ, ಪ್ರೊ. ಮಲ್ಲಿಕಾರ್ಜುನ ಹಿರೇಮಠ, ಡಾ. ರಾಜೇಂದ್ರ ಚೆನ್ನಿ, ಡಾ. ಕೆ.ಆರ್.ದುರ್ಗಾದಾಸ ಇದ್ದಾರೆ
ಧಾರವಾಡದ ಆಲೂರು ವೆಂಕಟರಾವ್ ಸಭಾಭವನದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಬಸವರಾಜ ಕಟ್ಟೀಮನಿ ಅವರ ಭಾವಚಿತ್ರಕ್ಕೆ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಪುಷ್ಪ ನಮನ ಸಲ್ಲಿಸಿದರು. ರಾಮಕೃಷ್ಣ ಮರಾಠೆ, ಡಾ. ಬಸವರಾಜ ಸಾದರ, ಪ್ರೊ. ಮಲ್ಲಿಕಾರ್ಜುನ ಹಿರೇಮಠ, ಡಾ. ರಾಜೇಂದ್ರ ಚೆನ್ನಿ, ಡಾ. ಕೆ.ಆರ್.ದುರ್ಗಾದಾಸ ಇದ್ದಾರೆ   

ಧಾರವಾಡ: ‘ರಾಷ್ಟ್ರ ಹಾಗೂ ದೇಶದ ಪರಿಕಲ್ಪನೆ ಅರ್ಥವಾಗದಿದ್ದರೆ ಎಲ್ಲರನ್ನೂ ಒಳಗೊಳ್ಳುವ ಜನಪರವಾದ ಸಮಾಜ ಸೃಷ್ಟಿ ಅಸಾಧ್ಯ’ ಎಂದು ಸಂಸ್ಕೃತಿ ಚಿಂತಕ ಡಾ. ರಾಜೇಂದ್ರ ಚೆನ್ನಿ ಹೇಳಿದರು.

ಬೆಳಗಾವಿಯಬಸವರಾಜ ಕಟ್ಟೀಮನಿ ಪ್ರತಿಷ್ಠಾನ ಶನಿವಾರ ಆಯೋಜಿಸಿದ್ದ ಬಸವರಾಜ ಕಟ್ಟೀಮನಿ ಸಾಹಿತ್ಯ ಸೈದ್ಧಾಂತಿಕ ಆಯಾಮಗಳ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಅವರು ಆಶಯ ಭಾಷಣ ಮಾಡಿದರು.

‘ಏಕಕಾಲಕ್ಕೆ ಹುಟ್ಟಿಕೊಂಡ ರಾಷ್ಟ್ರವಾದ ಹಾಗೂ ದೇಶದ ನಡುವೆ ಸಾಕಷ್ಟು ವ್ಯತ್ಯಾಸಗಳಿವೆ. ಕ್ಷಾತ್ರವೇ ಮುಖ್ಯವಾದ, ಮಹಿಳೆಯನ್ನು ವ್ಯಕ್ತಿಯಾಗಿ ಅಲ್ಲದೇ ಸಂಪ್ರದಾಯ ಹಾಗೂ ಮೌಲ್ಯಗಳ ಸರಕನ್ನಾಗಿ ನೋಡುವ ಮತ್ತು ಪವಿತ್ರ ಎಂಬ ಪರಿಕಲ್ಪನೆಯ ರಾಷ್ಟ್ರವಾದ ಹಲವರ ಸಾಹಿತ್ಯದ ಮುಖ್ಯ ಜೀವಸತ್ವವಾಗಿತ್ತು. ಆದರೆ ಕಟ್ಟೀಮನಿ ಅವರಂತ ದೇಶ ಪರಿಕಲ್ಪನೆ ಹೊಂದಿದ ಸಾಹಿತಿಗಳ ಕೃತಿಗಳಲ್ಲಿಸೋದರತ್ವವನ್ನು ಸಾರುವ ಹಾಗೂ ಮಹಿಳೆಹಯೂ ಪ್ರತಿಭಟಿಸಬಲ್ಲಳು ಎಂಬುದನ್ನು ತಿಳಿಸುವ ಅಂಶ ಪ್ರಬಲವಾಗಿ ಕಂಡುಬರುತ್ತದೆ’ ಎಂದರು.

ADVERTISEMENT

‘ಸಿದ್ಧಾಂತಗಳು ಒಂದು ಸೀಮಿತ ಚೌಕಟ್ಟು ಬಿಟ್ಟು ‘ಜಾತಿಗ್ರಸ್ಥ ಸಮಾಜ’ ಇದಾಗಿದ್ದು, ಇದಕ್ಕೆ ಮುಕ್ತಿ ಸಿಗುವುದು ತೀರಾ ಕಷ್ಟ. ಸಿದ್ಧಾಂತ ಎನ್ನುವುದು ಜೀವನದ ಅನುಭವಗಳಿಂದಲೇ ಕಟ್ಟಿಕೊಂಡಾಗ ಅಲ್ಲಿ ದೇಶೀಯತೆ ಇರುತ್ತದೆ. ಇವುಗಳೇ ಕಟ್ಟೀಮನಿ ಅವರ ಕೃತಿಗಳಲ್ಲಿ ಕಾಣಬಹುದು’ ಎಂದರು.

‘1950ರ ದಶಕದಲ್ಲಿ ರಚಿಸಿದ ಅವರ ಸಾಹಿತ್ಯದಲ್ಲಿ ಸೈದ್ಧಾಂತಿಕ ನಿಲುವು ಹಾಗೂ ಕಥಾ ವಸ್ತುಗಳು ಇಂದಿಗೂ ಪ್ರಸ್ತುತ ಎಂಬುದನ್ನು ಇಂದಿನ ಅನೇಕ ಬರಹಗಾರರು ದಾಖಲಿಸಿರುವುದು ಅವರ ಕಥಾ ವಸ್ತುವಿನ ಪ್ರಸ್ತುತತೆಯನ್ನು ಸೂಚಿಸುತ್ತದೆ. ಹಾಗೆಯೇ ಕಟ್ಟೀಮನಿ ಅವರ ಸಾಹಿತ್ಯದಲ್ಲಿ ಬಂಡಾಯದ ಗೆರೆಗಳೂ ಕಾಣಸಿಗುತ್ತವೆ’ ಎಂದು ಡಾ. ಚೆನ್ನಿ ಅಭಿಪ್ರಾಯಪಟ್ಟರು.

ವಿಚಾರ ಸಂಕಿರಣಕ್ಕೆ ಚಾಲನೆ ನೀಡಿದ ಹಿರಿಯ ಸಾಹಿತಿ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ, ‘ರಷ್ಯಾ ಕುರಿತು ಹೆಚ್ಚು ಓದಿಕೊಂಡಿದ್ದ ಹಾಗೂ ಸೋವಿಯತ್ ಲ್ಯಾಂಡ್‌ ಪ್ರಶಸ್ತಿ ಪಡೆದ ಕಟ್ಟೀಮನಿ ಅವರು ಕಾಮ್ರೆಡ್ ಆಗಿ ಬದಲಾಗಿದ್ದರು. ಆದರೆ ಅವರೇನಾದರೂ ಇಂದು ಇದ್ದಿದ್ದರೆ ಪುಟೀನ್‌ನ ಯುದ್ಧೋತ್ಸಾಹವನ್ನು ಒಪ್ಪಿಕೊಳ್ಳುತ್ತಿದ್ದರೇ ಎಂಬ ಪ್ರಶ್ನೆ ಎದುರಾಗುತ್ತದೆ’ ಎಂದರು.

‘ಸಿದ್ಧಾಂತ ಹಾಗೂ ವಿಚಾರದ ಅಭಿವೃದ್ಧಿ ಮುಖ್ಯವೇ ಹೊರತು, ನೆಲದ ಅಭಿವೃದ್ಧಿಯಲ್ಲ ಎಂಬ ನಂಬಿಕೆಯನ್ನು ಕಟ್ಟೀಮನಿ ಹೊಂದಿದ್ದರು. ಆದರೆ ಇಂದು ನೆಲದ ಮೋಹವೇ ಹೆಚ್ಚು ಮುನ್ನೆಲೆಗೆ ಬಂದಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಪ್ತತಿ ವ್ಯಕ್ತಿಯ ಮಾತು, ಬರಹ ಹಾಗೂ ಬದುಕು ಬೇರೆಬೇರೆಯೇ ಆಗಿರುತ್ತದೆ. ಆದರೆ ಅದರಲ್ಲಿ ಯಾವ ಟಿಸಿಲು ಸಮೃದ್ಧವಾಗಿರುತ್ತದೋ ಅದರ ಕುರಿತು ಹೆಚ್ಚು ಮಾತನಾಡುವುದು ಅಥವಾ ಬರೆಯುವುದೇ ಲೇಸು. ಬರೆದ ವ್ಯಕ್ತಿ ಅಗಲಬಹುದು. ಆದರೆ ಅವರ ಬರವಣಿಗೆ ಮಾತ್ರ ಉಳಿದಿರುತ್ತದೆ. ಅದನ್ನು ನಾವು ಕಾಲಕಾಲಕ್ಕೆ ತಕ್ಕಂತೆ ನಮ್ಮ ಚಿಂತನೆಗಳಿಗೆ ತಕ್ಕಂತೆ ವಿಶ್ಲೇಷಣೆ ಮಾಡುತ್ತೇವೆ’ ಎಂದರು.

‘ಪತ್ರಕರ್ತರೂ ಆಗಿದ್ದ ಕಟ್ಟಿಮನಿ ಅವರು ಸಮಾಜವನ್ನು ನೋಡುವ ದೃಷ್ಟಿಯೇ ಬೇರೆಯದ್ದಾಗಿತ್ತು. ಅವರ ಕಾದಂಬರಿಗಳು ವಿಶಿಷ್ಟವಾಗಿದ್ದವು. ಹೀಗಾಗಿ ಅವರ ಕಾದಂಬರಿಗಳು ಸೈದ್ಧಾಂತಿಕ ದೃಷ್ಟಿಕೋನದಿಂದಲೂ ಭಿನ್ನವಾಗಿವೆ. ಎಂದಿಗೂ ಯಾವುದೇ ಸಿದ್ಧಾಂತಗಳಿಗೆ ಶರಣಾಗದೆ ತಮ್ಮ ಬರಹಗಳನ್ನು ಮುಂದುವರಿಸಿದವರು ಕಟ್ಟೀಮನಿ’ ಎಂದು ಡಾ. ಪಟ್ಟಣಶೆಟ್ಟಿ ಅಭಿಪ್ರಾಯಪಟ್ಟರು.

ಟ್ರಸ್ಟ್ ಅಧ್ಯಕ್ಷ ಪ್ರೊ. ಮಲ್ಲಿಕಾರ್ಜುನ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಡಾ. ಬಸವರಾಜ ಸಾದರ, ಡಾ. ಕೆ.ಆರ್.ದುರ್ಗಾದಾಸ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.