ಅಳ್ನಾವರ: ಪಟ್ಟಣದ ಮಧ್ಯೆ ಭಾಗದಲ್ಲಿ ಹಾಯ್ದು ಹೋಗಿರುವ ಬೆಳಗಾವಿ- ತಾಳಗುಪ್ಪಾ ರಾಷ್ಟ್ರೀಯ ಹೆದ್ದಾರಿಯನ್ನು ಕಾಂಕ್ರೀಟ್ ಮಾಡುವ ಸಲುವಾಗಿ ವಿವಿಧೆಡೆ ರಸ್ತೆ ಅಗೆಯಲಾಗಿದೆ. ಮಳೆ ಆರಂಭವಾಗಿರುವುದರಿಂದ ಕಾಮಗಾರಿ ಅರ್ಧಕ್ಕೆ ನಿಂತಿದೆ. ಇದರಿಂದಾಗಿ ರಸ್ತೆ ಕೆಸರುಮಯವಾಗಿದೆ. ಇದರಲ್ಲಿ ಸಂಚರಿಸಲಾಗದೆ ವಾಹನಗಳು ಸಿಕ್ಕಿಬೀಳುತ್ತಿದ್ದು, ವಾಹನ ಸವಾರರು ಹೈರಾಣಾಗಿದ್ದಾರೆ.
ರಸ್ತೆಗೆ ಕಾಂಕ್ರೀಟ್ ಮಾಡುವ ಕಾಮಗಾರಿ ಆರಂಭವಾಗಿ ತಿಂಗಳು ಗತಿಸಿದೆ. ವಿದ್ಯಾನಗರ ಬಡಾವಣೆಯ ಹತ್ತಿರದ ರಸ್ತೆಯನ್ನು ಕಾಂಕ್ರೀಟ್ ಮಾಡಲು ಅಗೆಯಲಾಗಿದೆ. ಈಗ ಬಿಟ್ಟು ಬಿಡದೆ ಮಳೆ ಸುರಿಯತೊಡಗಿದೆ. ಹದಿನೈದಕ್ಕೂ ಹೆಚ್ಚು ದಿನ ಗತಿಸಿದ್ದು, ಕಾಂಕ್ರೀಟ್ ಹಾಕುವ ಕೆಲಸ ಅರ್ಧಕ್ಕೆ ನಿಂತಿದೆ.
ಮಳೆಯಿಂದಾಗಿ ರಸ್ತೆ ನಡುವೆ ದೊಡ್ಡ ಕಂದಕಗಳು, ಹೊಂಡಗಳು ನಿರ್ಮಾಣ ಆಗಿವೆ. ಕೆಸರುಮಯ ರಸ್ತೆಯಲ್ಲಿ ಸಾಗುವ ಭಾರಿ ವಾಹನಗಳು ಸಿಕ್ಕು ಬಿದ್ದು, ಜೆಸಿಬಿ ಯಂತ್ರ ಬಳಿಸಿ ಲಾರಿಗಳನ್ನು ಎತ್ತಲಾಗುತ್ತಿದೆ. ಕಳೆದ ಒಂದು ವಾರದಲ್ಲಿ ಹಲವಾರು ವಾಹನಗಳು ಕೆಸರಿನಲ್ಲಿ ಸಿಲುಕಿದ್ದವು. ದ್ವಿಚಕ್ರ ವಾಹನ ಸವಾರರು ಬಿದ್ದು ಏಟು ತಿಂದ ಘಟನೆ ನಿತ್ಯ ಘಟಿಸುತ್ತಿವೆ. ಕೆಸರು ತುಂಬಿದ ರಸ್ತೆಯಲ್ಲಿ ವಾಹನ ಸವಾರರು ಮಾಡುವ ಸರ್ಕಸ್ ದಿನನಿತ್ಯ ಕಾಣಬಹುದಾಗಿದೆ.
ರೈಲ್ವೆ ಸೇತುವೆ ಕೆಳಗೆ ಹಾಗೂ ಸಾಲು ಮರದ ತಿಮ್ಮಕ್ಕ ಉದ್ಯಾನವನ ಹತ್ತಿರ ರಸ್ತೆಯ ಒಂದು ಬದಿಯಲ್ಲಿ ಮಾತ್ರ ಕಾಂಕ್ರೀಟ್ ಹಾಕಿ, ಇನ್ನೊಂದು ಬದಿ ಸಂಚಾರಕ್ಕೆ ಬಿಡಲಾಗಿದೆ. ಇದರಿಂದ ವಾಹನ ಸವಾರರು ಸರಿಯಾಗಿ ದಾಟಲು ಆಗದೆ ಹರ ಸಾಹಸ ಪಡುತ್ತಿದ್ದಾರೆ.
ಗುಡ್ಡ ಕುಸಿತ ಉಂಟಾಗಿ ಗೋವಾ ರಾಜ್ಯಕ್ಕೆ ಹೋಗುವ ಅನಮೋಡ ರಸ್ತೆ ಬಂದ್ ಆಗಿದೆ. ಸರಕು ತುಂಬಿದ ಲಾರಿಗಳು ಅಳ್ನಾವರ ಮಾರ್ಗವಾಗಿ ಕಾರವಾರ ಮೂಲಕ ಗೋವಾ ತಲುಪಲು ಇದೇ ರಸ್ತೆ ಅವಲಂಬಿಸಿವೆ. ತಕ್ಷಣವೆ ಕಾಮಗಾರಿ ಆರಂಭಿಸುವಂತೆ ವಾಹನ ಸವಾರರು, ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಮಳೆಗಾಲ ಮನ್ಸೂಚನೆಯ ಪೂರ್ವ ಸಿದ್ದತೆ ಮಾಡಿಕೊಂಡು ರಸ್ತೆ ಅಭಿವೃದ್ಧಿ ಮಾಡಬೇಕು. ಮುಂದೆ ಆಗುವ ಅವಘಡ ತಪ್ಪಿಸಲು ತಕ್ಷಣವೆ ಕೆಲಸ ಆರಂಬಿಸಬೇಕು. ಈ ರಸ್ತೆಯಲ್ಲಿ ನಾನು ಪುಟ್ಟ ಟೀ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದೇನೆ. ರಸ್ತೆ ಸರಿ ಇಲ್ಲದಿರುವುದರಿಂದ ಗ್ರಾಹಕರು ಬರುತ್ತಿಲ್ಲ. ಇದರಿಂದ ವ್ಯಾಪಾರ ಇಲ್ಲದೇ ಜೀವನ ನಡೆಸುವುದು ಕಷ್ಟವಾಗಿದೆ.ಶಿವಾಜಿ ಕಿತ್ತೂರ ವಿದ್ಯಾನಗರ ನಿವಾಸಿ ಹಾಗೂ ಟೀ ಅಂಗಡಿ ಮಾಲಿಕ
ಪ್ರತಿ ವರ್ಷ ಮಳೆಗಾಲದಲ್ಲಿ ಪದೇ ಪದೇ ಆಗುವ ಈ ತೊಂದರೆಗೆ ಶಾಶ್ವತ ಪರಿಹಾರ ನೀಡಲು ಕಾಂಕ್ರೀಟ್ ರಸ್ತೆ ನಿರ್ಮಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಮಳೆ ನಿಂತ ನಂತರ ಕೆಲಸ ಆರಂಭವಾಗಲಿದೆ. ಸಾರ್ವಜನಿಕರ ಸಹಕರಿಸಬೇಕುಶ್ರೀಕಾಂತ ಗಾಯಕವಾಡ ಸಚಿವ ಸಂತೋಷ್ ಲಾಡ್ ಅವರ ಆಪ್ತ ಕಾರ್ಯದರ್ಶಿ
ಪರ್ಯಾಯ ರಸ್ತೆ ಇಲ್ಲದಿರುವುದರಿಂದ ಟ್ರಾಫಿಕ್ ಬೇರೆಡೆ ತಿರುಗಿಸಲು ಸಾಧ್ಯವಾಗುತ್ತಿಲ್ಲ. ಮಳೆ ನಿಂತ ತಕ್ಷಣ ಕಾಮಗಾರಿ ಆರಂಭವಾಗಲಿದೆ. 7 ಮೀಟರ್ ಕಾಂಕ್ರೀಟ್ ಹಾಗೂ ಮೂರು ಮೀಟರ್ ಫೇವರ್ಸ್ ಸೇರಿ ಒಟ್ಟು 10 ಮೀಟರ್ ಅಗಲ ಹಾಗೂ 630 ಮೀಟರ್ ಉದ್ದದ ರಸ್ತೆಯನ್ನು ₹2.50 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುವುದು ಉತ್ತಮಗದಗಕರ ಲೋಕೋಪಯೋಗಿ ಇಲಾಖೆ ಎಂಜಿನಿಯರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.