ADVERTISEMENT

ನೀತಿ ಸಂಹಿತೆ ಜಾರಿಗೆ ಮುನ್ನ ಬ್ಯಾನರ್ ತೆರವು

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2024, 14:50 IST
Last Updated 14 ಮಾರ್ಚ್ 2024, 14:50 IST
ನವಲಗುಂದದ ನೀಲಮ್ಮ ಜಲಾಶಯ ವೃತ್ತದ ಅಣ್ಣಿಗೇರಿ ಕ್ರಾಸ್ ಬಳಿ ಇದ್ದ ಬ್ಯಾನರ್ ಅನ್ನು ಪುರಸಭೆ ಸಿಬ್ಬಂದಿ ತೆರವು ಮಾಡಿದರು
ನವಲಗುಂದದ ನೀಲಮ್ಮ ಜಲಾಶಯ ವೃತ್ತದ ಅಣ್ಣಿಗೇರಿ ಕ್ರಾಸ್ ಬಳಿ ಇದ್ದ ಬ್ಯಾನರ್ ಅನ್ನು ಪುರಸಭೆ ಸಿಬ್ಬಂದಿ ತೆರವು ಮಾಡಿದರು   

ನವಲಗುಂದ: ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಾಗುವ ಮುನ್ನವೇ ನಗರದಲ್ಲಿ ಫ್ಲೆಕ್ಸ್‌, ಕಟೌಟ್‌ಗಳು, ಬ್ಯಾನರ್‌ಗಳನ್ನು ಪುರಸಭೆ ಸಿಬ್ಬಂದಿ ತೆರವುಗೊಳಿಸಿದರು.

‘ಯಾವುದೇ ಕ್ಷಣದಲ್ಲಿ ಚುನಾವಣೆಯ ದಿನಾಂಕ ಘೋಷಣೆಯಾಗಬಹುದು. ಅದಕ್ಕಾಗಿ ಸಿದ್ಧತೆ ಮಾಡಿಕೊಂಡಿರಿ’ ಎಂದು ಚುನಾವಣಾ ಆಯೋಗ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಯವರ ನಿರ್ದೇಶನದಂತೆ ಪಟ್ಟಣದ ವ್ಯಾಪ್ತಿಯಲ್ಲಿ ಸ್ಥಳೀಯ ಸಂಸ್ಥೆಗಳ ಸಿಬ್ಬಂದಿ ಬ್ಯಾನರ್‌ಗಳನ್ನು ತೆರವು ಮಾಡಿದರು.

ಕಳೆದ ಒಂದೆರಡು ತಿಂಗಳಿಂದ ರಾಜಕೀಯ ಪಕ್ಷಗಳ ಸಮಾವೇಶ, ಜಾತ್ರೆ, ಉತ್ಸವ, ಸಾಂಸ್ಕೃತಿಕ ಕಾರ್ಯಕ್ರಮ, ಕ್ರೀಡಾ ಚಟುವಟಿಕೆಗಳಿಗೆ ಶುಭಾಶಯ ಕೋರುವ ನೆಪದಲ್ಲಿ ರಾಜಕೀಯ ಮುಖಂಡರ ಬ್ಯಾನರ್‌, ಕಟೌಟ್‌ಗಳನ್ನು ಹಾಕಲಾಗಿತ್ತು. 

ADVERTISEMENT

ಪಟ್ಟಣದ ಪೆಟ್ರೋಲ್ ಪಂಪ್, ತಹಶೀಲ್ದಾರ್ ಕಚೇರಿ ಮುಂಭಾಗ, ಲಿಂಗರಾಜ ವೃತ್ತ, ನೀಲಮ್ಮ ಜಲಾಶಯ ವೃತ್ತ, ಬಸ್ ನಿಲ್ದಾಣ, ಶಂಕರ ಮಹಾವಿದ್ಯಾಲಯ ಕ್ರಾಸ್, ಗಣಪತಿ ದೇವಸ್ಥಾನ, ಗಾಂಧಿ ಮಾರುಕಟ್ಟೆ, ಬಾಲ್ಲೋದ್ಯಾನ, ಚವಡಿ ಬಯಲು, ಮಹೇಬೂಬ ನಗರ ಸೇರಿ ಪಟ್ಟಣದ ವಿವಿಧೆಡೆ ತೆರವು ಕಾರ್ಯ ನಡೆಯಿತು.

‘ಬ್ಯಾನರ್ ತೆರವುಗೊಳಿಸುವ ವಿಚಾರದಲ್ಲಿ ಅಧಿಕಾರಿಗಳು ತಾರತಮ್ಯ ಮಾಡುತ್ತಿದ್ದಾರೆ. ಆಡಳಿತಾರೂಢ ಕಾಂಗ್ರೆಸ್ ನಾಯಕರ ಬ್ಯಾನರ್ ತೆರವುಗೊಳಿಸದೆ, ಕೇವಲ ವಿರೋಧ ಪಕ್ಷಗಳ ಮುಖಂಡರ ಭಾವಚಿತ್ರವಿದ್ದ ಬ್ಯಾನರ್, ಬಂಟಿಂಗ್ಸ್ ತೆಗೆಯಲಾಗಿದೆ’ ಎಂದು ಜೆಡಿಎಸ್ ಮುಖಂಡ ಮೌಲಾಸಾಬ್ ವೈದ್ಯ ಆರೋಪಿಸಿದ್ದಾರೆ.

‘ನೀತಿ ಸಂಹಿತೆ ಜಾರಿಗೆ ಪೂರ್ವದಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಚುನಾವಣಾ ಆಯೋಗ ಸೂಚನೆ ನೀಡಿದೆ. ನೀತಿ ಸಂಹಿತೆ ಜಾರಿಯಾದ ಬಳಿಕ ಏನೆಲ್ಲ ಕ್ರಮ ಕೈಗೊಳ್ಳಬೇಕೊ ಅವುಗಳನ್ನು ಮುಂಚಿತವಾಗಿ ಮಾಡಲಾಗುತ್ತಿದೆ. ಯಾವುದೇ ತಾರತಮ್ಯ ಎಸಗುವ ಪ್ರಶ್ನೆಯೇ ಇಲ್ಲ. ಸರ್ಕಾರಿ ಯೋಜನೆಗಳ ಬ್ಯಾನರ್‌ಗಳಿಗೆ ಬಣ್ಣ ಬಳಿಯುವ ಕೆಲಸವನ್ನೂ ಮಾಡಲಾಗುವುದು’ ಎಂದು ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ್ ನಾಗನೂರ್ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.