ADVERTISEMENT

ನವಲಗುಂದ | ಪೌರಕಾರ್ಮಿಕರ ಕೊರತೆ: ಸ್ವಚ್ಛತೆ ಸವಾಲು

ನವಲಗುಂದ ಪುರಸಭೆ; ಪ್ರತಿದಿನ 10 ಟನ್‌ಗೂ ಹೆಚ್ಚು ತ್ಯಾಜ್ಯ ಉತ್ಪತ್ತಿ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2025, 5:20 IST
Last Updated 29 ಅಕ್ಟೋಬರ್ 2025, 5:20 IST
ನವಲಗುಂದ ಪುರಸಭೆ ಕಚೇರಿ
ನವಲಗುಂದ ಪುರಸಭೆ ಕಚೇರಿ   

ನವಲಗುಂದ: ಪಟ್ಟಣದಲ್ಲಿ ತ್ಯಾಜ್ಯ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದರೆ, ನಿಯಮಿತವಾಗಿ ಸ್ವಚ್ಛತಾ ಕಾರ್ಯ ಕೈಗೊಳ್ಳಲು ಪೌರಕಾರ್ಮಿಕರ ಕೊರತೆ ಎದುರಾಗಿದೆ.

ಪಟ್ಟಣದಲ್ಲಿ 35 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಪ್ರತಿದಿನ 10 ರಿಂದ 12 ಟನ್ ಕಸ ಉತ್ಪತ್ತಿಯಾಗುತ್ತಿದ್ದು, ಅದನ್ನು ವಿಲೇವಾರಿ ಮಾಡುವುದು ಪುರಸಭೆಗೆ ಸವಾಲಾಗಿ ಪರಿಣಮಿಸಿದೆ.

ಪ್ರತಿ 700 ನಾಗರಿಕರಿಗೆ ಒಬ್ಬ ಪೌರಕಾರ್ಮಿಕ ಇರಬೇಕು ಎಂಬ ನಿಯಮವಿದೆ. ಆದರೆ ಪುರಸಭೆಯಲ್ಲಿ 29 ಪೌರಕಾರ್ಮಿಕರು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪೌರಕಾರ್ಮಿಕರ ಕೊರತೆಯಿಂದಾಗಿ 23 ವಾರ್ಡ್‍ಗಳಲ್ಲಿ ಪ್ರತಿ ದಿನ ಸ್ವಚ್ಛತೆ ಕೈಗೊಳ್ಳಲು ಆಗುತ್ತಿಲ್ಲ.

ADVERTISEMENT

ಪಟ್ಟಣದ ಸುತ್ತ ಎರಡೂವರೆ ಕಿ.ಮೀ ವ್ಯಾಪ್ತಿಯಲ್ಲಿ ನೂತನ ಬಡಾವಣೆಗಳು ನಿರ್ಮಾಣಗೊಂಡಿದ್ದು, ಅಲ್ಲಿಯೂ ಸ್ವಚ್ಛತಾ ಕಾರ್ಯ ನಿಯಮಿತವಾಗಿ ನಡೆಯುತ್ತಿಲ್ಲ.

ಪ್ರತಿ ದಿನ ಬೆಳಿಗ್ಗೆ 5.30ರಿಂದ ಪೌರಕಾರ್ಮಿಕರು ಸ್ವಚ್ಛತಾ ಕಾರ್ಯ ಆರಂಭಿಸುತ್ತಾರೆ. ಗಾಂಧಿ ಮಾರುಕಟ್ಟೆಯಲ್ಲಿ ಆರು,  ಲಿಂಗರಾಜ ವೃತ್ತ, ಓಂ ಶಾಂತಿ ರಸ್ತೆ, ಇಬ್ರಾಹಿಂಪುರ ರಸ್ತೆಯಲ್ಲಿ ತಲಾ ಒಬ್ಬರು, ಬಸ್ ನಿಲ್ದಾಣದಲ್ಲಿ ಇಬ್ಬರು ಸೇರಿ  ವಿವಿಧೆಡೆ ಒಟ್ಟು 13 ಜನ ಪೌರಕಾರ್ಮಿಕರು ಕಸ ಗುಡಿಸುತ್ತಾರೆ. ನಾಲ್ವರು ಪೌರಕಾರ್ಮಿಕರು ಟ್ರ್ಯಾಕ್ಟರ್‌ಗೆ ಕಸ ತುಂಬಿಸುತ್ತಾರೆ. ಉಳಿದವರು ಚರಂಡಿ ಸ್ವಚ್ಛಗೊಳಿಸುತ್ತಾರೆ ಎನ್ನುತ್ತಾರೆ ಅಧಿಕಾರಿಗಳು.

ಪೌರಕಾರ್ಮಿಕರು ಪ್ರತಿದಿನ ಒತ್ತಡದಲ್ಲಿ ಕೆಲಸ ಮಾಡಬೇಕಾಗಿದೆ. ಈ ಮಧ್ಯೆ ಹಬ್ಬದ ಸಂದರ್ಭಗಳಲ್ಲಿ ಪಟ್ಟಣದಲ್ಲಿ ಹೆಚ್ಚು ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಪೌರಕಾರ್ಮಿಕರ ಕೊರತೆಯಿಂದಾಗಿ ಇರುವ ಕಾರ್ಮಿಕರ ಮೇಲೆ ಒತ್ತಡ ಉಂಟಾಗುತ್ತಿದೆ ಎಂದು ಪೌರಕಾರ್ಮಿಕರೊಬ್ಬರು ಅಳಲು ತೋಡಿಕೊಂಡರು.

‘ಈಗಿನ ಜನಸಂಖ್ಯೆಗೆ ಅನುಗುಣವಾಗಿ 40 ಪೌರಕಾರ್ಮಿಕರ ಅಗತ್ಯವಿದೆ. ಜನಸಂಖ್ಯೆಗೆ ತಕ್ಕಂತೆ ಕಾರ್ಮಿಕರ ಸಂಖ್ಯೆಯನ್ನು ಹೆಚ್ಚಿಸಬೇಕಿತ್ತು. ಆದರೆ, ಇರುವ ಕಾರ್ಮಿಕರಿಂದ ಸ್ವಚ್ಛತೆ ಮಾಡಿಸುತ್ತಿದ್ದೇವೆ’ ಎಂದು ಪುರಸಭೆ ಹಿರಿಯ ಆರೋಗ್ಯ ನಿರೀಕ್ಷಕರು ತಿಳಿಸಿದರು.

‘ಪ್ರತಿ ದಿನ ಎಲ್ಲ ವಾರ್ಡ್‍ಗಳಲ್ಲಿ ಕಸ ಸಂಗ್ರಹ ಮಾಡಲು ವಾಹನಗಳು ಹೋಗುತ್ತವೆ. ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಚೆಲ್ಲದೆ ವಿಂಗಡಣೆ ಮಾಡಿ ವಾಹನಗಳಲ್ಲಿ ಹಾಕಬೇಕು. ಆ ಮೂಲಕ ಸ್ವಚ್ಛತೆಗೆ ಸಹಕರಿಸಬೇಕು’ ಎಂದು ಪುರಸಭೆ ಮುಖ್ಯಾಧಿಕಾರಿ ಶರಣು ಪೂಜಾರ ಮನವಿ ಮಾಡಿದರು.

ಪಟ್ಟಣದ ಸ್ವಚ್ಛತೆಗೆ ಹೆಚ್ಚಿನ ಪೌರಕಾರ್ಮಿಕರ ಅಗತ್ಯ ಇದೆ. ಈ ಸಮಸ್ಯೆ ಕುರಿತು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಲಭ್ಯ ಇರುವ ಕಾರ್ಮಿಕರಿಂದ ಸ್ವಚ್ಛತೆ ಮಾಡಿಸಲಾಗುತ್ತಿದೆ
ಶರಣು ಪೂಜಾರ ಮುಖ್ಯಾಧಿಕಾರಿ ಪುರಸಭೆ ನವಲಗುಂದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.