ಪ್ರಜಾವಾಣಿ ವಾರ್ತೆ
ನವಲಗುಂದ: ತಾಲ್ಲೂಕಿನ ಗುಡಿಸಾಗರ ಗ್ರಾಮದಲ್ಲಿ ಅಸ್ವಸ್ಥರಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ 29 ಮಂದಿ ಪೈಕಿ 9 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ಧಾರೆ. ಮಹಿಳೆಯೊಬ್ಬರನ್ನು ಹುಬ್ಬಳ್ಳಿಯ ಕಿಮ್ಸ್‌ಗೆ ರವಾನಿಸಲಾಗಿದೆ. 19 ಮಂದಿ ಚಿಕಿತ್ಸೆ ಪಡೆಯುತ್ತಿದ್ಧಾರೆ.
ಗುಡಿಸಾಗರದ ಆರೋಗ್ಯ ಉಪಕೇಂದ್ರದಲ್ಲಿ ಕ್ಲಿನಿಕ್ ತೆರೆಯಲಾಗಿದೆ. ಗ್ರಾಮದಲ್ಲಿ ಮನೆಗಳ ಸಮೀಕ್ಷೆ ನಡೆಸಲಾಗುತ್ತಿದೆ.
ಶಾಸಕ ಎನ್.ಎಚ್. ಕೋನರಡ್ಡಿ, ಜಿಲ್ಲಾಧಿಕಾರಿ ದಿವ್ಯ ಪ್ರಭು, ಜಿಲ್ಲಾ ಪಂಚಾಯಿತಿ ಸಿಇಒ ಭುವನೇಶ ಪಾಟೀಲ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಅವರು ಬುಧವಾರ ತಾಲ್ಲೂಕು ಆಸ್ಪತ್ರೆಗೆ ಭೇಟಿ ನೀಡಿ ಅಸ್ವಸ್ಥರ ಆರೊಗ್ಯ ವಿಚಾರಿಸಿದರು.
‘ಕುಡಿಯುವ ನೀರಿನ ಕೆರೆಯಿಂದ ಈ ಘಟನೆ ಆಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಕೆರೆ, ಮೇಲ್ಮಟ್ಟದ ಜಲ ಸಂಗ್ರಹಾಗಾರ ಮತ್ತು ಮನೆ ನಳದ ನೀರು ಸಂಗ್ರಹಿಸಿ ಪರೀಕ್ಷೆಗೆ ರವಾನಿಸಲಾಗಿದೆ. ಪರೀಕ್ಷಾ ವರದಿ ಬಂದ ನಂತರ ಕ್ರಮ ವಹಿಸಲಾಗುವುದು. 30 ಆಶಾ ಸದಸ್ಯರ ತಂಡ ರಚಿಸಿ ಗ್ರಾಮದಲ್ಲಿ ಗ್ರಾಮದಲ್ಲಿ ಮನೆಮನೆ ಸಮೀಕ್ಷೆ ಆರಂಭಿಸಲಾಗಿದೆ. ಈವರೆಗೆ 600 ಕ್ಕೂ ಹೆಚ್ಚು ಮನೆಗಳ ಸಮೀಕ್ಷೆ ನಡೆಸಿ ಕುಟುಂಬಗಳ ಆರೋಗ್ಯ ಮಾಹಿತಿ ಸಂಗ್ರಹಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ತಿಳಿಸಿದರು.
‘ಗುಡಿಸಾಗರ ಗ್ರಾಮದಲ್ಲಿ ಮೂರು ಶುದ್ಧ ನೀರಿನ ಘಟಕಗಳಿದ್ದು (ಆರ್‌ಒ) ಪ್ಲಾಂಟ್‍ಗಳಿದ್ದು, ಸಣ್ಣ ಪುಟ್ಟ ದುರಸ್ತಿ ಇವೆ. ಈಗ ಒಂದನ್ನು ದುರಸ್ತಿಗೊಳಿಸಿ, ನೀರು ಸರಬರಾಜು ಮಾಡಲಾಗುತ್ತಿದೆ. ಉಳಿದವನ್ನು ತಕ್ಷಣಕ್ಕೆ ಸರಿಪಡಿಸಲು ಸೂಚನೆ ನೀಡಲಾಗಿದೆ. ಅಲ್ಲಿಯವರೆಗೆ ನವಲಗುಂದ ನೀಲಮ್ಮನ ಕೆರೆಯಿಂದ ಎರಡು ಟ್ಯಾಂಕರ್ ಮೂಲಕ ಶುದ್ಧೀಕರಿಸಿದ ನೀರನ್ನು ಗುಡಿಸಾಗರಕ್ಕೆ ಪೂರೈಸಲಾಗುತ್ತದೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಭುವನೇಶ ಪಾಟೀಲ ತಿಳಿಸಿದರು.
ಗ್ರಾಮದ ಕೆರೆಯ ಸುತ್ತಲೂ ಬೇಲಿ ವ್ಯವಸ್ಥೆ ಇಲ್ಲ. ಜಾನುವಾರು ಕೆರೆಗೆ ನುಗ್ಗುತ್ತವೆ. ನೀರು ಕಲುಷಿತವಾಗುತ್ತದೆ. ಕೆರೆ ಸುತ್ತಲೂ ತಂತಿ ಬೇಲಿ ಅಳವಡಿಸಬೇಕು. ಕೆರೆಯ ನೀರು ಶುದ್ಧೀಕರಣಕ್ಕೆ ಕ್ರಮವಹಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಸ್. ಎಂ.ಹೊನಕೇರಿ, ವೈದ್ಯಾಧಿಕಾರಿ ಡಾ.ರೂಪಾ ಕಿಣಗಿ, ತಹಶೀಲ್ದಾರ್ ಸುಧೀರ ಸಾಹುಕಾರ, ಕಾರ್ಯನಿರ್ವಾಹಕ ಅಧಿಕಾರಿ ಭಾಗ್ಯಶ್ರೀ ಜಹಗೀರದಾರ, ಸಿಪಿಐ ರವಿ ಕಪ್ಪತ್ತನವರ, ಸಂಗಪ್ಪ ಲಂಗೋಟಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರತ್ನಮ್ಮ ಗುಡಸಲಮನಿ ಇದ್ದರು.
ಗುಡಿಸಾಗರ ಗ್ರಾಮಕ್ಕೆ ಶುದ್ಧೀಕರಿಸಿದ ನೀರನ್ನು ಪೂರೈಸಬೇಕು. ಸ್ವಚ್ಛತೆ ಶುದ್ಧ ನೀರಿನ ಬಗ್ಗೆ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಬೇಕು.ಎನ್.ಎಚ್.ಕೋನರಡ್ಡಿ ಶಾಸಕ
ಉಪಕೇಂದ್ರದಲ್ಲಿ 70 ಮಂದಿಗೆ ಪರೀಕ್ಷೆ
ಗುಡಿಸಾಗರದಲ್ಲಿ ತೆರೆದಿರುವ ಕ್ಲಿನಿಕ್‌ನಲ್ಲಿ ಬುಧವಾರ ಗ್ರಾಮದ 70 ಮಂದಿ ಪರೀಕ್ಷೆ ಮಾಡಲಾಗಿದೆ. ವಾಂತಿಯಾಗಿದ್ದ ಐವರಿಗೆ ಚಿಕಿತ್ಸೆ ಔಷಧ ನೀಡಲಾಗಿದೆ. ಗ್ರಾಮದಲ್ಲಿ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ತಾಲ್ಲೂಕು ಅರೋಗ್ಯಾಧಿಕಾರಿ ಡಾ.ಎನ್.ಬಿ.ಕರ್ಲವಾಡ ‘ಪ್ರಜಾವಾಣಿ’ಗೆ ತಿಳಿಸಿದರು. ಮಂಗಳವಾರ ಆಸ್ಪತ್ರೆಗೆ ದಾಖಲಾಗಿದ್ದ 29 ಮಂದಿ ಪೈಕಿ 9 ಮಂದಿ ಬಿಡುಗಡೆಯಾಗಿದ್ಧಾರೆ. ಒಬ್ಬರನ್ನು ಕಿಮ್ಸ್‌ಗೆ ಕಳಿಸಲಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.