
ನವಲಗುಂದ: ‘ಗೋವಿನಜೋಳವನ್ನು ಬೆಂಬಲ ಬೆಲೆಯಡಿ ಖರೀದಿಸಲು ಶೀಘ್ರದಲ್ಲಿ ಕ್ರಮ ವಹಿಸಲಾಗುವುದು’ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ತಿಳಿಸಿದರು.
ಗೋವಿನಜೋಳವನ್ನು ಬೆಂಬಲ ಬೆಲೆಯಡಿ ಖರೀದಿಸಬೇಕೆಂದು ಕರ್ನಾಟಕ ರೈತ ಸೇನೆ ಸಂಘಟನೆಯಿಂದ ಪಟ್ಟಣದಲ್ಲಿ ರೈತರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸ್ಥಳಕ್ಕೆ ಶಾಸಕ ಎನ್.ಎಚ್.ಕೋನರಡ್ಡಿ ಹಾಗೂ ಜಿಲ್ಲಾಧಿಕಾರಿ ದಿವ್ಯಪ್ರಭು ಸೋಮವಾರ ಭೇಟಿ ನೀಡಿ ಪ್ರತಿಭಟನಾ ನಿರತರೊಂದಿಗೆ ಮಾತನಾಡಿದರು.
‘ಗೋವಿನಜೋಳ ಖರೀದಿ ಕುರಿತಾಗಿ ಸರ್ಕಾರದ ಮಟ್ಟದಲ್ಲಿ ಪ್ರಕ್ರಿಯೆ ನಡೆದಿದೆ. ರೈತರ ಒತ್ತಾಯವರನ್ನು ಸರ್ಕಾರದ ಗಮನಕ್ಕೆ ತಂದಿದ್ದೇವೆ. ಮುಖ್ಯಕಾರ್ಯದರ್ಶಿಯವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಸರ್ಕಾರದ ನಿರ್ದೇಶನ ಬಂದ ತಕ್ಷಣ ಖರೀದಿ ಕೇಂದ್ರ ಆರಂಭಿಸಲಾಗುವುದು’ ಎಂದು ದಿವ್ಯಪ್ರಭು ತಿಳಿಸಿದರು.
‘ಹೆಸರು ಕಾಳು ಖರೀದಿ ಕೇಂದ್ರದಲ್ಲಿ ಒಂಬತ್ತು ಸಾವಿರ ರೈತರು ನೋಂದಣಿ ಮಾಡಿಕೊಂಡಿದ್ದು, ಹೆಚ್ಚಿನ ಮಳೆಯಿಂದಾಗಿ ಹೆಸರು ಕಾಳು ಎಫ್‍ಕ್ಯೂ ಗುಣಮಟ್ಟದ್ದನ್ನು ಮಾತ್ರ ಖರೀದಿಲಾಗುತ್ತಿದ್ದು, ಈ ಕುರಿತಾಗಿ ನಾಫೆಡ್ ಸಂಸ್ಥೆಯ ಜತೆ ಮಾತನಾಡಿದ್ದು, ಹೆಸರು ಕಾಳನ್ನು ಎಬಿಸಿ ಮಾದರಿಯಲ್ಲಿ ವರ್ಗೀಕರಣ ಮಾಡಿ ಖರೀದಿಸಲು ಪ್ರಯತ್ನ ನಡೆದಿದೆ’ ಎಂದರು.
ತಹಶೀಲ್ದಾರ್ ಸುಧೀರ ಸಾವಕಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ರೈತ ಮುಖಂಡರಾದ ಲೋಕನಾಥ ಹೆಬಸೂರ, ಎಸ್,ಆರ್, ಪಾಟೀಲ್, ಎಸ್.ಎಸ್.ಪಾಟೀಲ್. ಶಿವಾನಂದ ಕರಿಗಾರ, ಪ್ರವೀಣ ಯರಗಟ್ಟಿ, ಡಿಎಚ್ಒ ಎಸ್.ಎಂ.ಹೊನಕೇರಿ, ವೈದ್ಯಾಧಿಕಾರಿ ರೂಪಾ ಕಿಣಗಿ ಇದ್ದರು.
ಗೋವಿನಜೋಳಕ್ಕೆ ಬೆಂಬಲ ಬೆಲೆ ನಿಗದಿ ಮಾಡಬೇಕು ಎಂದು ನವಲಗುಂದದ ರೈತ ಭವನ ಬಳಿ ರೈತರು ನಡೆಸುತ್ತಿದ್ದ ಹೋರಾಟ ಸ್ಥಳಕ್ಕೆ ಶಾಸಕ ಎನ್,ಎಚ್.ಕೋನರಡ್ಡಿ ಹಾಗೂ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಭೇಟಿ ನೀಡಿ ಭರವಸೆ ನೀಡಿದ ಬಳಿಕ ಶಂಕರಪ್ಪ ಅಂಬಲಿ, ಪ್ರತಿಭಟನಾನಿರತು ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದರು.
ಇದಕ್ಕೂ ಮುನ್ನ ಅಣ್ಣಿಗೇರಿ ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಜಿಲ್ಲಾ ಬಿಜೆಪಿ ಮುಖಂಡ ದೇವರಾಜ ದಾಡಿಬಾವಿ ಹೋರಾಟ ಸ್ಥಳಕ್ಕೆ ಭೇಟಿ ನೀಡಿ ರೈತರನ್ನುದ್ದೇಶಿಸಿ ಮಾತನಾಡಿದರು.
ಗೋವಿನಜೋಳವನ್ನು ಬೆಂಬಲ ಬೆಲೆಯಡಿ ಖರೀದಿ ಮಾಡಲು ಅನುಮತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಪತ್ರ ಬರೆದಿದೆ. ಸಂಪುಟ ಉಪ ಸಮಿತಿಯೂ ಬೆಂಬಲ ಬೆಲೆಯಡಿ ಗೋವಿನಜೋಳ ಖರೀದಿಗೆ ಶಿಫಾರಸು ಮಾಡಿದೆಎನ್.ಎಚ್.ಕೋನರಡ್ಡಿ ಶಾಸಕ
ಒಂದು ವಾರದಲ್ಲಿ ಗೋವಿನಜೋಳ ಖರೀದಿ ಪ್ರಕ್ರಿಯೆ ಆರಂಭಿಸದಿದ್ದರೆ ದೊಡ್ಡ ಪ್ರಮಾಣದಲ್ಲಿ ಹೋರಾಟ ನಡೆಸಲಾಗುವುದುಶಂಕರಪ್ಪ ಅಂಬಲಿ ರಾಜ್ಯ ಘಟಕದ ಅಧ್ಯಕ್ಷ ಕರ್ನಾಟಕ ರೈತ ಸೇನೆ
ಬಾಕಿ ಪರಿಹಾರ ಬಿಡುಗಡೆಗೆ ಕ್ರಮ
‘ಮುಂಗಾರಿನಲ್ಲಿ ಸತತ ಮಳೆಯಿಂದ ಸಂಭವಿಸಿದ ಬೆಳೆ ಹಾನಿಗೆ ₹ 65 ಕೋಟಿ ಪರಿಹಾರವನ್ನು ರೈತರ ಖಾತೆಗೆ ಪಾವತಿಸಲಾಗಿದೆ. ಕೆಲವು ರೈತರಿಗೆ ಹಣ ಜಮೆಯಾಗಿಲ್ಲ ಎಂದು ತಿಳಿದಿದೆ. ಅನುದಾನ ಬಿಡುಗಡೆಯಾದ ತಕ್ಷಣವೇ ನೇರವಾಗಿ ಖಾತೆಗೆ ಜಮೆ ಮಾಡುತ್ತೇವೆ’ ಎಂದು ದಿವ್ಯಪ್ರಭು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.