ADVERTISEMENT

ಹುಬ್ಬಳ್ಳಿ: ಮನೆಗಳ ಮಧ್ಯದಲ್ಲೊಂದು ಕೊಳಚೆ ಗುಂಡಿ!

ನವನಗರ: ಮಿಡ್‌ ಫೋರ್ಡ್‌ ಗಾರ್ಡನ್‌ ನಿವಾಸಿಗಳ ಗೋಳು

ನಾಗರಾಜ್ ಬಿ.ಎನ್‌.
Published 25 ಜುಲೈ 2023, 5:14 IST
Last Updated 25 ಜುಲೈ 2023, 5:14 IST
ಹುಬ್ಬಳ್ಳಿ ನವನಗರದ ಮಿಡ್‌ ಫೋರ್ಡ್‌ ಗಾರ್ಡನ್‌ ಬಡಾವಣೆ ಮಧ್ಯದಲ್ಲಿರುವ ಖಾಲಿ ನಿವೇಶನದಲ್ಲಿ ಆಳೆತ್ತರಕ್ಕೆ ಬೆಳೆದಿರುವ ಕಳೆಯ ಗಿಡಗಳು /ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ಹುಬ್ಬಳ್ಳಿ ನವನಗರದ ಮಿಡ್‌ ಫೋರ್ಡ್‌ ಗಾರ್ಡನ್‌ ಬಡಾವಣೆ ಮಧ್ಯದಲ್ಲಿರುವ ಖಾಲಿ ನಿವೇಶನದಲ್ಲಿ ಆಳೆತ್ತರಕ್ಕೆ ಬೆಳೆದಿರುವ ಕಳೆಯ ಗಿಡಗಳು /ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ   

ಹುಬ್ಬಳ್ಳಿ: ಸುತ್ತೆಲ್ಲ ಹತ್ತಾರು ಮನೆಗಳು. ಮಧ್ಯದಲ್ಲೊಂದು ಕೆರೆಯಂಥ ಖಾಲಿ ಪ್ರದೇಶ. ಮಳೆ ನೀರು ಹಾಗೂ ಗಟಾರದ ನೀರು ಅಲ್ಲಿಯೇ ಸಂಗ್ರಹವಾಗಿ, ಸುತ್ತಲಿನ ಮನೆಗಳ ಗೋಡೆಗಳೆಲ್ಲ ತೇವಗೊಂಡಿವೆ. ಲಕ್ಷಾಂತರ ರೂಪಾಯಿ ಸಾಲ ಮಾಡಿ ನಿರ್ಮಿಸಿಕೊಂಡ ಮನೆಗಳು ವರ್ಷ ಕಳೆಯುವಷ್ಟರಲ್ಲಿ ಹಾಳಾಗುತ್ತವೆ.

ನವನಗರದ ಪಂಚಾಕ್ಷರಿ ನಗರದ ಅನತಿ ದೂರದಲ್ಲಿರುವ ಮಿಡ್‌ ಫೋರ್ಡ್‌ ಗಾರ್ಡನ್‌ ಬಡಾವಣೆಯ ಸ್ಥಿತಿಯಿದು. ‘ಮೂಲಸೌಕರ್ಯ ಕಲ್ಪಿಸಲಾಗಿದೆ’ ಎಂದು ಷರಾ ಬರೆದು, ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಇಲಾಖೆ, ಎರಡು ವರ್ಷದ ಹಿಂದಷ್ಟೇ ಮಹಾನಗರ ಪಾಲಿಕೆಗೆ ಈ ಬಡಾವಣೆ ಹಸ್ತಾಂತರಿಸಿದೆ.

ಆದರೆ, ಕುಡಿಯುವ ನೀರಿನ ಸಮರ್ಪಕ ವ್ಯವಸ್ಥೆಯಿಲ್ಲ, ಗಟಾರ ಸೌಲಭ್ಯವಿಲ್ಲ, ಒಳಚರಂಡಿಯಂತೂ ಸಂಪೂರ್ಣ ಹದಗೆಟ್ಟಿದೆ.ಅಳವಡಿಸಿರುವ ವಿದ್ಯುತ್‌ ದೀಪವಂತೂ ಆಟಕ್ಕುಂಟು ಲೆಕ್ಕಕ್ಕಿಲ್ಲ. ರಸ್ತೆಯ ಕಥೆಯಂತೂ ಹೇಳತೀರದು.

ADVERTISEMENT

ಚರಂಡಿ, ಕುಡಿಯುವ ನೀರು, ವಿದ್ಯುತ್‌ ದೀಪ, ರಸ್ತೆ ಸೌಲಭ್ಯಕ್ಕಾಗಿ ಎರಡು ವರ್ಷಗಳಿಂದ ಸ್ಥಳೀಯರು ಪಾಲಿಕೆ ಕದ ತಟ್ಟುತ್ತಿದ್ದಾರೆ. ಬಡಾವಣೆಯ ಮಧ್ಯದಲ್ಲಿ ನೀರು ನಿಲ್ಲುವ ನಿವೇಶನದ ಕುರಿತು ಸಾಕಷ್ಟು ಬಾರಿ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಆದರೆ, ಈವರೆಗೂ ಆ ಗಂಭೀರ ಸಮಸ್ಯೆಗೆ ಪರಿಹಾರ ಮಾತ್ರ ದೊರೆಕಿಲ್ಲ.

ಏನಿದು ಕೆರೆಯಂಥ ನಿವೇಶನ? ಬಡಾವಣೆ ನಿರ್ಮಾಣ ಸಂದರ್ಭದಲ್ಲಿ ಮಾಲೀಕರು ಸುಮಾರು ಐದು–ಆರು ಗುಂಟೆ ಜಾಗದಲ್ಲಿನ ಮಣ್ಣನ್ನು ತೆಗೆದು ಇಟ್ಟಂಗಿಗೆ ಬಳಸಿದ್ದಾರೆ. ಸುಮಾರು ಆರು ಅಡಿ ಆಳ ಮಣ್ಣು ತೆಗೆದ ಪರಿಣಾಮ, ಆ ನಿವೇಶನ ಹೊಂಡವಾಗಿ ಕೆರೆಯಂತಾಗಿದೆ. ಸುತ್ತಲಿನ ನಿವೇಶವೆಲ್ಲ ಮಾರಾಟವಾಗಿದೆ. ಆದರೆ, ಈ ನಿವೇಶನ ಹೊಂಡವಾಗಿದೆ ಎಂದು ಖರೀದಿಗೆ ಯಾರೂ ಮುಂದೆ ಬರುತ್ತಿಲ್ಲ. ಮಳೆಗಾಲದಲ್ಲಿ ಸುತ್ತಲಿನ ಬಡಾವಣೆಯ ನೀರೆಲ್ಲ ಅಲ್ಲಿಯೇ ಸಂಗ್ರಹವಾಗುತ್ತದೆ. ಇದರ ಪರಿಣಾಮ ಅಕ್ಕಪಕ್ಕದಲ್ಲಿ ಮೇಲ್ಮಟ್ಟದಲ್ಲಿ ನಿರ್ಮಿಸಿಕೊಂಡ ಮನೆಗಳ ತಳಪಾಯ, ಗೋಡೆಗಳು ಹಿಗ್ಗುತ್ತಿವೆ. ಕೆಲವರ ಕಾಂಪೌಂಡ್‌ ನೀರಿಗೆ ಹಿಗ್ಗಿ, ಈಗಲೋ ಆಗಲೇ ಉರುಳಿ ಬೀಳುವ ಸ್ಥಿತಿಯಲ್ಲಿದೆ. ಅಲ್ಲದೆ, ಈ ನಿವೇಶನದಲ್ಲಿ ಆಳೆತ್ತರದ ಕಳೆಗಳು ಹಿಂಡು ಹಿಂಡಾಗಿ ಬೆಳೆದಿದ್ದು, ಅಸಹನೀಯ ವಾತಾವರಣ ಸೃಷ್ಟಿಸಿದೆ.

‘ಗಟಾರ ವ್ಯವಸ್ಥೆ ಸರಿಯಿರದ ಕಾರಣ, ಕೊಳಚೆ ನೀರೆಲ್ಲ ಖಾಲಿ ನಿವೇಶನದಲ್ಲಿಯೇ ಸಂಗ್ರಹವಾಗುತ್ತಿದೆ. ಹಾವು, ಚೇಳುಗಳ ಆವಾಸ ಸ್ಥಾನವಾಗಿ ಮಾರ್ಪಟ್ಟಿದ್ದು, ಹಗಲಿನಲ್ಲಿಯೂ ಓಡಾಡಲು ಭಯ ಪಡುವಂತಾಗಿದೆ.

ಹುಬ್ಬಳ್ಳಿ ನವನಗರದ ಮಿಡ್‌ ಫೋರ್ಡ್‌ ಗಾರ್ಡನ್‌ ಬಡಾವಣೆಯಲ್ಲಿನ ಒಳಚರಂಡಿ ಹಾಳಾದ ಪರಿಣಾಮ ನಿವೇಶನಕ್ಕೆ ನುಗ್ಗಿದ ಕೊಳಚೆ ನೀರು /ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ನವನಗರದ ಮಿಡ್‌ ಫೋರ್ಡ್‌ ಗಾರ್ಡನ್‌ ಬಡಾವಣೆಗೆ ಶುಕ್ರವಾರ ಪಾಲಿಕೆ ಅಧಿಕಾರಿಗಳು ಭೇಟಿ ನೀಡಿ ಸ್ಥಳೀಯರ ಸಮಸ್ಯೆ ಆಲಿಸಿದರು
ವಿನುತಾ ಅಂಗಡಿ ಸ್ಥಳೀಯ ನಿವಾಸಿ
ಸೌಮ್ಯಾ ಕಿರಿಯ ಎಂಜಿನಿಯರ್‌ ಹು–ಧಾ ಮಹಾನಗರ ಪಾಲಿಕೆ
ಕೊಳಚೆ ವಾಸನೆಯಿಂದ ಹೊಸದಾಗಿ ನಿರ್ಮಿಸಿಕೊಂಡ ಮನೆಯಲ್ಲೂ ನೆಮ್ಮದಿಯಿಂದ ಬದುಕಲು ಆಗುತ್ತಿಲ್ಲ. ಊಟ ತಿಂಡಿ ತಿನ್ನುವಾಗ ಉಸಿರುಗಟ್ಟಿದಂಥ ಪರಿಸ್ಥಿತಿ. ಪಾಲಿಕೆ ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ.
–ವಿನುತಾ ಅಂಗಡಿ ಸ್ಥಳೀಯ ನಿವಾಸಿ
ಲಕ್ಷ ಲಕ್ಷ ಸಾಲ ಮಾಡಿ ಮನೆ ನಿರ್ಮಿಸಿಕೊಂಡಿದ್ದೇವೆ. ಪ್ರತಿ ಬಾರಿ ಮಳೆಗಾಲದಲ್ಲಿ ಮನೆಗಳ ಗೋಡೆ ಹಿಗ್ಗಿ ಹಾಳಾಗುತ್ತಿವೆ. ನಿವೇಶನದಲ್ಲಿನ ಮಣ್ಣು ತೆಗೆದ ಮಾಲೀಕರಿಗೆ ನೋಟಿಸ್‌ ನೀಡಿ ಮಣ್ಣು ಭರ್ತಿ ಮಾಡಲು ಸೂಚಿಸಬೇಕು.
ಶಿವಾನಂದ ತಡಸದ ಸ್ಥಳೀಯ ನಿವಾಸಿ

ಮಾಲೀಕರಿಗೆ ನೋಟಿಸ್‌’ ‘ಅವೈಜ್ಞಾನಿಕವಾಗಿ ನಿರ್ಮಾಣವಾದ ಚರಂಡಿಗಳನ್ನು ಸರಿಪಡಿಸಿ ನೀರು ಸರಾಗವಾಗಿ ಹರಿಯಲು ಕ್ರಮ ಕೈಗೊಳ್ಳುತ್ತೇವೆ. ಆದರೆ ನಿವೇಶನದಲ್ಲಿ 5 ಅಡಿಗಿಂತ ಹೆಚ್ಚು ಆಳ ಮಣ್ಣು ತೆಗೆಯಲಾಗಿದೆ. ಚರಂಡಿ ಎರಡು ಮೂರು ಅಡಿ ಆಳವಿದೆ. ಜೆಸಿಬಿಯಿಂದ ಕೆಲಸ ಮಾಡಿದರೂ ನಿವೇಶನದ ನೀರು ಪೂರ್ಣ ಪ್ರಮಾಣದಲ್ಲಿ ಖಾಲಿಯಾಗುವುದಿಲ್ಲ. ನಿವೇಶನದ ಮಾಲೀಕರಿಗೆ ನೋಟಿಸ್‌ ನೀಡಿ ನಾಲ್ಕು–ಐದು ದಿನಗಳಲ್ಲಿ ಉತ್ತರಿಸುವಂತೆ ಸೂಚಿಸುತ್ತೇವೆ. ನಂತರ ಮುಂದಿನ ಕ್ರಮ ಕೈಗೊಂಡು ಶಾಶ್ವತ ಪರಿಹಾರ ನೀಡಲಾಗುವುದು’ ಎಂದು ಪಾಲಿಕೆ ಕಿರಿಯ ಎಂಜಿನಿಯರ್‌ ಸೌಮ್ಯಾ ಹೇಳಿದರು. ‘ಬಡಾವಣೆಯಲ್ಲಿದ್ದ ಒಳಚರಂಡಿಯ ಸಫ್ಟಿಕ್‌ ಟ್ಯಾಂಕ್‌ ತುಂಬಿರುವುದರಿಂದ ಚರಂಡಿ ನೀರು ಅಲ್ಲಲ್ಲಿಯೇ ಮಡುಗುಟ್ಟಿ ದುರ್ವಾಸನೆ ಬರುತ್ತಿದೆ. ತ್ಯಾಜ್ಯ ನಿರ್ಹವಣಾ ವಿಭಾಗಕ್ಕೆ ನಿವಾಸಿಗಳೆಲ್ಲ ಅರ್ಜಿ ಬರೆದು ವಿನಂತಿಸಿದರೆ ಟ್ಯಾಂಕ್‌ ಶುಚಿಗೊಳಿಸುತ್ತಾರೆ’ ಎಂದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.