ADVERTISEMENT

ನವರಾತ್ರಿ; ಗೊಂಬೆ ಪ್ರದರ್ಶನ ಆಕರ್ಷಣೆ

ರೇಖಾ ಬನ್ನಿಮಠ ಮನೆಯಲ್ಲಿ 300ಕ್ಕೂ ಹೆಚ್ಚು ಗೊಂಬೆಗಳ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2025, 6:06 IST
Last Updated 30 ಸೆಪ್ಟೆಂಬರ್ 2025, 6:06 IST
ಹುಬ್ಬಳ್ಳಿಯ ಗೋಕುಲ ರಸ್ತೆಯ ಅಕ್ಷಯ ಪಾರ್ಕ್‌ನಲ್ಲಿರುವ ರೇಖಾ ಬನ್ನಿಮಠ ಅವರ ಮನೆಯಲ್ಲಿ ಕೂರಿಸಿರುವ ಗೊಂಬೆಗಳು
ಹುಬ್ಬಳ್ಳಿಯ ಗೋಕುಲ ರಸ್ತೆಯ ಅಕ್ಷಯ ಪಾರ್ಕ್‌ನಲ್ಲಿರುವ ರೇಖಾ ಬನ್ನಿಮಠ ಅವರ ಮನೆಯಲ್ಲಿ ಕೂರಿಸಿರುವ ಗೊಂಬೆಗಳು   

ಹುಬ್ಬಳ್ಳಿ: ಒಂದೆಡೆ ಕೈಲಾಸ ಪರ್ವತ, ಮತ್ತೊಂದೆಡೆ ಸಮುದ್ರ ಮಂಥನ ಮತ್ತು ಶ್ರೀಕೃಷ್ಣನ ವಿವಿಧ ಅವತಾರದ ಗೊಂಬೆಗಳು... ಹೀಗೆ ಇಲ್ಲಿನ ಗೋಕುಲ ರಸ್ತೆಯ ಅಕ್ಷಯ ಪಾರ್ಕ್‌ನಲ್ಲಿರುವ ರೇಖಾ ಬನ್ನಿಮಠ ಅವರ ಮನೆಯಲ್ಲಿ ವಿವಿಧ ಬಗೆಯ ಗೊಂಬೆಗಳ ಲೋಕ ಅನಾವರಣಗೊಂಡಿದೆ. 

‌ನವರಾತ್ರಿ ಸಂದರ್ಭದಲ್ಲಿ ರೇಖಾ ಅವರು ಕಳೆದ ಐದು ವರ್ಷಗಳಿಂದ ತಮ್ಮ ಮನೆಯಲ್ಲಿ ಗೊಂಬೆಗಳನ್ನು ಕೂರಿಸುತ್ತಿದ್ದಾರೆ. ಬೆಂಗಳೂರಿನಲ್ಲಿರುವ ಅವರ ಬಂಧುಗಳ ಮನೆಯಲ್ಲಿ ಗೊಂಬೆಗಳನ್ನು ಕೂರಿಸುವುದು ಇವರಿಗೆ ಪ್ರೇರಣೆಯಾಗಿದೆ. 

ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಅವರು, ಗೊಂಬೆಗಳ ಸಂಗ್ರಹವನ್ನು ಹವ್ಯಾಸವಾಗಿಸಿಕೊಂಡಿದ್ದಾರೆ. ಯಾವುದೇ ಊರಿಗೆ ಹೋದರೂ ಅಲ್ಲಿಂದ ಗೊಂಬೆಗಳನ್ನು ಖರೀದಿಸಿ ತರುತ್ತಾರೆ. ಅವರ ಬಳಿ 300ಕ್ಕೂ ಹೆಚ್ಚು ಗೊಂಬೆಗಳ ಸಂಗ್ರಹ ಇದ್ದು, ಅವುಗಳಲ್ಲಿ ಹೆಚ್ಚಿನವುಗಳನ್ನು ಮೈಸೂರಿನಿಂದ ಖರೀದಿಸಿ ತರಲಾಗಿದೆ. ಇನ್ನೂ ಕೆಲವು ಗೊಂಬೆಗಳನ್ನು ತಾವೇ ಮನೆಯಲ್ಲಿಯೇ ಸಿದ್ಧಪಡಿಸಿದ್ದಾರೆ.

ADVERTISEMENT

ಗೊಂಬೆಗಳ ಪ್ರಪಂಚ: ಈ ವರ್ಷ ರೇಖಾ ಅವರ ಮನೆಯಲ್ಲಿ ಪ್ರತಿಷ್ಠಾಪಿಸಿರುವ ಗೊಂಬೆಗಳು ಗಮನ ಸೆಳೆಯುತ್ತಿವೆ. ಐದು ಮೆಟ್ಟಿಲುಗಳನ್ನು ನಿರ್ಮಿಸಿ, ಅದರಲ್ಲಿ ಗೊಂಬೆಗಳನ್ನು ಕೂರಿಸಲಾಗಿದೆ. ಕೈಲಾಸ ಮಂಟಪ, ಕೈಲಾಸ ಪರ್ವತ, ಸಮುದ್ರ ಮಂಥನ, ಅಷ್ಟ ಲಕ್ಷ್ಮಿಯರು, ದಶಾವತಾರ, ರಾಮ, ಲಕ್ಷ್ಮಣ, ಸೀತೆ, ಲವ-ಕುಶರ ಸೆಟ್‌ ಹಾಗೂ ಕೃಷ್ಣನ ಬಾಲ್ಯದ ದಿನಗಳಿಂದ ಹಿಡಿದು ಕಂಸನ ಸಂಹಾರದವರೆಗಿನ ವಿವಿಧ ಅವತಾರಗಳ ಗೊಂಬೆಗಳು ಇಲ್ಲಿವೆ. ಮನೆಯಲ್ಲಿಯೇ ಸಿದ್ಧಪಡಿಸಿರುವ ಬಾರ್ಬಿಡಾಲ್‌ ಅನ್ನು ವಿಶೇಷವಾಗಿ ಅಲಂಕರಿಸಿ ಪ್ರತಿಷ್ಠಾಪಿಸಲಾಗುತ್ತದೆ.

‘ನನ್ನ ಗೊಂಬೆ ಸಂಗ್ರಹ ಅಭಿರುಚಿಗೆ  ಬಂಧುಗಳು, ಸ್ನೇಹಿತರು, ಆಪ್ತರು ಪ್ರೋತ್ಸಾಹ ನೀಡುತ್ತಿದ್ದು, ಜನ್ಮದಿನ ಸೇರಿದಂತೆ ವಿಶೇಷ ದಿನಗಳಲ್ಲಿ ನನಗೆ ಗೊಂಬೆಗಳನ್ನೇ ಉಡುಗೊರೆಯಾಗಿ ನೀಡುತ್ತಾರೆ’ ಎನ್ನುತ್ತಾರೆ ರೇಖಾ.  

‘ಸೆ.22ರಿಂದ ಗೊಂಬೆಗಳ ಪ್ರದರ್ಶನ ಆರಂಭವಾಗಿದ್ದು, ಅ.3ರ ವರೆಗೆ ಸಂಜೆ 6ರಿಂದ ರಾತ್ರಿ 9 ರವರೆಗೆ ಪ್ರದರ್ಶನ ಇರುತ್ತದೆ. ಅಕ್ಕಪಕ್ಕದ ಮನೆಯವರು, ಪರಿಚಯಸ್ಥರು, ಬಂಧುಗಳು ಗೊಂಬೆಗಳ ವೀಕ್ಷಣೆಗೆ ಬರುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಗೊಂಬೆಗಳ ಸಂಗ್ರಹ ಹೆಚ್ಚುತ್ತಿದೆ’ ಎಂದರು.

ಚಿಕ್ಕ ಗೊಂಬೆಗಳಿಂದ ಹಿಡಿದು ದೊಡ್ಡ ಗಾತ್ರದ ಗೊಂಬೆಗಳನ್ನು ಐದು ಹಂತಗಳಲ್ಲಿ ಜೋಡಿಸಲಾಗಿದೆ. ನಮ್ಮ ಸಂಪ್ರದಾಯ ಬಿಂಬಿಸುವ ಗೊಂಬೆಗಳನ್ನು ಪ್ರತಿಷ್ಠಾಪಿಸುವುದು ಸಂತಸ ತರುತ್ತದೆ
ರೇಖಾ ಬನ್ನಿಮಠ ಅಕ್ಷಯ ಪಾರ್ಕ್‌ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.