ADVERTISEMENT

ಎನ್‌ಸಿಸಿ ಸೇರ್ಪಡೆಗೆ ಕಾಯುತ್ತಿವೆ 800 ಕಾಲೇಜುಗಳು

ಗೋವಾ–ಕರ್ನಾಟಕ ವಿಭಾಗದ ಎನ್‌ಸಿಸಿ ಉಪ ನಿರ್ದೇಶಕ ಬ್ರಿಗೇಡಿಯರ್‌ ಡಿ.ಎಂ. ಪೂರ್ವಿಮಠ

​ಪ್ರಜಾವಾಣಿ ವಾರ್ತೆ
Published 27 ಮೇ 2019, 14:59 IST
Last Updated 27 ಮೇ 2019, 14:59 IST
ಹುಬ್ಬಳ್ಳಿಯಲ್ಲಿ ಎನ್‌ಸಿಸಿ ತರಬೇತಿದಾರರ ನವೀಕರಣಗೊಂಡ ವಸತಿ ಗೃಹವನ್ನು ಸೋಮವಾರ ಗೋವಾ–ಕರ್ನಾಟಕ ವಿಭಾಗದ ಎನ್‌ಸಿಸಿ ಉಪ ನಿರ್ದೇಶಕ ಬ್ರಿಗೇಡಿಯರ್‌ ಡಿ.ಎಂ. ಪೂರ್ವಿಮಠ ಉದ್ಘಾಟಿಸಿದರು  –ಪ್ರಜಾವಾಣಿ ಚಿತ್ರ
ಹುಬ್ಬಳ್ಳಿಯಲ್ಲಿ ಎನ್‌ಸಿಸಿ ತರಬೇತಿದಾರರ ನವೀಕರಣಗೊಂಡ ವಸತಿ ಗೃಹವನ್ನು ಸೋಮವಾರ ಗೋವಾ–ಕರ್ನಾಟಕ ವಿಭಾಗದ ಎನ್‌ಸಿಸಿ ಉಪ ನಿರ್ದೇಶಕ ಬ್ರಿಗೇಡಿಯರ್‌ ಡಿ.ಎಂ. ಪೂರ್ವಿಮಠ ಉದ್ಘಾಟಿಸಿದರು  –ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ರಾಜ್ಯದಲ್ಲಿ ಎನ್‌ಸಿಸಿಗೆ ಸೇರ್ಪಡೆಗೊಳ್ಳಲು 15 ವರ್ಷಗಳಿಂದ ಸುಮಾರು 800 ಕಾಲೇಜುಗಳು ಎದುರು ನೋಡುತ್ತಿವೆ. ಆದರೆ, ಸೀಮಿತ ಅವಕಾಶವಿರುವುದರಿಂದ ಆ ಎಲ್ಲ ಕಾಲೇಜುಗಳಿಗೆ ಅವಕಾಶ ನೀಡಲಾಗುತ್ತಿಲ್ಲ ಎಂದು ಗೋವಾ–ಕರ್ನಾಟಕ ವಿಭಾಗದ ಎನ್‌ಸಿಸಿ ಉಪ ನಿರ್ದೇಶಕ ಬ್ರಿಗೇಡಿಯರ್‌ ಡಿ.ಎಂ.ಪೂರ್ವಿಮಠ ಹೇಳಿದರು.

ಗದಗ ರಸ್ತೆಯಲ್ಲಿರುವ ಎನ್‌ಸಿಸಿ(ನ್ಯಾಷನಲ್ ಕೆಡೆಟ್ ಕೋರ್) ತರಬೇತುದಾರರ ನವೀಕೃತ ವಸತಿ ಗೃಹವನ್ನು ಸೋಮವಾರ ಉದ್ಘಾಟಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಎನ್‌ಸಿಸಿ ಜಗತ್ತಿನ ಅತಿ ದೊಡ್ಡ ಸಮವಸ್ತ್ರಧಾರಿ ವಿದ್ಯಾರ್ಥಿಗಳ ಸಂಘ. ಇದರಡಿಯಲ್ಲಿ 8 ಲಕ್ಷ ವಿದ್ಯಾರ್ಥಿಗಳು ಶಿಸ್ತುಬದ್ಧವಾದ ತರಬೇತಿ ಪಡೆಯುತ್ತಿದ್ದಾರೆ ಎಂದರು.

ADVERTISEMENT

ಎನ್‌ಸಿಸಿಗೆ ಅನುಮತಿ ಪಡೆದ ಕೆಲವು ಶಾಲಾ, ಕಾಲೇಜುಗಳಲ್ಲಿ ಸಮರ್ಪಕವಾದ ತರಬೇತಿ ದೊರೆಯುತ್ತಿಲ್ಲ ಎನ್ನುವುದು ಅರಿವಿಗೆ ಬಂದಿದೆ. ಅನುಮತಿ ಪಡೆದು ವಿದ್ಯಾರ್ಥಿಗಳಿಗೆ ತರಬೇತಿ ನೀಡದಿರುವುದು ಸರಿಯಾದ ಕ್ರಮವಲ್ಲ. ಈ ಹಿನ್ನೆಲೆಯಲ್ಲಿ ಕಳೆದ ವರ್ಷ 11 ಕಾಲೇಜುಗಳ ಎನ್‌ಸಿಸಿ ಮಾನ್ಯತೆ ರದ್ದು ಪಡಿಸಲಾಗಿದೆ ಎಂದರು.

ಯುವ ಸಮುದಾಯಕ್ಕೆ ನಾಯಕತ್ವ ಗುಣ ಮತ್ತು ಜೀವನ ಕೌಶಲವನ್ನು ಎನ್‌ಸಿಸಿ ಕಲಿಸುತ್ತದೆ. ಜ್ಯೂನಿಯರ್ ಮತ್ತು ಸೀನಿಯರ್ ಎಂಬ ಎರಡು ವಿಭಾಗದಲ್ಲಿ ಶಾಲಾ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ದಾಖಲಾಗಬಹುದು. ಪ್ರತಿ ವಾರ ಶಾಲಾ, ಕಾಲೇಜುಗಳಲ್ಲಿ ಪರೇಡ್ ನಡೆಯುತ್ತದೆ. ಅಲ್ಲದೆ, ವರ್ಷಕ್ಕೊಮ್ಮೆ ಹತ್ತು ದಿನಗಳ ಶಿಬಿರಗಳನ್ನು ಸಹ ನಡೆಸಲಾಗುತ್ತದೆ. ಸೇನಾಪಡೆಯ ದೈನಂದಿನ ಚಟುವಟಿಕೆಗಳ ಹಾಗೆಯೇ ದಿನಚರಿ ಇರುವುದರಿಂದ ವಿದ್ಯಾರ್ಥಿಗಳಲ್ಲಿ ಉತ್ಸಾಹ ತುಂಬುತ್ತದೆ. ಇಲ್ಲಿ ತರಬೇತಿ ಪಡೆದವರು ನೌಕಾ ಪಡೆ, ವಾಯುಪಡೆ ಹಾಗೂ ಸೇನೆಗೆ ಆಯ್ಕೆಯಾಗಲು ಮತ್ತು ಕಾರ್ಯ ನಿರ್ವಹಿಸಲು ಅನುಕೂಲವಾಗುತ್ತದೆ. ನೌಕಾಪಡೆಯಲ್ಲಿಯೇ ಸುಮಾರು 55 ಸಾವಿರ ಎನ್‌ಸಿಸಿ ಕೆಡಿಟ್‌ಗಳು ಸೇವೆ ಸಲ್ಲಿಸುತ್ತಿದ್ದಾರೆ’ ಎಂದರು.

ಬೆಳಗಾವಿ ವಿಭಾಗದ ಎನ್‌ಸಿಸಿ ಗ್ರುಪ್‌ ಕಮಾಂಡರ್‌ ಕರ್ನಲ್‌ ಜೆ.ಜೆ. ಅಬ್ರಾಹಂ, ಹುಬ್ಬಳ್ಳಿಯ ಕಮಾಂಡಿಂಗ್‌ ಅಧಿಕಾರಿ ಲೆಫ್ಟಿನೆಂಟ್ ಕರ್ನಲ್‌ ವಿವೇಕಾನಂದ ಅಳಗವಾಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.