ಧಾರವಾಡ: ‘ರೈತರಿಗೆ ಅಗತ್ಯವಿರುವ ತಾಂತ್ರಿಕ ವಿಚಾರಗಳಣ್ನು ನೀಡಲು ವಿಶ್ವವಿದ್ಯಾಲಯ ಸದಾ ಸಿದ್ಧವಿದೆ’ ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಡಾ. ಆರ್.ಬಸವರಾಜಪ್ಪ ಹೇಳಿದರು.
ಕೃಷಿ ವಿಶ್ವವಿದ್ಯಾಲಯದಲ್ಲಿ ಶನಿವಾರದಿಂದ ಆರಂಭವಾದ ಕೃಷಿ ಮೇಳದಲ್ಲಿ ಬೀಜ ಮೇಳದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಕೃಷಿಯ ಜೊತೆಗೆ ರೈತರು ಪೂರಕ ಚಟುವಟಿಕೆಗಳನ್ನು ಕೈಗೊಳ್ಳಬೇಕು ಹಾಗೂ ಸಮಗ್ರ ಕೃಷಿಯನ್ನು ಅಳವಡಿಸಿಕೊಳ್ಳಬೇಕು’ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದಬೀಜ ಘಟಕದ ವಿಶೇಷ ಅಧಿಕಾರಿ ಡಾ. ಜೆ.ಎಸ್.ಹಿಳ್ಳಿ, ‘ಆಹಾರ ಉತ್ಪಾದನೆ ಹೆಚ್ಚಿಸಲು ಉತ್ತಮ ಬೀಜ ಬೇಕು. ಆದ್ದರಿಂದ ರೈತರು ಬೀಜೋತ್ಪಾದನೆಯಲ್ಲಿ ತೊಡಗಿಸಿಕೊಳ್ಳಬೇಕು. ಇದಕ್ಕೆ ಕೃಷಿ ವಿಶ್ವವಿದ್ಯಾಲಯದ ಬೀಜ ಘಟಕದ ಸಹಕಾರವಿದೆ’ ಎಂದರು.
ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣ ಸಂಸ್ಥೆಯ ನಿರ್ದೇಶಕ ಡಾ. ಜೆ.ಕರುಣಾಕರ ಮಾತನಾಡಿ, ‘ರೈತರ ಉತ್ಪಾದನೆ ಮತ್ತು ಉತ್ಪಾದಕತೆ ಹೆಚ್ಚಿಸುವುದಕ್ಕೆ ಉತ್ತಮ ಗುಣಮಟ್ಟದ ಬೀಜಗಳು ಬೇಕು. ಈ ಬೀಜಗಳನ್ನು ರೈತರಿಗೆ ತಲುಪಿಸಲು ನಮ್ಮ ರಾಜ್ಯದಲ್ಲಿ ಅನೇಕ ಸಂಘ ಸಂಸ್ಥೆಗಳು ಕೆಲಸ ಮಾಡುತ್ತಿವೆ ಹಾಗೂ ಬೀಜಗಳ ಗುಣಮಟ್ಟದ ಮೌಲ್ಯಮಾಪನೆಗೆ ಉತ್ತಮ ಪ್ರಯೋಗಾಲಯಗಳು ಇವೆ. ರೈತರು ರೈತ ಉತ್ಪಾದಕ ಸಂಘಗಳ ಜೊತೆಗೆ ಒಡಂಬಡಿಕೆ ಮಾಡಿಕೊಂಡು ಇಂತಹ ಗುಣಮಟ್ಟದ ಬೀಜೋತ್ಪಾದನೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು’ ಎಂದರು.
ಇದೇ ಸಂದರ್ಭದಲ್ಲಿ ಜೋಳ, ಗೋಧಿ, ಕುಸುಬೆ, ಕಡಲೆ ಹಿಂಗಾರಿ ಬೆಳೆಗಳ ಬೀಜೋತ್ಪಾದನಾ ತಾಂತ್ರಿಕತೆಗಳ ಹಸ್ತ ಪತ್ರಿಕೆಗಳನ್ನು ವೇದಿಕೆ ಮೇಲಿದ್ದ ಗಣ್ಯರೆಲ್ಲರೂ ಬಿಡುಗಡೆಗೊಳಿಸಿದರು.
ಭಾರತೀಯ ಕಿಸಾನ್ ಸಂಘದ ಕರ್ನಾಟಕ ಉತ್ತರ ಪ್ರಾಂತದ ಅಧ್ಯಕ್ಷ ವಿವೇಕ ಮೋರೆ, ಶಶಿಮೌಳಿ ಕುಲಕರ್ಣಿ, ವೈ.ಎನ್.ಪಾಟೀಲ, ಪಿ.ಮಲ್ಲೇಶ, ಕುಲಸಚಿವ ಶಿವಾನಂದ ಬಿ. ಕರಾಳೆ ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.