ADVERTISEMENT

ಉತ್ತರ ಕರ್ನಾಟಕದ ಕುಗ್ರಾಮ ದತ್ತು ಪಡೆಯಲಿಚ್ಛಿಸಿದ ನೀನಾಸಂ ಸತೀಶ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2018, 12:39 IST
Last Updated 1 ಸೆಪ್ಟೆಂಬರ್ 2018, 12:39 IST
ಸತೀಶ ನೀನಾಸಂ
ಸತೀಶ ನೀನಾಸಂ   

ಧಾರವಾಡ: ‘ಉತ್ತರ ಕರ್ನಾಟಕ ಭಾಗದ ಕುಗ್ರಾಮವನ್ನು ಮುಂದಿನ ವರ್ಷಗಳ ಕಾಲಕ್ಕೆ ದತ್ತು ಪಡೆಯಲಿಚ್ಛಿಸಿದ್ದೇನೆ’ ಎಂದು ನಟ ನಿನಾಸಂ ಸತೀಶ ಹೇಳಿದರು.

‘ಈಗಾಗಲೇ ಮಂಡ್ಯ ಜಿಲ್ಲೆಯ ಹುಲ್ಲೇಗಾರ ಗ್ರಾಮವನ್ನು ದತ್ತು ಪಡೆದು ಆ ಗ್ರಾಮದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದ್ದೇನೆ. ಆ ಗ್ರಾಮ ಅಭಿವೃದ್ಧಿಗೊಂಡ ನಂತರ ಉತ್ತರ ಕರ್ನಾಟಕ ಭಾಗದ ಆರ್ಥಿಕವಾಗಿ ಹಿಂದುಳಿದ ಮತ್ತೊಂದು ಹಳ್ಳಿಯನ್ನು ದತ್ತು ಪಡೆದು ಆ ಗ್ರಾಮದ ಕೆಲಸ ಮಾಡುವ ಇಚ್ಛೆ ಹೊಂದಿದ್ದೇನೆ’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘‘ಅಯೋಗ್ಯ’ ಚಲನಚಿತ್ರವು 25 ದಿನ ಪೂರ್ಣಗೊಳಿಸಿದ್ದು, ಒಂದೇ ವಾರದಲ್ಲಿ ₹12.82 ಕೋಟಿ ಹಣ ಗಳಿಸಿದೆ. ಸಮಾಜಮುಖಿಯಾದ ಹಾಗೂ ಸಮಾಜ ಒಪ್ಪುವಂತ ಚಿತ್ರ ಇದಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ನನಗೂ ಸಾಕಷ್ಟು ಜನ ಅಭಿಮಾನಿಗಳಿದ್ದಾರೆ ಎಂಬುದು 25ನೇ ದಿನದ ಪ್ರಚಾರಾರ್ಥವಾಗಿ ನಾನು ಈ ಭಾಗಕ್ಕೆ ಬಂದಾಗಲೇ ತಿಳಿಯಿತು’ ಎಂದರು.

ADVERTISEMENT

‘ಅಯೋಗ್ಯ ಚಿತ್ರವು ಬಯಲು ಬಹಿರ್ದೆಸೆ, ಅಭಿವೃದ್ಧಿ ಕಾಣದ ಹಳ್ಳಿಗಳು, ಬಯಲು ಬಹಿರ್ದೆಸೆಗೆ ಹೋದ ಸಂದರ್ಭದಲ್ಲಿ ಹೆಣ್ಣು ಮಕ್ಕಳ ಮೇಲೆ ಆದ ಅತ್ಯಾಚಾರದಂಥ ಘಟನೆಗಳನ್ನು ಮುಂದಿಟ್ಟುಕೊಂಡ ಕಥಾ ಹಂದರ ಹೊಂದಿದೆ. ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಸ್ಪಂದನೆ ದೊರೆತಿದೆ.ಚಿತ್ರದಲ್ಲಿ ಬಚ್ಚೇಗೌಡರ ಒಂದು ಪಾತ್ರ ಬರುತ್ತದೆ. ಅಂಥ ಬಚ್ಚೇಗೌಡರು ಅನೇಕ ಗ್ರಾಮ ಪಂಚಾಯ್ತಿಗಳಲ್ಲಿದ್ದಾರೆ. ಅಂಥವರಿಗೆ ಈ ‘ಅಯೋಗ್ಯ’ ಚಿತ್ರ ಒಂದು ಪಾಠವಾಗಿದೆ’ ಎಂದು ಹೇಳಿದರು.

‘ಹುಬ್ಬಳ್ಳಿ, ಹಾವೇರಿ, ದಾವಣಗೆರೆ ಹಾಗೂ ಹಾಸನದಲ್ಲೂ ನಾನು ಚಿತ್ರದ ಪ್ರಚಾರ ಮಾಡುತ್ತೇನೆ. ಚಿತ್ರದ 50ನೇ ದಿನದ ಪ್ರಚಾರ ಕಾರ್ಯವನ್ನು ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ ನಡೆಸಲಿದ್ದೇವೆ’ ಎಂದರು.

‘ಸಮಾಜಮುಖಿ ಸಿನಿಮಾಗಳು ಬಂದು ಯಶಸ್ವಿ ಪ್ರದರ್ಶನ ಕಂಡಾಗ ಮಾತ್ರ ಅವುಗಳಿಗೆ ನಿಜವಾದ ಯಶಸ್ಸು ದೊರೆಯುತ್ತದೆ. ಇಂದು ಕನ್ನಡ ಚಿತ್ರರಂಗಲದಲ್ಲೂ ಪರಭಾಷೆ ಚಿತ್ರಗಳಿಗೆ ಸೆಡ್ಡು ಹೊಡೆಯುವಂತ ಕಥೆಗಳು ಬರುತ್ತಿವೆ. ತಮಿಳು ಚಿತ್ರರಂಗದಲ್ಲಿ ತಮಗೊಂದು ಅವಕಾಶ ಬಂದಿದ್ದು, ಅದಕ್ಕೆ ತಾವು ಸಹಿ ಹಾಕಿದ್ದಾಗಿ’ ತಿಳಿಸಿದರು.

‘ತಮಿಳು ಚಿತ್ರರಂಗದಲ್ಲಿ ಕನ್ನಡದ ಒಂದು ಮೊಟ್ಟೆಯ ಕಥೆ, ರಾಜಕುಮಾರದಂಥ ಅನೇಕ ಸಿನಿಮಾಗಳ ಬಗ್ಗೆ ಚರ್ಚೆ ಆಗುತ್ತಿದೆ. ಡಬ್ಬಿಂಗ್‌ಗಾಗಿ ಸಿನಿಮಾ ಮಾಡುವುದು ಸರಿಯಲ್ಲ. ಇತ್ತೀಚೆಗೆ ಡಬ್ಬಿಂಗ್ ಬಗ್ಗೆ ತೀವ್ರ ಚರ್ಚೆಯಾಗುತ್ತಿದ್ದು, ಈ ಡಬ್ಬಿಂಗ್‌ನಿಂದ ಭಾಷೆ ಹಾಳಾಗುತ್ತದೆ’ ಎಂದರು.

ಅಯೋಗ್ಯ ಚಿತ್ರದ ನಿರ್ದೇಶಕ ಮಹೇಶಕುಮಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.