ADVERTISEMENT

ಕೃಷಿ ನಿರ್ಲಕ್ಷಿಸಿದರೆ ಕುಟುಂಬ ವ್ಯವಸ್ಥೆ ನಾಶ: ಡಾ.ರಾಜೇಂದ್ರ ಪೋದ್ದಾರ್

ವಾಲ್ಮಿ ನಿರ್ದೇಶಕ ಡಾ. ರಾಜೇಂದ್ರ ಪೋದ್ದಾರ್ ಆತಂಕ

​ಪ್ರಜಾವಾಣಿ ವಾರ್ತೆ
Published 18 ಜನವರಿ 2022, 17:08 IST
Last Updated 18 ಜನವರಿ 2022, 17:08 IST
ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ದಿ. ಮರಿಗೌಡ ಫಕ್ಕೀರಗೌಡ ಪಾಟೀಲ ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪ ನಮನ ಸಲ್ಲಿಸಿದರು
ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ದಿ. ಮರಿಗೌಡ ಫಕ್ಕೀರಗೌಡ ಪಾಟೀಲ ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪ ನಮನ ಸಲ್ಲಿಸಿದರು   

ಧಾರವಾಡ: ‘ಕೃಷಿ, ಜಲದ ಕುರಿತು ಇಂದಿನ ಜನಾಂಗ ಹೊಂದಿರುವ ತಾತ್ಸಾರದಿಂದಾಗಿ ಮುಂದೊಂದು ದಿನ ಇಡೀ ಕುಟುಂಬ ವ್ಯವಸ್ಥೆಯೇ ನಾಶವಾಗುವ ಅಪಾಯವಿದೆ’ ಎಂದು ವಾಲ್ಮಿ ನಿರ್ದೇಶಕ ಡಾ. ರಾಜೇಂದ್ರ ಪೋದ್ದಾರ್ ಆತಂಕ ವ್ಯಕ್ತಪಡಿಸಿದರು.

ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ದಿ. ಮರಿಗೌಡ ಫಕ್ಕೀರಗೌಡ ಪಾಟೀಲ ದತ್ತಿ ಅಂಗವಾಗಿ ಆಯೋಜಿಸಿದ್ದ ‘ಕೃಷಿ ನೆಲ ಜಲ ಸಹಕಾರ’ ವಿಷಯ ಕುರಿತು ಅವರು ಉಪನ್ಯಾಸ ನೀಡಿದರು.

‘ಈ ಎಚ್ಚರಿಕೆ ಕುರಿತು ಯುವಜನತೆಗೆ ಮನವರಿಕೆ ಮಾಡಿಕೊಡುವ ಕಾರ್ಯವಾಗಬೇಕಿದೆ. ಇಂದು ವ್ಯಕ್ತಿಗತ ನೆಲೆಯಲ್ಲಿ ಯೋಚಿಸದೇ ಸಮೂಹ ನೆಲಗಟ್ಟಿನಲ್ಲಿ ನಿಂತು ಮಾತನಾಡುವಂತಾಗಬೇಕು’ ಎಂದರು.

ADVERTISEMENT

‘ನೆಲ ಮತ್ತು ಜಲದ ಬಗ್ಗೆ ಬದ್ಧತೆಯಿಂದ ತೊಡಗಿಕೊಳ್ಳುವ ಕಾಲ ಬಂದಿದೆ. ಇಂದು ನೀರು, ನೆಲ, ಸಂರಕ್ಷಣೆ ಮಾಡುವವರು ಯಾರು ಎಂಬ ಪ್ರಶ್ನೆಯನ್ನು ನಮಗೆ ನಾವೇ ಕೇಳಿಕೊಳ್ಳಬೇಕಿದೆ. ಗ್ರಾಮೀಣ ಪ್ರದೇಶದಲ್ಲಿ ನಿತ್ಯ ಜಲ ಕಲಹ, ರಾಜ್ಯರಾಜ್ಯಗಳ ನಡುವೆ ನದಿ ನೀರಿನ ಜಗಳ, ನೇಪಾಳ, ಚೀನಾ, ಬಾಂಗ್ಲಾದೇಶಗಳೊಡನೆ ನೀರು ಹಂಚಿಕೆ ಜಗಳ ನಡೆಯುತ್ತಿವೆ. ಹೀಗೆ ಕೆಳಸ್ತರದಿಂದ ಜಾಗತಿಕ ಮಟ್ಟದಲ್ಲಿ ನೀರಿನ ಸಮಸ್ಯೆ ಎದುರಿಸುತ್ತಿದ್ದೇವೆ. ಸಿರಿಯಾ ದೇಶದ ಜನ ನೀರಿನ ಬರದಿಂದ ತತ್ತರಿಸಿದ್ದ ಸಂದರ್ಭದಲ್ಲಿ ಅಲ್ಲಿನ ನಿರುದ್ಯೋಗಿಗಳು ಬಂದೂಕು ಹಿಡಿದರು. ಆಂತರಿಕ ಯುದ್ಧ ಪ್ರಾರಂಭವಾಗಿ ಅಲ್ಲಿನ ಜಲ ಸಂಕಷ್ಟ ಜಗತ್ತಿಗೇ ಉದಾಹರಣೆಯಾಗಿದೆ’ ಎಂದು ವಿವರಿಸಿದರು.

‘ಇಂದು ರಾಜ್ಯದಲ್ಲಿ ನೀರಿನ ಸಂಕಷ್ಟವಿದೆ. 1950ರಲ್ಲಿ ವಾರ್ಷಿಕ ತಲಾವಾರು 5ಸಾವಿರ ಘನ ಲೀಟರ್‌ಗೂ ಹೆಚ್ಚು ನೀರು ಲಭ್ಯವಾಗುತ್ತಿತ್ತು. ಆದರೆ ಜನಸಂಖ್ಯಾಸ್ಫೋಟದಿಂದ ತಲಾವಾರು ನೀರು ಲಭ್ಯತೆ ಕಡಿಮೆಯಾಗುತ್ತಿದ್ದು, 1300 ಘನಲೀಟರ್ ಇಂದು ಲಭ್ಯವಾಗುತ್ತಿದೆ. ಇದು ನೀರಿನ ಸಂಕಷ್ಟದ ಮುನ್ಸೂಚನೆ. ನಮ್ಮ ಜಲಮೂಲಗಳನ್ನು ಸಂರಕ್ಷಿಸಬೇಕಾದ ಅಗತ್ಯ ಹಿಂದೆಂದಿಗಿಂತಲೂ ಇಂದು ಇದೆ’ ಎಂದು ಡಾ. ಪೋದ್ದಾರ ಹೇಳಿದರು.

‘ಲಭ್ಯವಿರುವ ನೀರಿನಲ್ಲಿ ಶೇ 80ರಷ್ಟು ಕೃಷಿಗೆ ಬೇಕಾಗಿದೆ. ನೀರಿನ ಸಂರಕ್ಷಣೆಯ ಅರಿವನ್ನು ರೈತರಿಗೆ, ಜನಸಾಮಾನ್ಯರಿಗೆ ತಿಳಿಸಿಕೊಡಬೇಕಿದೆ. ನೀರು, ಮಣ್ಣು ನಾಶವಾದರೆ ಮತ್ತೆ ಸೃಷ್ಟಿಸಲು ಸಾಧ್ಯವಿಲ್ಲ. ಭಾರತದ ಪರಂಪರೆಯಲ್ಲೇ ಸಹಕಾರ ತತ್ವ ಹಾಸುಹೊಕ್ಕಾಗಿದೆ. ಸಹಕಾರ ತತ್ವದಲ್ಲಿ ದೇಶದ ಭವಿಷ್ಯ ಅಡಗಿದೆ’ ಎಂದರು.

ನಿವೃತ್ತ ಪ್ರಾಚಾರ್ಯ ಬಿ.ಎಲ್. ಶಿವಳ್ಳಿ, ಕೆಸಿಸಿ ಬ್ಯಾಂಕ್ ನಿರ್ದೇಶಕ ಜಿ.ಪಿ. ಪಾಟೀಲ ಮಾತನಾಡಿದರು. ಬೆಳಗಾವಿ ಕೆಎಲ್‌ಇ ಸಂಸ್ಥೆ ನಿರ್ದೇಶಕ ಡಾ. ವಿ.ಎಸ್. ಸಾಧೂನವರ ಅವರು ಅಧ್ಯಕ್ಷತೆ ವಹಿಸಿದ್ದರು. ದತ್ತಿದಾನಿಗಳ ಪರವಾಗಿ ಬೊಮ್ಮನಾಯ್ಕ್ ಪಾಟೀಲ, ಶಂಕರ ಹಲಗತ್ತಿ, ಶಿವಾನಂದ ಭಾವಿಕಟ್ಟಿ, ಶಂಕರ ಕುಂಬಿ, ಡಾ. ಜಿನದತ್ತ ಹಡಗಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.