ADVERTISEMENT

ರಂಜಾನ್‍ನಲ್ಲಿ ರಂಗೇರದ ಮದರಂಗಿ

ಊರುಗಳಿಗೆ ತೆರಳಿದ ಉತ್ತರ ಭಾರತದ ಮದರಂಗಿ ಕಲಾವಿದರು

​ಪ್ರಜಾವಾಣಿ ವಾರ್ತೆ
Published 24 ಮೇ 2020, 19:30 IST
Last Updated 24 ಮೇ 2020, 19:30 IST
ಕೈ ಮೇಲೆ ಮದರಂಗಿ ಚಿತ್ತಾರ (ಸಾಂದರ್ಭಿಕ ಚಿತ್ರ)
ಕೈ ಮೇಲೆ ಮದರಂಗಿ ಚಿತ್ತಾರ (ಸಾಂದರ್ಭಿಕ ಚಿತ್ರ)   

ಹುಬ್ಬಳ್ಳಿ: ಈದ್‌ ಉಲ್‌ ಫಿತ್ರ್‌ ಸಂಭ್ರಮಾಚರಣೆಗೆ ಎರಡು ದಿನಗಳಿದ್ದಾಗಲೇ ಆಕರ್ಷಕ ಉಡುಪು ಖರೀದಿ ಜತೆಗೆ ಮುಸಲ್ಮಾನ ಮಹಿಳೆಯರು, ಮಕ್ಕಳು ವಿವಿಧ ವಿನ್ಯಾಸದ ಮದರಂಗಿ ಚಿತ್ತಾರ ಬಿಡಿಸಿಕೊಂಡು ಸಂಭ್ರಮ ಹೆಚ್ಚಿಸಿಕೊಳ್ಳುತ್ತಿದ್ದರು.

ತಮಗಿಷ್ಟದ ಬಣ್ಣಬಣ್ಣದ ಚಿತ್ತಾರಗಳನ್ನು ಅರಸುತ್ತಾ ನಗರದ ಸಿಬಿಟಿ, ದುರ್ಗದ ಬೈಲ್, ಚನ್ನಮ್ಮ ವೃತ್ತದ ಬಳಿ ಕೂರುವ ಉತ್ತರ ಭಾರತದ ಮದರಂಗಿ ಕಲಾವಿದರ ಮೊರೆ ಹೋಗುತ್ತಿದ್ದರು. ಕೊರೊನಾ ಕಾರಣದಿಂದ ಈ ಬಾರಿ ಮದರಿಂಗಿ ಸಂಭ್ರಮ ಕಂಡು ಬರಲಿಲ್ಲ. ಕೊರೊನಾ ಸೋಂಕು ತಡೆಗೆ ದೇಶದಾದ್ಯಂತ ಲಾಕ್‍ಡೌನ್ ಆದ ಪರಿಣಾಮ ಮದರಂಗಿ ಚಿತ್ರಗಳಲ್ಲೇ ಬದುಕು ಕಂಡುಕೊಂಡಿದ್ದ ರಾಜಸ್ಥಾನ, ಬಿಹಾರ, ಮಧ್ಯಪ್ರದೇಶ, ಉತ್ತರ ಪ್ರದೇಶ, ಆಗ್ರಾದ ಕಲಾವಿದರು ತಮ್ಮೂರಿಗೆ ಹೊರಟು ಹೋಗಿದ್ದಾರೆ.

ಕಲಾವಿದರು ಜನದಟ್ಟಣೆ ಇರುವೆಡೆ, ಫ್ಯಾನ್ಸಿ ಸ್ಟೋರ್‍ಗಳ ಮುಂದೆ ಕಡಿಮೆ ಸಮಯದಲ್ಲಿ ವಿವಿಧ ವಿನ್ಯಾಸದ ಚಿತ್ತಾರ ಮೂಡಿಸಿ ಗ್ರಾಹಕರಿಗೆ ಖುಷಿ ನೀಡುತ್ತಿದ್ದರು. ಬಾಂಬೆಕಟ್, ಹೆನ್ನಾ ಕಟ್, ಬ್ರೈಡರ್, ರಾಜಸ್ಥಾನಿ, ಮಾರ್ವಾಡಿ, ಇಂಡಿಯನ್, ಅರೇಬಿಕ್ ಹೀಗೆ ಅನೇಕ ಶೈಲಿಯ ಮದರಂಗಿ ಹಾಕುತ್ತಿದ್ದರು. ಮೆಹಂದಿ ಹಾಕಲು ದೊಡ್ಡ ಅಂಗಡಿಗಳು ನಗರದಲ್ಲಿ ಸಾಕಷ್ಟಿದ್ದರೂ ರಸ್ತೆ ಬದಿ ಸಾಮಾನ್ಯ ಜನರ ಕೈಗೆಟುಕುವ ಬೆಲೆಯಲ್ಲಿ ಮೆಹಂದಿ ಹಾಕುತ್ತಿದ್ದ ಕಲಾವಿದರಿಗೇ ಹೆಚ್ಚು ಬೇಡಿಕೆಯಿತ್ತು.

ADVERTISEMENT

ಪ್ರತಿ ಕೈಗಳಿಗೆ ಮೆಹಂದಿ ಹಾಕಲು ಕನಿಷ್ಠ ₹200 ನಿಗದಿ ಮಾಡಿದರೂ ಹಬ್ಬದ ಹಿಂದಿನ ದಿನಗಳಲ್ಲಿ ಕೈತುಂಬಾ ಕೆಲಸವಿರುತ್ತಿತ್ತು. ತಾಳ್ಮೆ ಕಾಯ್ದುಕೊಂಡು ಗಂಟೆಗಟ್ಟಲೆ ಕುಳಿತು ಚಿತ್ತಾರ ಬಿಡಿಸುವ ಕಲಾವಿದರು ಲಾಕ್‍ಡೌನ್‍ನಿಂದ ಊರು ಸೇರಿದ್ದಾರೆ. ಮೆಹಂದಿ ಹಾಕುವವರಿಗೂ ಈ ಹಬ್ಬದಿಂದ ಸಾಕಷ್ಟು ಆದಾಯ ಗಳಿಸುತ್ತಿದ್ದರು. ತಮ್ಮ ಉಡುಪಿಗೆ ತಕ್ಕ ವಿನ್ಯಾಸವನ್ನು ಕೈಗಳ ತುಂಬಾ ಮೂಡಿಸಿ ಹಬ್ಬದ ಮೆರುಗು ಹೆಚ್ಚಿಸಬೇಕೆಂದುಕೊಂಡಿದ್ದ ಮಹಿಳೆಯರಿಗೂ ಬೇಸರವಾಗಿದೆ.

‘ನಾವೇ ವಿವಿಧ ವಿನ್ಯಾಸಗಳನ್ನು ಬಿಡಿಸಿಕೊಳ್ಳುತ್ತೇವೆ. ಆದರೂ ಬೇರೆ ರಾಜ್ಯದ ಕಲಾವಿದರು ಬಿಡಿಸುವ ಚಿತ್ತಾರಗಳು ಬಹಳ ಆಕರ್ಷಕವಾಗಿರುತ್ತವೆ. ಈ ಬಾರಿ ಲಾಕ್‍ಡೌನ್‍ನಿಂದ ಅಂತಹ ಆಕರ್ಷಕ ಚಿತ್ತಾರಗಳಿಂದ ವಂಚಿತರಾಗಿದ್ದೇವೆ’ ಎನ್ನುತ್ತಾರೆ ಸಿಬಿಟಿ ಸಮೀಪದ ನಿವಾಸಿ ಅಫ್ರಾ ಸಿದ್ದಿಕಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.