ADVERTISEMENT

ಹೊರಟ್ಟಿ ಹೇಳಿಕೆಗೆ ಅರ್ಥವಿಲ್ಲ; ನಾನೇ ಅಭ್ಯರ್ಥಿ -ಬಿಜೆಪಿಯ ಮೋಹನ ಲಿಂಬಿಕಾಯಿ

ಪಶ್ಚಿಮ ಶಿಕ್ಷಕರ ಮತ ಕ್ಷೇತ್ರದ ಬಿಜೆಪಿ ಆಕಾಂಕ್ಷಿ ಮೋಹನ ಲಿಂಬಿಕಾಯಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2022, 9:37 IST
Last Updated 6 ಏಪ್ರಿಲ್ 2022, 9:37 IST
ಮೋಹನ ಲಿಂಬಿಕಾಯಿ
ಮೋಹನ ಲಿಂಬಿಕಾಯಿ   

ಹುಬ್ಬಳ್ಳಿ: ‘ವಿಧಾನ ಪರಿಷತ್‌ನ ಪಶ್ಚಿಮ ಶಿಕ್ಷಕರ ಮತ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಾನೇ ಎಂದು ಹೇಳಿರುವ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ಮಾತಿನಲ್ಲಿ ಹುರುಳಿಲ್ಲ. ನಾನೇ ಪಕ್ಷದ ಅಭ್ಯರ್ಥಿಯಾಗಿದ್ದು, ಇದಕ್ಕೆ ಪಕ್ಷದ ಮುಖಂಡರು ಹಸಿರು ನಿಶಾನೆ ತೋರಿಸಿದ್ದಾರೆ. ಅಧಿಕೃತ ಘೋಷಣೆಯಷ್ಟೇ ಬಾಕಿ ಇದೆ’ ಎಂದು ಟಿಕೆಟ್ ಆಕಾಂಕ್ಷಿ ಮೋಹನ ಲಿಂಬಿಕಾಯಿ ಹೇಳಿದರು.

‘ಮೂರು ತಿಂಗಳ ಹಿಂದೆ ನಡೆದ ಪಕ್ಷದ ಧಾರವಾಡ, ಹಾವೇರಿ, ಗದಗ ಹಾಗೂ ಉತ್ತರಕನ್ನಡ ಜಿಲ್ಲೆಯ ಕಾರ್ಯಕಾರಿಣಿ ಸಭೆಯಲ್ಲಿ ನನ್ನ ಹೆಸರು ಸೇರಿದಂತೆ, ಸಂದೀಪ ಬೂದಿಹಾಳ ಮತ್ತು ಸುಧೀರ ದೇಶಪಾಂಡೆ ಅವರ ಹೆಸರು ಪ್ರಸ್ತಾಪವಾಗಿತ್ತು. ಸಭೆಯಲ್ಲಿ ಶಾಸಕ ಜಗದೀಶ ಶೆಟ್ಟರ್, ಪಕ್ಷದ ಮುಖಂಡ ಅರುಣ್‌ಕುಮಾರ್ ಸಹ ಇದ್ದರು. ಅಂತಿಮವಾಗಿ ನನ್ನ ಹೆಸರು ಶಿಫಾರಸು ಮಾಡಲಾಯಿತು’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ಜಗದೀಶ ಶೆಟ್ಟರ್ ಅವರ ಸೂಚನೆಯಂತೆ ಪರಿಷತ್ ಸದಸ್ಯ ಎಸ್‌.ವಿ. ಸಂಕನೂರ ಅವರೊಂದಿಗೆ ನಾಲ್ಕು ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದೇನೆ. ಪ್ರಚಾರ ಕೈಗೊಂಡು, ಮತದಾರರ ನೋಂದಣಿ ಮಾಡಿಸುತ್ತಿದ್ದೇನೆ. ಹೊರಟ್ಟಿ ಅವರು ನಾನೇ ಬಿಜೆಪಿ ಅಭ್ಯರ್ಥಿ ಎನ್ನುವ ಮೂಲಕ, ಮತದಾರರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಆಹ್ವಾನಿಸಿಲ್ಲ

‘ಹೊರಟ್ಟಿ ಅವರನ್ನು ಪಕ್ಷಕ್ಷೆ ಯಾರೂ ಆಹ್ವಾನಿಸಿಲ್ಲ. ಬಿಜೆಪಿ ಅಭ್ಯರ್ಥಿಯಾಗುವುದಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರೊಂದಿಗೆ ಮಾತನಾಡಿರುವುದಾಗಿ ಅವರು ಸುಳ್ಳು ಹೇಳುತ್ತಿದ್ದಾರೆ. ದೀರ್ಘಕಾಲ ಜೆಡಿಎಸ್‌ನಲ್ಲಿದ್ದರೂ ಈ ಭಾಗದಲ್ಲಿ ಅವರು ತಮ್ಮ ಪಕ್ಷ ಸಂಘಟಿಸಲಿಲ್ಲ. ಹಾಗಾಗಿ, ಜೆಡಿಎಸ್‌ನಿಂದ ಸ್ಪರ್ಧಿಸಿದರೆ ಸೋಲು ಖಚಿತ ಎಂಬ ಭಯದಿಂದ ಈ ರೀತಿ ಗೊಂದಲದ ಹೇಳಿಕೆ ನೀಡಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

‘ಬಿಜೆಪಿಯಲ್ಲಿ ಸಕ್ರಿಯ ರಾಜಕಾರಣಕ್ಕೆ 75 ವರ್ಷದ ಮಿತಿ ಇದೆ. ಇದಕ್ಕೆ ಬದ್ಧರಾಗಿ ರಾಜ್ಯದ ಯಡಿಯೂರಪ್ಪ ಅವರಿಂದಿಡಿದು ರಾಷ್ಟ್ರಮಟ್ಟದ ನಾಯಕರವರೆಗೆ ಹಲವರನ್ನು ಅಧಿಕಾರದಿಂದ ದೂರ ಇಡಲಾಗಿದೆ. ಹೊರಟ್ಟಿ ಅವರಿಗೆ ಸದ್ಯದಲ್ಲೇ 75 ವರ್ಷವಾಗಲಿದೆ. ಅಂತಹವರಿಗೆ ಟಿಕೆಟ್ ಕೊಡುವ ಅನಿವಾರ್ಯತೆ ಮತ್ತು ಅವರ ಅಗತ್ಯತೆ ಪಕ್ಷಕ್ಕೆ ಇಲ್ಲ’ ಎಂದರು.

ಹುಬ್ಬಳ್ಳಿ–ಧಾರವಾಡ ಮಹಾನಗರ ಜಿಲ್ಲೆಯ ಶಿಕ್ಷಕರ ಪ್ರಕೋಷ್ಠದ ಅಧ್ಯಕ್ಷ ಆನಂದ ಕುಲಕರ್ಣಿ ಮಾತನಾಡಿ, ‘ಪಕ್ಷದ ಆಣತಿಯಂತೆ ಲಿಂಬಿಕಾಯಿ ಅವರು ಪ್ರಚಾರ ಆರಂಭಿಸಿದ್ದಾರೆ. ನಾವೆಲ್ಲರೂ ಅವರ ಜೊತೆಗಿದ್ದೇವೆ. ಅಭ್ಯರ್ಥಿ ಬದಲಾವಣೆಯ ಸಂದರ್ಭ ಬಂದರೆ, ಆ ಕುರಿತು ಪಕ್ಷದ ವೇದಿಕೆಯಲ್ಲಿ ದನಿ ಎತ್ತುತ್ತೇವೆ’ ಎಂದು ಹೇಳಿದರು.

‘ಸಭಾಪತಿ ಸ್ಥಾನಕ್ಕೆ ಅಗೌರವ’

‘ಬಸವರಾಜ ಹೊರಟ್ಟಿ ಅವರು ಪಕ್ಷಾತೀತವಾದ ಸಭಾಪತಿ ಹುದ್ದೆಯಲ್ಲಿದ್ದುಕೊಂಡು, ಬಿಜೆಪಿಯಿಂದ ಸ್ಪರ್ಧಿಸುವುದಾಗಿ ಹೇಳುವ ಮೂಲಕ ಆ ಸ್ಥಾನಕ್ಕೆ ಅಗೌರವ ತೋರಿದ್ದಾರೆ. ಅವರ ಹೇಳಿಕೆ ಕಾನೂನುಬಾಹಿರ. ಪಕ್ಷ ರಾಜಕಾರಣ ಮಾಡಬೇಕಿದ್ದರೆ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಸ್ವತಂತ್ರವಾಗಿ ಸ್ಪರ್ಧಿಸಲಿ’ ಎಂದು ಮೋಹನ ಲಿಂಬಿಕಾಯಿ ಸವಾಲು ಹಾಕಿದರು.

‘ಹೊರಟ್ಟಿ ಅವರ ಹೇಳಿಕೆ ಕುರಿತು ಪಕ್ಷ ಯಾಕೆ ಸ್ಪಷ್ಟನೆ ನೀಡಿಲ್ಲ. ಅಧಿಕೃತ ಅಭ್ಯರ್ಥಿಯಾಗಿ ನಿಮ್ಮ ಹೆಸರನ್ನು ಯಾಕೆ ಘೋಷಿಸಿಲ್ಲ?’ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಹೊರಟ್ಟಿ ಅವರ ಹೇಳಿಕೆಗೂ, ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಹಾಗಾಗಿ, ಸ್ಪಷ್ಟನೆ ನೀಡುವ ಅಗತ್ಯವಿಲ್ಲ. ತಾಂತ್ರಿಕ ಕಾರಣದಿಂದಾಗಿ ನನ್ನ ಹೆಸರು ಘೋಷಣೆ ವಿಳಂಬವಾಗಿದೆ. ಆದರೂ, ನಾನೇ ಅಧಿಕೃತ ಅಭ್ಯರ್ಥಿಯಾಗಲಿದ್ದೇನೆ’ ಎಂದರು.

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ವಿ.ಎಸ್. ಪಾಟೀಲ, ಪ್ರೊ.ಆರ್‌.ಎಸ್. ಮಟ್ಟಿಮನಿ ಹಾಗೂ ಶ್ರೀಧರ ರಡ್ಡೇರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.