ADVERTISEMENT

ಕಡ್ಡಾಯ ತ್ಯಾಜ್ಯ ವಿಂಗಡಣೆಗೆ ಸೂಚನೆ

ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ಸುಭಾಷ್‌ ಅಡಿ ಸಭೆ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2019, 14:06 IST
Last Updated 7 ಸೆಪ್ಟೆಂಬರ್ 2019, 14:06 IST
ಸುಭಾಷ್ ಬಿ. ಅಡಿ
ಸುಭಾಷ್ ಬಿ. ಅಡಿ   

ಹುಬ್ಬಳ್ಳಿ: ಅವಳಿ ನಗರದಲ್ಲಿನ ಎಲ್ಲ ತ್ಯಾಜ್ಯವನ್ನು ಕಡ್ಡಾಯವಾಗಿ ವಿಂಗಡಿಸಬೇಕು, ಸಂಪೂರ್ಣವಾಗಿ ಪ್ಲಾಸ್ಟಿಕ್‌ ನಿಷೇಧಿಸಲು ಕ್ರಮ ಕೈಗೊಳ್ಳಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ರಾಜ್ಯಮಟ್ಟದ ಸಮಿತಿಯ ಅಧ್ಯಕ್ಷ ಸುಭಾಷ್ ಬಿ. ಅಡಿ ಸಭೆ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಸರ್ಕಿಟ್‌ ಹೌಸ್‌ನಲ್ಲಿ ಶನಿವಾರ ಪ್ಲಾಸ್ಟಿಕ್ ನಿಷೇಧ, ಘನತ್ಯಾಜ್ಯ ವಿಲೇವಾರಿ, ಬಯೋ ಮೆಡಿಕಲ್ ತ್ಯಾಜ್ಯ ನಿರ್ವಹಣೆ , ಇ-ತ್ಯಾಜ್ಯ, ನಿರ್ಮಾಣ ಮತ್ತು ನೆಲಸಮಗೊಳಿಸುವ ನಿಯಮಗಳ ಅನುಷ್ಠಾನ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

‘ಹಸಿ, ಒಣ ತ್ಯಾಜ್ಯ, ಸ್ಯಾನಿಟರಿ ಪ್ಯಾಡ್‌, ನ್ಯಾಪಕಿನ್‌, ಬ್ಯಾಂಡೇಜ್‌, ಕಟ್ಟಡ ತ್ಯಾಜ್ಯ ಎಲ್ಲವನ್ನೂ ವಿಂಗಡಿಸಬೇಕು. ಇದನ್ನು ಪಾಲಿಕೆ ಕಾರ್ಮಿಕರು ಪ್ರತ್ಯೇಕವಾಗಿಯೇ ಸಂಗ್ರಹಿಸಬೇಕು. ಸೆ. 30ರ ಒಳಗೆ ಈ ಕಾರ್ಯ ಅನುಷ್ಠಾನಕ್ಕೆ ಬರಬೇಕು’ ಎಂದು ತಿಳಿಸಿದರು.

ADVERTISEMENT

‘ಮಹಾನಗರ ಪಾಲಿಕೆ ಸರಿಯಾಗಿ ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿ ಮಾಡಿಲ್ಲ. ಕಟ್ಟಡ ತ್ಯಾಜ್ಯವನ್ನು ಎಲ್ಲಿ ಬೇಕಾದಲ್ಲಿ ಬೀಸಾಡಲಾಗುತ್ತಿದೆ. ಹಿಂದೆಯೂ ಇದರ ಬಗ್ಗೆ ಸ್ಥಳೀಯ ಆಡಳಿತಕ್ಕೆ ಎಚ್ಚರಿಕೆ ನೀಡಿದ್ದರೂ ಏನೂ ಪ್ರಯೋಜವಾಗಿಲ್ಲ. ಇದೇ ರೀತಿ ಮುಂದುವರಿದರೆ ದಂಡ ವಿಧಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

‘ಮಣ್ಣು ಹೊರತುಪಡಿಸಿ ಉಳಿದ ಎಲ್ಲ ಕಟ್ಟಡ ತ್ಯಾಜ್ಯವನ್ನು ವಿಂಗಡಿಸಬೇಕು. ಸಿಮೆಂಟ್, ಕಬ್ಬಿಣ , ಕಟ್ಟಿಗೆ ಸೇರಿದಂತೆ ಎಲ್ಲಾ ವಸ್ತುಗಳ ಮರು ಬಳಕೆಗೆ ಆದ್ಯತೆ ನೀಡಬೇಕು. ಇಂತಹ ತ್ಯಾಜ್ಯಗಳನ್ನು ವಿಲೇವಾರಿ ಘಟಕಕ್ಕೆ ನೋಂದಾಯಿತ ವಾಹನಗಳಲ್ಲಿಯೇ ಸಾಗಿಸಬೇಕು‌. ಈ ತ್ಯಾಜ್ಯವನ್ನು ಸರ್ಕಾರದಿಂದ ಮಾಡುವ ರಸ್ತೆ ಕಾಮಗಾರಿಗೆ ಬಳಸಿಕೊಳ್ಳಬಹುದು’ ಎಂದರು.

‘ಸೆಪ್ಟೆಂಬರ್‌ನಿಂದಲೇ ಪ್ಲಾಸ್ಟಿಕ್ ನಿಷೇಧಕ್ಕೆ ಕ್ರಮ ಕೈಗೊಳ್ಳಲಾಗಿದೆ. ಬೆಂಗಳೂರಿನಲ್ಲಿ ಅಕ್ಟೋಬರ್‌ ತನಕ ಕಾಲಾವಕಾಶ ಕೊಟ್ಟಿರುವುದರದಿಂದ ಅನುಷ್ಠಾನದಲ್ಲಿ ಸಡಿಲಿಕೆ ಮಾಡಲಾಗಿದೆ. ಮರುಬಳಕೆಗೆ ಬಾರದ ಶೇ 80ರಷ್ಟು ಪ್ಲಾಸ್ಟಿಕ್‌ಗಳನ್ನು ಬೆಂಗಳೂರಿನಲ್ಲಿ ನಿಷೇಧಿಸಲಾಗಿದೆ. ಅಂಥ ಪ್ಲಾಸ್ಟಿಕ್‌ ತಯಾರಕರು ಮತ್ತು ಬಳಕೆದಾರರಿಗೆ ದಂಡ ವಿಧಿಸಲಾಗುತ್ತಿದೆ. ಆದ್ದರಿಂದ ಸರ್ಕಾರದ ಕಚೇರಿ ಆವರಣಗಳನ್ನು ಪ್ಲಾಸ್ಟಿಕ್ ಮುಕ್ತಗೊಳಿಸಲು ನಿರ್ಧರಿಸಲಾಗಿದೆ’ ಎಂದು ತಿಳಿಸಿದರು.

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ವಿಜಯಕುಮಾರ್ ಕಡಕಬಾವಿ, ಉಪ ಪರಿಸರ ಅಧಿಕಾರಿಗಳಾದ ಶೋಭಾ ಪೋಳ, ಸೋಮಶೇಖರಗೌಡ ಹಿರೇಗೌಡ್ರ, ಪಾಲಿಕೆಯ ಪರಿಸರ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ ವಿಜಯಕುಮಾರ್, ಪಶುಸಂಗೋಪನೆ ಇಲಾಖೆಯ ಉಪನಿರ್ದೇಶಕ ಡಾ. ಪರಮೇಶ್ವರ ನಾಯಕ್, ಜಿಲ್ಲಾ ಆಯುಷ್ ಅಧಿಕಾರಿ ಡಾ. ಸಂಗಮೇಶ ಕಲಹಾಳ, ಕಿಮ್ಸ್‌ ವೈದ್ಯಕೀಯ ಅಧೀಕ್ಷಕ ಸಿ. ಅರುಣ ಕುಮಾರ್‌, ನಿರ್ದೇಶಕ ರಾಮಲಿಂಗಪ್ಪ ಅಂಟರತಾನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.