ADVERTISEMENT

ಯಾರಾಗ್ತಾರೆ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಮೇಯರ್?

ಮೇಯರ್, ಉಪಮೇಯರ್ ಆಯ್ಕೆಗೆ ಅಧಿಸೂಚನೆ; ಬಿಜೆಪಿಯಲ್ಲಿ ಗರಿಗೆದರಿದ ಚಟುವಟಿಕೆ

ಪ್ರಮೋದ
Published 12 ಮೇ 2022, 5:02 IST
Last Updated 12 ಮೇ 2022, 5:02 IST
ಹುಬ್ಬಳ್ಳಿಯಲ್ಲಿರುವ ಮಹಾನಗರ ಪಾಲಿಕೆ ಕಚೇರಿ
ಹುಬ್ಬಳ್ಳಿಯಲ್ಲಿರುವ ಮಹಾನಗರ ಪಾಲಿಕೆ ಕಚೇರಿ   

ಹುಬ್ಬಳ್ಳಿ: ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಸದಸ್ಯರ ಆಯ್ಕೆಯ ಚುನಾವಣೆಯ ಫಲಿತಾಂಶ ಬಂದು ಒಂಬತ್ತು ತಿಂಗಳ ಬಳಿಕ, ಮೇಯರ್‌ ಹಾಗೂ ಉಪಮೇಯರ್‌ ಆಯ್ಕೆಗೆ ಸರ್ಕಾರ ಅಧಿಸೂಚನೆ ಪ್ರಕಟಿಸಿದೆ. ಇದರ ಬೆನ್ನಲ್ಲೇ ರಾಜಕೀಯ ವಲಯದಲ್ಲಿ ಚಟುವಟಿಕೆ ಗರಿಗೆದರಿದೆ.

ಅವಳಿ ನಗರಗಳಾದರೂ ಸೌಲಭ್ಯ ಕಲ್ಪಿಸುವಲ್ಲಿ ಮತ್ತು ಅನುದಾನ ಒದಗಿಸುವಲ್ಲಿ ಧಾರವಾಡವನ್ನು ಕಡೆಗಣಿಸಲಾಗಿದೆ. ಆದ್ದರಿಂದ ಪ್ರತ್ಯೇಕ ಮಹಾನಗರ ಪಾಲಿಕೆ ಬೇಕು ಎನ್ನುವ ಕೂಗು ಅಲ್ಲಿ ಜೋರಾಗಿದೆ. ಇದರ ನಡುವೆಯೇ ಅಳೆದು ತೂಗಿ ಮೇಯರ್‌ ಪಟ್ಟ ಯಾರಿಗೆ ನೀಡಬೇಕು ಎನ್ನುವ ಚರ್ಚೆ ಬಿಜೆಪಿಯಲ್ಲಿ ನಡೆಯುತ್ತಿದೆ.

ಅಧಿಸೂಚನೆಯ ಪ್ರಕಾರ ಮೇಯರ್ ಸ್ಥಾನ ಸಾಮಾನ್ಯ ವರ್ಗ ಹಾಗೂ ಉಪಮೇಯರ್‌ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಪಾಲಿಕೆಗೆ ಆಯ್ಕೆಯಾಗಿರುವ ಒಟ್ಟು 82 ಸದಸ್ಯರ ಪೈಕಿ 39 ಬಿಜೆಪಿ, 33 ಕಾಂಗ್ರೆಸ್, 6 ಪಕ್ಷೇತರರು, 3 ಎಐಎಂಐಎಂ ಹಾಗೂ ಒಬ್ಬರು ಜೆಡಿಎಸ್‌ ಸದಸ್ಯರಿದ್ದಾರೆ.

ADVERTISEMENT

ಪಾಲಿಕೆಯ ಅಧಿಕಾರದ ಚುಕ್ಕಾಣಿ ಹಿಡಿಯಲು ಮ್ಯಾಜಿಕ್‌ ಸಂಖ್ಯೆ 42 ಸದಸ್ಯರ ಬಲದ ಅಗತ್ಯವಿದೆ. ಪಕ್ಷೇತರರಾಗಿ ಗೆಲುವು ಪಡೆದ ಒಬ್ಬರು ಬಿಜೆಪಿ ಸೇರ್ಪಡೆಯಾಗಿದ್ದರಿಂದ ಈ ಪಕ್ಷದ ಬಲ 40ಕ್ಕೆ ಏರಿಕೆಯಾಗಿದೆ. ಸ್ಥಳೀಯ ಶಾಸಕರು ಹಾಗೂ ವಿಧಾನ ಪರಿಷತ್‌ ಸದಸ್ಯರ ಬಲದಿಂದ ಬಿಜೆಪಿಗೆ ಅಧಿಕಾರದ ಗದ್ದುಗೆಗೆ ಏರುವ ಹಾದಿ ಬಹುತೇಕ ಸುಗಮವಾಗಿದೆ.

ಹೀಗಾಗಿ ಬಿಜೆಪಿಯಿಂದ ಆಯ್ಕೆಯಾಗಿ ಮೇಯರ್ ಸ್ಥಾನದ ಮೇಲೆ ಕಣ್ಣಿಟ್ಟಿರುವ ಸದಸ್ಯರು, ‘ಮೇಯರ್‌ ಸ್ಥಾನಕ್ಕೆ ನನ್ನನ್ನು ಪರಿಗಣಿಸಿ’ ಎಂದು ತಮ್ಮ ನಾಯಕರು ಹಾಗೂ ಪಕ್ಷದ ವರಿಷ್ಠರನ್ನು ಮನವೊಲಿಸುವಲ್ಲಿ ನಿರತರಾಗಿದ್ದಾರೆ. ಜೊತೆಗೆ, ತಮ್ಮ ಬೆಂಬಲಿಗರಿಂದಲೂ ನಾಯಕರ ದುಂಬಾಲು ಬಿದಿದ್ದಾರೆ.

ಸತತ ಮೂರನೇ ಬಾರಿಗೆ ಪಾಲಿಕೆಯ ಚುಕ್ಕಾಣಿ ಹಿಡಿಯಲು ಬಿಜೆಪಿ ಮುಂದಾಗಿದೆ. ಈ ಬಾರಿ ಧಾರವಾಡದಿಂದ ಈರೇಶ ಅಂಚಟಗೇರಿ, ವಿಜಯಾನಂದ ಶೆಟ್ಟಿ ಹಾಗೂ ಮಾಜಿ ಮೇಯರ್‌ ಶಿವು ಹಿರೇಮಠ ಅವರ ಹೆಸರುಗಳು ಮೇಯರ್ ಹುದ್ದೆಗೆ ಪ್ರಮುಖವಾಗಿ ಕೇಳಿಬರುತ್ತಿವೆ.

ಹುಬ್ಬಳ್ಳಿಯಿಂದಲೂ ಕೆಲವರ ಹೆಸರು ಮುಂಚೂಣಿಯಲ್ಲಿವೆ. ಹಿಂದೆ ಜೆಡಿಎಸ್‌ನಲ್ಲಿದ್ದು ಈಗ ಬಿಜೆಪಿಯಿಂದ ಗೆದ್ದಿರುವ ವಿರೋಧ ಪಕ್ಷದ ನಾಯಕನ ಸ್ಥಾನ ನಿಭಾಯಿಸಿದ ಅನುಭವ ಹೊಂದಿರುವ ರಾಜಣ್ಣ ಕೊರವಿ, ಹಿರಿಯ ಸದಸ್ಯರಾದ ಉಮೇಶ ಕೌಜಗೇರಿ, ಶಿವು ಮೆಣಸಿನಕಾಯಿ, ರಾಮಣ್ಣ ಬಡಿಗೇರ, ತಿಪ್ಪಣ್ಣ ಮಜ್ಜಗಿ, ಮಾಜಿ ಮೇಯರ್ ವೀರಣ್ಣ ಸವಡಿ ಅವರ ಹೆಸರುಗಳು ಚಾಲ್ತಿಯಲ್ಲಿವೆ.

ಈ ಕುರಿತು ಪ್ರಜಾವಾಣಿ ಜೊತೆ ಮಾತನಾಡಿದ ಉಮೇಶ ಕೌಜಗೇರಿ ‘ನಾನೂ ಮೇಯರ್‌ ಸ್ಥಾನದ ಆಕಾಂಕ್ಷಿ. ಪಕ್ಷ ಹಾಗೂ ನಾಯಕರು ಅವಕಾಶ ಕೊಡುವೆ ಭರವಸೆಯಿದೆ. ಅಂತಿಮವಾಗಿ ಪಕ್ಷ ಕೈಗೊಳ್ಳುವ ತೀರ್ಮಾನದಂತೆ ನಡೆದುಕೊಳ್ಳುತ್ತೇನೆ’ ಎಂದರು. ಹೀಗಾಗಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ಶಾಸಕ ಜಗದೀಶ ಶೆಟ್ಟರ್‌ ಅವರು ತೆಗೆದುಕೊಳ್ಳುವ ತೀರ್ಮಾನದತ್ತ ಎಲ್ಲ ಆಕಾಂಕ್ಷಿಗಳ ಚಿತ್ತ ನೆಟ್ಟಿದೆ.

ಮೇ 28ರಂದು ಮೇಯರ್‌, ಉಪಮೇಯರ್‌ ಆಯ್ಕೆಗೆ ಚುನಾವಣೆ

ಧಾರವಾಡಕ್ಕೆ ಆದ್ಯತೆ ನೀಡುವಂತೆ ಅಲ್ಲಿನ ಪಾಲಿಕೆ ಸದಸ್ಯರ ಆಗ್ರಹ

ಹುಬ್ಬಳ್ಳಿಯಿಂದ ಆಯ್ಕೆಯಾಗಿರುವ ಸದಸ್ಯರ ನಡುವೆ ಹೆಚ್ಚಿದ ಪೈಪೋಟಿ

ಅಧಿಕಾರ ಇದ್ದಾಗ ಹಾಗೂ ಇಲ್ಲದಾಗಲೂ ಪಕ್ಷಕ್ಕಾಗಿ ಕೆಲಸ ಮಾಡಿದ್ದೇನೆ. ನಾಯಕರು ನನ್ನ ಮೇಲೆ ವಿಶ್ವಾಸವಿಟ್ಟು ಮೇಯರ್ ಆಗಿ ಆಯ್ಕೆ ಮಾಡಿದರೆ ಸಮರ್ಥವಾಗಿ ನಿಭಾಯಿಸುವೆ
ಈರೇಶ ಅಂಚಟಗೇರಿ
ಬಿಜೆಪಿ ಪಾಲಿಕೆ ಸದಸ್ಯ, ಧಾರವಾಡ

ಹಿಂದೆ ಮೇಯರ್‌ ಆಗಿ ಕೆಲಸ ಮಾಡಿದ್ದೇನೆ. ಮತ್ತೊಂದು ಬಾರಿ ಅವಕಾಶ ಕೊಟ್ಟರೆ ಜವಾಬ್ದಾರಿ ನಿಭಾಯಿಸುವೆ. ಈ ವಿಷಯದಲ್ಲಿ ಪಕ್ಷದ ನಾಯಕರ ತೀರ್ಮಾನಕ್ಕೆ ಬದ್ಧನಾಗಿದ್ದೇನೆ
-ವೀರಣ್ಣ ಸವಡಿ
ಬಿಜೆಪಿ ಪಾಲಿಕೆ ಸದಸ್ಯ, ಹುಬ್ಬಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.