ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (ಎನ್‌ಡಬ್ಲುಕೆಆರ್‌ಟಿಸಿ) ಸಾರಿಗೆ ಮತ್ತು ಇತರೆ ಮೂಲಗಳಿಂದ ಸಂಗ್ರಹಿಸುವ ಆದಾಯ ಪ್ರಮಾಣ ಎರಡು ವರ್ಷಗಳಿಂದ ಏರಿಕೆ ಆಗಿದೆ.
2023–24 ಹಣಕಾಸು ವರ್ಷದಲ್ಲಿ ಸಾರಿಗೆಯಿಂದ ₹2,069 ಕೋಟಿ ಮತ್ತು ಸರಕು ಸಾಗಣೆ, ಬಾಡಿಗೆ ಸೇರಿ ಇತರೆ ಮೂಲಗಳಿಂದ ₹164 ಕೋಟಿ ಆದಾಯ ಸಂಗ್ರಹಿಸಿತ್ತು. ಸಾರಿಗೆ ಸಂಬಂಧಿತ ವಿವಿಧ ಯೋಜನೆಗಳ ಜಾರಿಯಿಂದ ಸರ್ಕಾರವು ₹140 ಕೋಟಿ ಮರು ಪಾವತಿ ಮಾಡಿತ್ತು. ಸಂಸ್ಥೆಗೆ ಒಟ್ಟಾರೆ 2,373 ಕೋಟಿ ಆದಾಯ ಪ್ರಮಾಣ ದಾಖಲಾಗಿತ್ತು. ಇದೇ ಅವಧಿಯಲ್ಲಿ ಸಾರಿಗೆ ಕಾರ್ಯಾಚರಣೆಗೆ ಸಂಸ್ಥೆಯು ₹2,695 ಕೋಟಿ ವೆಚ್ಚ ಮಾಡಿತ್ತು. ಹೀಗಾಗಿ ಸಂಗ್ರಹಿಸಿದ ಆದಾಯ ಮತ್ತು ಮಾಡಿದ ವೆಚ್ಚಕ್ಕೆ ಹೋಲಿಸಿದರೆ ಸಂಸ್ಥೆಗೆ ₹322 ಕೋಟಿ ನಷ್ಟವಾಗಿತ್ತು.
ಕಳೆದ ಮಾರ್ಚ್ 31ಕ್ಕೆ ಕೊನೆಯಾದ 2024–25ನೇ ಹಣಕಾಸು ವರ್ಷದಲ್ಲಿ ಒಟ್ಟಾರೆ ಆದಾಯ ಪ್ರಮಾಣವು ಹಿಂದಿನ ವರ್ಷದ ಆದಾಯಕ್ಕೆ ಹೋಲಿಸಿದರೆ, ಶೇ 17ರಷ್ಟು (₹413ಕೋಟಿ) ಏರಿಕೆಯಾಗಿದೆ. ಆದರೂ ನಷ್ಟದ ಹೊರೆಯಿಂದ ಹೊರ ಬರಲು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಸಾಧ್ಯವಾಗಿಲ್ಲ.
‘ಸಾರಿಗೆಯಿಂದ ಸಂಗ್ರಹವಾಗುವ ಆದಾಯ ಏರಿಕೆಯೊಂದಿಗೆ ಸಾರಿಗೆ ಕಾರ್ಯಾಚರಣೆಗಾಗಿ ಮಾಡುತ್ತಿರುವ ವೆಚ್ಚಗಳು ಕೂಡ ಏರಿಕೆಯಾಗಿವೆ. ಮುಖ್ಯವಾಗಿ, ಇಂಧನ ಖರೀದಿಗಾಗಿ ಹಾಗೂ ಸಿಬ್ಬಂದಿ ವೇತನ ಮತ್ತು ಪಿಂಚಣಿ ನೀಡುವುದಕ್ಕಾಗಿ ಮಾಡುವ ವೆಚ್ಚಗಳಲ್ಲಿ ಹೆಚ್ಚಳವಾಗಿದೆ’ ಎನ್ನುವುದು ಸಂಸ್ಥೆಯ ಅಧಿಕಾರಿಗಳ ವಿವರಣೆ.
2024–25ನೇ ಸಾಲಿನಲ್ಲಿ ಸಾರಿಗೆ ಆದಾಯ ಅಂದಾಜು ₹2,334 ಕೋಟಿ, ಇತರೆ ಮೂಲಗಳಿಂದ ಬರುವ ಆದಾಯ ₹153 ಕೋಟಿಯಾಗಿತ್ತು. ಈ ಅವಧಿಯಲ್ಲಿ ಸರ್ಕಾರದ ವಿವಿಧ ಯೋಜನೆಗಳ ಜಾರಿಗಾಗಿ ಸಂಸ್ಥೆಯು ಮಾಡಿದ ಒಟ್ಟು ವೆಚ್ಚದಲ್ಲಿ ಸರ್ಕಾರವು ₹298 ಕೋಟಿ ಮರುಪಾವತಿಸಿದೆ. ಒಟ್ಟಾರೆ ಸಂಸ್ಥೆಯ ಆದಾಯವು ಅಂದಾಜು ₹2,786 ಕೋಟಿಯಷ್ಟಾಗಿದೆ. ಈ ಅವಧಿಯಲ್ಲಿ ಸಾರಿಗೆ ಕಾರ್ಯಾಚರಣೆಗಾಗಿ ₹2,986.5 ಕೋಟಿ ಮೊತ್ತವನ್ನು ಸಂಸ್ಥೆ ವೆಚ್ಚ ಮಾಡಿದೆ. ಸಂಗ್ರಹಿಸಿದ ಆದಾಯ ಮತ್ತು ವೆಚ್ಚಕ್ಕೆ ಹೋಲಿಸಿದಾಗ ಸಂಸ್ಥೆಯು ₹200 ಕೋಟಿ ನಷ್ಟದಲ್ಲಿದೆ. ಈ ನಷ್ಟದ ಪ್ರಮಾಣವನ್ನು ಹಿಂದಿನ ಹಣಕಾಸು ವರ್ಷದಲ್ಲಿ ಆದ ನಷ್ಟಕ್ಕೆ ಹೋಲಿಸಿದರೆ ಶೇ 38ರಷ್ಟು ಕಡಿಮೆಯಾಗಿದೆ.
ರಾಜ್ಯದ ವಿವಿಧ ಸಾರಿಗೆ ಸಂಸ್ಥೆಗಳು ನಷ್ಟದ ಹೊರೆಯನ್ನು ಕಡಿಮೆ ಮಾಡಿಕೊಳ್ಳಲು ₹2 ಸಾವಿರ ಕೋಟಿ ಸಾಲ ಪಡೆಯುವುದಕ್ಕೆ ರಾಜ್ಯ ಸರ್ಕಾರವು ಅನುಮತಿ ನೀಡಿರುವುದನ್ನು ಇಲ್ಲಿ ಸ್ಮರಿಸಬಹುದು. ‘ಸರ್ಕಾರವು ಅನುಮತಿ ನೀಡಿದ ಸಾಲದ ಮೊತ್ತದಲ್ಲಿ ವಾಯವ್ಯ ಸಾರಿಗೆ ಸಂಸ್ಥೆಯು ₹600 ಕೋಟಿಗಾಗಿ ಬೇಡಿಕೆ ಇಟ್ಟಿದ್ದು, ಅನುಮೋದನೆಯಾಗಿದೆ. ಸಾಲದ ಹಣವನ್ನು ಭವಿಷ್ಯನಿಧಿ ಬಾಕಿ ಮೊತ್ತಕ್ಕೆ ಜಮಾಗೊಳಿಸಲಾಗುವುದು’ ಎಂದು ಸಂಸ್ಥೆಯ ಮುಖ್ಯ ಲೆಕ್ಕಾಧಿಕಾರಿ ಕೆ.ಎನ್.ಜಗದಂಬಾ ‘ಪ್ರಜಾವಾಣಿ‘ಗೆ ತಿಳಿಸಿದರು.
ಕೋವಿಡ್ ಅವಧಿಯಲ್ಲಿ ಸಂಸ್ಥೆಗೆ ಆದ ನಷ್ಟದ ಹೊರೆ ಎರಡು ವರ್ಷಗಳಿಂದ ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದೆ. ವರಮಾನ ಸಂಗ್ರಹದಲ್ಲಿ ಏರಿಕೆ ಆಗಿದೆ. ಆದರೆ ಸಾರಿಗೆ ಕಾರ್ಯಾಚರಣೆ ವೆಚ್ಚಕ್ಕಿಂತಲೂ ವರಮಾನ ಕಡಿಮೆ ಇದೆಪ್ರಿಯಾಂಗಾ ಎಂ. ಎನ್‌ಡಬ್ಲುಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.