
ಧಾರವಾಡ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಉತ್ತರ ಕರ್ನಾಟಕ ಆಟೊ ರಿಕ್ಷಾ ಚಾಲಕರ ಸಂಘ ಹಾಗೂ ಧಾರವಾಡ ಆಟೊ ರಿಕ್ಷಾ ಚಾಲಕರ ಅಭಿವೃದ್ಧಿ ಸಂಘದವರು ಬುಧವಾರ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಎದುರು ಸಮಾವೇಶಗೊಂಡ ಪ್ರತಿಭಟನಾಕಾರರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಆಟೊರಿಕ್ಷಾ ಚಾಲಕರ ಅಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಶೇಖರಯ್ಯ ಮಠಪತಿ ಮಾತನಾಡಿ, ‘ಆಟೊ ರಿಕ್ಷಾ ಚಾಲಕರ ಬೇಡಿಕೆಗಳನ್ನು ಈಡೇರಿಸುವಂತೆ ಹಲವು ಬಾರಿ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಹುಬ್ಬಳ್ಳಿ– ಧಾರವಾಡ ಅವಳಿನಗರ ವ್ಯಾಪ್ತಿಯಲ್ಲಿ ರ‍್ಯಾಪಿಡೊ, ನಮ್ಮ ಯಾತ್ರಿ, ಓಲಾ, ಊಬರ್ ಬೈಕ್, ಟ್ಯಾಕ್ಸಿಗಳನ್ನು ನಿಷೇಧಿಸಬೇಕು’ ಎಂದು ಒತ್ತಾಯಿಸಿದರು.
‘ಅವಳಿ ನಗರದಲ್ಲಿ 25 ಸಾವಿರಕ್ಕೂ ಹೆಚ್ಚು ಆಟೊಗಳು ಇವೆ. ಚಾಲಕರು ಜೀವನ ನಿರ್ವಹಣೆಗೆ ರಿಕ್ಷಾ ಅವಲಂಬಿಸಿದ್ದಾರೆ. ಶಕ್ತಿ ಯೋಜನೆ ಜಾರಿ ಬಳಿಕ ಆಟೊ ರಿಕ್ಷಾದಲ್ಲಿ ಸಂಚರಿಸುವವರು ಕಡಿಮೆಯಾಗಿದ್ದಾರೆ. ಚಾಲಕರು ಸಾಲದ ಕಂತು, ಮಕ್ಕಳ ಶಾಲಾ ಶುಲ್ಕ ಪಾವತಿಸಲು ಕಷ್ಟವಾಗಿದೆ’ ಎಂದರು.
ಆಟೊ ಚಾಲಕರ ಸಂಘದ ಜೀವನ ಉತ್ಕುರಿ, ವಿ.ಬಿ.ಸಂಜೀವಪ್ಪನವರ, ಲಕ್ಷ್ಣಣ ಜಮ್ಮನಾಳ, ಪ್ರಕಾಶ ಗಡಾದ, ಗೌಸ್ ಕಿತ್ತೂರು, ನಾಗರಾಜ ಅರೇರ, ರಾಘವೇಂದ್ರ ಬಡಿಗೇರ, ಕೈಲಾಸ ಕಟ್ಟಿಮನಿ, ಡಿ.ಪಿ. ಸುಜೆಯ್, ಹುಲ್ಲಪ್ಪ ಶಿರಬಡಗಿ, ಸುರೇಶ ರಾಠೋಡ, ನೂರಅಹ್ಮದ್ ಮಾಗಡಿ, ಜ್ಞಾನೇಶ ಹಂಚಾಟಿ, ಇಲಿಯಾಸ್ ಬಳಬಟ್ಟಿ ಪ್ರತಿಭಟನೆಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.