ADVERTISEMENT

ಹಳೇ ಹುಬ್ಬಳ್ಳಿ: ಧಾರ್ಮಿಕ ಮುಖಂಡರಿಂದ ಸೌಹಾರ್ದದ ಮಂತ್ರ

ಗಲಭೆ ತಣ್ಣಗಾಗಿಸಲು ಪ್ರಯತ್ನ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2022, 12:46 IST
Last Updated 20 ಏಪ್ರಿಲ್ 2022, 12:46 IST
ಹುಬ್ಬಳ್ಳಿಯಲ್ಲಿ ಬುಧವಾರ ವಿವಿಧ ಧರ್ಮಗಳ ಮುಖಂಡರು ಪರಸ್ಪರ ಕೈ ಹಿಡಿದು ಒಗ್ಗಟ್ಟು ಪ್ರದರ್ಶಿಸಿದರು
ಹುಬ್ಬಳ್ಳಿಯಲ್ಲಿ ಬುಧವಾರ ವಿವಿಧ ಧರ್ಮಗಳ ಮುಖಂಡರು ಪರಸ್ಪರ ಕೈ ಹಿಡಿದು ಒಗ್ಗಟ್ಟು ಪ್ರದರ್ಶಿಸಿದರು   

ಹುಬ್ಬಳ್ಳಿ: ಹಳೇ ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ಗಲಭೆ ನಡೆದ ಹಿನ್ನೆಲೆಯಲ್ಲಿ ಶಾಂತಿ ಕಾಪಾಡುವಂತೆ ಮಾಡಲು ಹಿಂದೂ ಹಾಗೂ ಮುಸ್ಲಿಂ ಸಮಾಜದ ಧಾರ್ಮಿಕ ಮುಖಂಡರು ಬುಧವಾರ ಸೌಹಾರ್ದದ ಮಂತ್ರ ಜಪಿಸಿದರು.

ಎರಡೂ ಧರ್ಮಗಳ ಮುಖಂಡರು ಒಟ್ಟಿಗೆ ಪತ್ರಿಕಾಗೋಷ್ಠಿ ಮಾಡಿ ‘ಧಾರವಾಡ ಜಿಲ್ಲೆ ಸೌಹಾರ್ದತೆಗೆ ಹೆಸರಾಗಿದೆ. ಇಲ್ಲಿ ಹಿಂದೂ ಹಾಗೂ ಮುಸಲ್ಮಾನರು ಸಹೋದರರ ರೀತಿಯಲ್ಲಿ ಬದುಕುತ್ತಿದ್ದಾರೆ. ಅವರವರ ಧರ್ಮಗಳನ್ನು ಆಚರಿಸಲು ಯಾರ ಅಡ್ಡಿಯೂ ಇಲ್ಲ. ಎಲ್ಲರೂ ಸಹಭಾಳ್ವೆ, ಸಮಾನತೆಯಿಂದ ಬದುಕಬೇಕು. ಮೊದಲಿನಂತೆ ಹುಬ್ಬಳ್ಳಿ ಶಾಂತಿಯುತವಾಗಿರಬೇಕು‘ ಎಂದು ಆಶಿಸಿದರು.

’ಹಳೇ ಹುಬ್ಬಳ್ಳಿಯ ಗಲಭೆಗೆ ಕಾರಣರಾದವರು ಯಾವುದೇ ಸಮುದಾಯದವರಿದ್ದರೂ ಶಿಕ್ಷೆ ವಿಧಿಸಬೇಕು. ಕೋಮು ಗಲಭೆಯನ್ನು ತಡೆಯಲು ಸರ್ಕಾರ ಹದ್ದಿನ ಕಣ್ಣು ಇಡಬೇಕು.‘ ಎಂದು ಆಗ್ರಹಿಸಿದರು. ಎಲ್ಲರೂ ಒಟ್ಟಿಗೆ ಕೈ ಹಿಡಿದು ‘ಸಾರೇ ಜಹಾಂಸೆ ಅಚ್ಚಾ’ ಎಂದು ಹಾಡಿದರು.

ಧಾರ್ಮಿಕ ಮುಖಂಡರಾದ ಸೈಯದ್‌ ಅಹ್ಮದ್‌ ರಜಾ ಸರ್‌ ಖಾಜಿ, ಅಬ್ದುಲ್‌ ರಜಾಕ್‌ ಖಾದ್ರಿ ಹಾಷ್ಮಿಸುತಾರಿ ಖಾದ್ರಿ, ಬೈಲಹೊಂಗಲದ ಶಿವಾನಂದ ಪರಮಹಂಸ ಸ್ವಾಮೀಜಿ, ಸೈಯದ್‌ ನಿಸಾರ್‌ ಅಹ್ಮದ್‌ ಖಾದ್ರಿ, ಮೊಹಮ್ಮದ್‌ ಅನ್ಸಾಲ್‌ ಮುಕ್ತಿ ಖಾದ್ರಿ, ಹಫೀಜ್‌ ಅಲೀಮುದ್ದೀನ್‌ ರಜ್ವಿ, ಹುಬ್ಬಳ್ಳಿ ಹೊಸಮಠದ ಪೀಠಾಧಿಪತಿ ಚಂದ್ರಶೇಖರ ಶಿವಯೋಗಿ ರಾಜಯೋಗಿಂದ್ರ ಸ್ವಾಮೀಜಿ, ಬೆಂಗಳೂರಿನ ಚನ್ನಬಸವೇಶ್ವರ ಜ್ಞಾನಪೀಠದ ಪೀಠಾಧ್ಯಕ್ಷ ಚನ್ನಬಸವಾನಂದ ಸ್ವಾಮೀಜಿ ಪಾಲ್ಗೊಂಡಿದ್ದರು.

ಮನವಿ: ಗಲಭೆಯಲ್ಲಿ ಗಾಯಗೊಂಡಿದ್ದ ಪೊಲೀಸ್‌ ಇನ್ಸ್‌ಪೆಕ್ಟರ್ ಎನ್.ಸಿ. ಕಾಡದೇವರಮಠ ಅವರನ್ನು ಭೇಟಿಯಾದ ಬಳಿಕ ಮಾತನಾಡಿದ ಮೂರುಸಾವಿರ ಮಠದ ಗುರುಸಿದ್ಧರಾಜ ಯೋಗೀಂದ್ರ ಸ್ವಾಮೀಜಿ ’ಯಾರಿಗೂ ಈ ದೇಶ ಬಿಟ್ಟು ಹೋಗಲು ಸಾಧ್ಯವಿಲ್ಲ. ಎಲ್ಲರೂ ಕೂಡಿ ಬಾಳಬೇಕು. ಹಿಂದೂ ಮತ್ತು ಮುಸ್ಲಿಮರು ಹೊಂದಾಣಿಕೆಯಿಂದ ಬದುಕಬೇಕು. ಎರಡೂ ಧರ್ಮಗಳ ಹಬ್ಬ ಬಂದಾಗ ಪರಸ್ಪರ ಶಾಂತಿ ಕಾಪಾಡಿ, ಜಗತ್ತಿಗೆ ಸೌಹಾರ್ದ ಸಾರಬೇಕು’ ಎಂದರು‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.