ADVERTISEMENT

ಹುಬ್ಬಳ್ಳಿ: ಈರುಳ್ಳಿ ರಫ್ತು ನಿಷೇಧ ಹಿಂಪಡೆಯಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 27 ಜನವರಿ 2024, 15:50 IST
Last Updated 27 ಜನವರಿ 2024, 15:50 IST
ಈರುಳ್ಳಿ
ಈರುಳ್ಳಿ   

ಹುಬ್ಬಳ್ಳಿ: ‘ವಿದೇಶಕ್ಕೆ ಈರುಳ್ಳಿ ರಫ್ತು ನಿಷೇಧಿಸಿರುವ ಕೇಂದ್ರ ಸರ್ಕಾರ, ಈರುಳ್ಳಿ ಬೆಳೆಗಾರರ ಸಂಕಷ್ಟವನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ. ಬರಗಾಲದಿಂದ ತತ್ತರಿಸಿ ಹೋಗಿರುವ ರೈತರ ಬೆನ್ನಿಗೆ ಕೇಂದ್ರ ಸರ್ಕಾರ ಬರೆ ಎಳೆದಿದ್ದು, ರಫ್ತು ನಿಷೇಧ ಶೀಘ್ರ ಹಿಂಪಡೆಯಬೇಕು’ ಎಂದು ಕರ್ನಾಟಕ ರಾಜ್ಯ ಈರುಳ್ಳಿ ಬೆಳೆಗಾರರ ಸಂಘದ ರಾಜ್ಯ ಅಧ್ಯಕ್ಷ ಎನ್‌.ಎಂ. ಸಿದ್ದೇಶ ಒತ್ತಾಯಿಸಿದರು.

ನಗರದಲ್ಲಿ ಶನಿವಾರ ಸಂಘದ ಸದಸ್ಯರೊಂದಿಗೆ ಈರುಳ್ಳಿಯ ಹಾರ ಮಾಡಿ ಧರಿಸಿಕೊಂಡು ಬಂದು ಪತ್ರಿಕಾಗೋಷ್ಠಿ ನಡೆಸಿದ ಅವರು, ‘ಈರುಳ್ಳಿ ಬೆಳೆಗಾರರು ಸಂಕಷ್ಟದಲ್ಲಿರುವಾಗಲೇ ರಫ್ತು ನಿಷೇಧ ಮಾಡಿದ್ದು ಸರಿಯಲ್ಲ. ರಾಜ್ಯದ 13 ಜಿಲ್ಲೆಗಳಲ್ಲಿ ಒಟ್ಟು 30 ಲಕ್ಷದಷ್ಟು ಈರುಳ್ಳಿ ಬೆಳೆಗಾರರಿದ್ದು, ಗದಗ, ಹುಬ್ಬಳ್ಳಿ– ಧಾರವಾಡ, ಬಾಗಲಕೋಟೆಯಲ್ಲಿ ಅಧಿಕವಾಗಿ ಬೆಳೆಯುತ್ತಾರೆ. ರೈತರ ಬೆಳೆಗೆ ತಕ್ಕ ಬೆಲೆ ಸಿಗುತ್ತಿಲ್ಲ. ಈರುಳ್ಳಿ ಕ್ವಿಂಟಲ್‌ಗೆ ₹1200 ಆಗಿದ್ದು, ಬೆಳೆಯಲು ₹1,800 ಖರ್ಚು ಆಗುತ್ತದೆ. ಹೀಗಾದರೆ ರೈತರ ಪಾಡೇನು’ ಎಂದು ಬೇಸರ ವ್ಯಕ್ತಪಡಿಸಿದರು.

‘ಈರುಳ್ಳಿಗೆ ಕನಿಷ್ಠ ₹3,500 ಬೆಂಬಲ ಬೆಲೆ ನೀಡಬೇಕು, ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು, ಹುಬ್ಬಳ್ಳಿ, ಗದಗ ಹಾಗೂ ಬೆಂಗಳೂರಿನಲ್ಲಿ ನಾಫೇಡ್‌ ಖರೀದಿ ಕೇಂದ್ರಗಳನ್ನು ಸ್ಥಾಪಿಸಬೇಕು. ನಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ನಗರದಲ್ಲಿ ತೀವ್ರ ಹೋರಾಟ ಕೈಗೊಳ್ಳಲಾಗುವುದು’ ಎಂದು ಎಚ್ಚರಿಸಿದರು.

ADVERTISEMENT

ವೀರಣ್ಣ ಶೇ. ಕಾಳಗೆ, ಲೋಕಣ್ಣ ಉಳ್ಳಾಗಡ್ಡಿ, ತಿಪ್ಪಣ್ಣ ಶಿ. ತಲ್ಲೂರ, ಬಸವರಾಜ ಹಡಪದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.