
ಸಾಂದರ್ಭಿಕ ಚಿತ್ರ
ಹುಬ್ಬಳ್ಳಿ: ಆನ್‌ಲೈನ್ ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭ ದೊರೆಯುತ್ತದೆ ಎನ್ನುವ ಜಾಹೀರಾತು ನಂಬಿ ನಗರದ ಶಾಯವ್ವ ಅವರು, ಆನ್‌ಲೈನ್‌ನಲ್ಲಿ ₹17.45 ಲಕ್ಷ ಕಳೆದುಕೊಂಡಿದ್ದಾರೆ.
ಶಾಯವ್ವ ಅವರು ಯೂಟ್ಯೂಬ್ ನೋಡುತ್ತಿದ್ದಾಗ ಹಣ ಹೂಡಿಕೆ ಜಾಹೀರಾತು ನೋಡಿ, ಅದರ ಕೆಳಗಿರುವ ಲಿಂಕ್ ಒತ್ತಿದ್ದಾರೆ. ತಕ್ಷಣ ವಾಟ್ಸ್ಆ್ಯಪ್ ಗ್ರೂಪ್‌ಗೆ ಅವರ ಮೊಬೈಲ್ ನಂಬರ್ ಸೇರ್ಪಡೆಯಾಗಿದ್ದು, ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭ ನೀಡುವುದಾಗಿ ವಂಚಕರು ಸಂದೇಶ ಕಳುಹಿಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ಹುಬ್ಬಳ್ಳಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಿಳೆ ಸಾವು: ಹಳೇ ಹುಬ್ಬಳ್ಳಿ ಶ್ರೀರಾಮನಗರದ ಹನುಮಂತರ ದೇವರ ಗುಡಿಯಲ್ಲಿ ಹಚ್ಚಿದ್ದ ದೀಪ ಆಕಸ್ಮಿಕವಾಗಿ ಸೀರೆಗೆ ತಗುಲಿ ಗಾಯಗೊಂಡು ಕೆಎಂಸಿ–ಆರ್‌ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಾಂತಾಬಾಯಿ ಕದಂ (75) ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
ಫೆ. 5ರಂದು ಘಟನೆ ನಡೆದಿದ್ದು, ಅವರು ಗಂಭೀರವಾಗಿ ಗಾಯಗೊಂಡಿದ್ದರು. ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಭರಣದ ಮಳಿಗೆಗೆ ನುಗ್ಗಿದ ಆಟೊ: ನಗರದ ಗೋಕುಲ ರಸ್ತೆಯ ಜೋಯಾಲುಕ್ಕಾಸ್ ಆಭರಣದ ಮಳಿಗೆಗೆ ನಿಯಂತ್ರಣ ತಪ್ಪಿ ನುಗ್ಗಿದ ಆಟೊ, ಕೌಂಟರ್‌ಗೆ ಹಾಗೂ ಚಿನ್ನಾಭರಣ ಇರುವ ಶೋಕೇಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ₹7.50 ಲಕ್ಷ ಹಾನಿಯಾಗಿದೆ.
ಆಟೊ ಚಾಲಕ ಇಬ್ಬರು ಪ್ರಯಾಣಿಕರನ್ನು ಕುಳ್ಳಿರಿಸಿಕೊಂಡು ಗೋಕುಲ ಕಡೆಗೆ ತೆರಳುತ್ತಿದ್ದ. ಆಟೊ ನಿಯಂತ್ರಿಸಲಾಗದೆ ಮಳಿಗೆಯ ಬಾಗಿಲಿಗೆ ಡಿಕ್ಕಿ ಹೊಡೆದು ಒಳಗೆ ನುಗ್ಗಿ ಹಾನಿ ಪಡಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಗೋಕುಲ ರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸರ ಕಿತ್ತು ಪರಾರಿ: ಹಳೇಹುಬ್ಬಳ್ಳಿಯ ಅಭಿನವನಗರದ ಕಟ್ಟೆಯ ಮೇಲೆ ಕುಳಿತುಕೊಂಡಿದ್ದ ಸ್ಥಳೀಯ ನಿವಾಸಿ ರಾಧಾ ಸುಬ್ಬಣ್ಣವರ ಅವರ ಕೊರಳಲ್ಲಿದ್ದ ₹1 ಲಕ್ಷ ಮೌಲ್ಯದ ಮಾಂಗಲ್ಯ ಸರವನ್ನು ಬೈಕ್‌ನಲ್ಲಿ ಬಂದ ಇಬ್ಬರು ಕಿತ್ತು ಪರಾರಿಯಾಗಿದ್ದಾರೆ. ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.