ADVERTISEMENT

ಆನ್‍ಲೈನ್ ಮ್ಯಾಟ್ರಿಮೊನಿ; ಎಚ್ಚರ ತಪ್ಪದಿರಿ…

ಗೋವರ್ಧನ ಎಸ್‌.ಎನ್‌.
Published 11 ಫೆಬ್ರುವರಿ 2026, 4:53 IST
Last Updated 11 ಫೆಬ್ರುವರಿ 2026, 4:53 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮೊದಲು ಈ ಎರಡು ಘಟನೆಗಳನ್ನು ಓದಿ …

ಇದು ಕಳೆದ ವರ್ಷ ತೆಲಂಗಾಣದ ಚಂದ್ರಯಾನಗುಟ್ಟದಲ್ಲಿ ನಡೆದ ಪ್ರಕರಣ. 30 ವರ್ಷದ ವ್ಯಕ್ತಿಯೊಬ್ಬರಿಗೆ ಮಾಟ್ರಿಮೊನಿ ವೆಬ್‍ಸೈಟ್‍ ಮೂಲಕ ಮಹಿಳೆಯೊಬ್ಬಳು ಪರಿಚಯವಾದಳು. ತಾನು ಚೆನ್ನೈ ಮೂಲದವಳು, ಸದ್ಯ ಲಂಡನ್‍ನಲ್ಲಿರುವೆ ಎಂದು ಹೇಳಿಕೊಂಡಿದ್ದಳು. ಮಾತಿನಲ್ಲೇ ಪ್ರೀತಿ ತೋರುತ್ತಿದ್ದ ಆಕೆಯನ್ನು ಯುವಕ ತುಂಬಾ ಇಷ್ಟಪಟ್ಟು, ಮದುವೆಯಾಗುವ ನಿರ್ಧಾರವನ್ನೂ ಮಾಡಿದ.

ಕೆಲ ತಿಂಗಳು ಕಳೆದ ಬಳಿಕ, ತನಗೆ ತಿಳಿದ ಆನ್‍ಲೈನ್ ವೇದಿಕೆಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚು ಹಣ ಗಳಿಸಬಹುದು, ತಾನೂ ಗಳಿಸಿರುವೆ ಎಂದು ಹೇಳಿ, ಯುವಕನನ್ನು ನಂಬಿಸಿದಳು. ಆಕೆಯ ಮಾತಿಗೆ ಮರುಳಾದ ಯುವಕ ತಾನು ಉಳಿಸಿದ ಹಣ ಹಾಗೂ ಸ್ನೇಹಿತರ ಬಳಿ ಪಡೆದ ಹಣ ಸೇರಿ ಒಟ್ಟು ₹27 ಲಕ್ಷವನ್ನು ಆಕೆ ಹೇಳಿದ ವೆಬ್‍ಸೈಟ್‍ನಲ್ಲಿ ಹೂಡಿಕೆ ಮಾಡಿದ. ಸ್ವಲ್ಪ ಸಮಯದಲ್ಲೇ, ಈ ವೆಬ್‍ಸೈಟ್‍ನಲ್ಲಿ ಕೋಟ್ಯಂತರ ರೂಪಾಯಿ ಸಂದಾಯವಾಗಿದ್ದು ತೋರಿಸಿತು. ಹಣ ಬಿಡಿಸಿಕೊಳ್ಳಲು ತೆರಿಗೆ ರೂಪದಲ್ಲಿ ₹13.47 ಲಕ್ಷವನ್ನು ಕೇಳಿದಾಗಲೇ ಯುವಕನಿಗೆ ಅರ್ಥವಾಗಿದ್ದು, ತನಗೆ ಮೋಸವಾಗಿದೆ ಎಂದು. ಈ ಕುರಿತು ಹೈದರಾಬಾದ್‍ ಪೊಲೀಸ್‍ ಠಾಣೆಯಲ್ಲಿ ದೂರು ದಾಖಲಿಸಿದ.

ADVERTISEMENT

ಇಂತಹುದೇ ಮತ್ತೊಂದು ಪ್ರಕರಣ ಕೇರಳದಲ್ಲಿ ನಡೆದಿತ್ತು. ಮ್ಯಾಟ್ರಿಮೊನಿ ವೆಬ್‍ಸೈಟ್‍ ಮೂಲಕ ವೈದ್ಯನಿಗೆ ಪರಿಚಯವಾದ ಮಹಿಳೆ, ₹37 ಲಕ್ಷ ಹಣ ಹೂಡಿಕೆ ಮಾಡಿಸಿದ್ದಳು. ವಂಚನೆ ಅರಿವಿಗೆ ಬಂದಾಗ ವೈದ್ಯ ದೂರು ದಾಖಲಿಸಿದ್ದ. ಪ್ರಕರಣದ ಬೆನ್ನತ್ತಿದ ಕೊಚ್ಚಿ ನಗರ ಪೊಲೀಸರು ಮೂವರು ವಂಚಕರನ್ನು ಬಂಧಿಸಿದರು. ಕಾಂಬೋಡಿಯಾದಿಂದ ನಡೆಯುತ್ತಿದ್ದ ಈ ವಂಚನೆ ಜಾಲದಲ್ಲಿ ಹಲವರು ಸಿಲುಕಿದ್ದು ಆನಂತರ ಬೆಳಕಿಗೆ ಬಂದಿತ್ತು. ಇದು ಈ ವರ್ಷ ನಡೆದ ಘಟನೆ.

ಇಂತಹ ಹಲವಾರು ಪ್ರಕರಣಗಳು ಭಾರತದಲ್ಲಿ ವರದಿಯಾಗಿವೆ. ಇದನ್ನು ತಿಳಿಸಿ, ನಿಮ್ಮನ್ನು ಹೆದರಿಸುತ್ತಿಲ್ಲ. ಎಚ್ಚರ ತಪ್ಪಿದರೆ ಏನೆಲ್ಲಾ ಆಗಬಹುದು ಎಂಬುದಕ್ಕೆ ಇವು ನಿದರ್ಶನಗಳಷ್ಟೇ. ಈಗ ಮುಖ್ಯ ವಿಷಯಕ್ಕೆ ಬರೋಣ…

ಮದುವೆಯು ಜೀವನದ ಮಹತ್ವದ ಘಟ್ಟ ಆಗಿರುವುದರಿಂದ ಬಾಳ ಸಂಗಾತಿಯ ಆಯ್ಕೆ ಬದುಕಿನ ದಿಕ್ಕನ್ನು ನಿರ್ಧರಿಸುತ್ತದೆ. ಹಾಗಾಗಿ, ಈ ವಿಚಾರದಲ್ಲಿ ಸಾಕಷ್ಟು ಎಚ್ಚರ ವಹಿಸುವುದು ಅತ್ಯಗತ್ಯ. ಆಧುನಿಕ ಕಾಲದಲ್ಲಿ ಸೂಕ್ತ ಸಂಗಾತಿಯನ್ನು ಹುಡುಕಲು, ಆಯ್ಕೆ ಮಾಡಿಕೊಳ್ಳಲು ಆನ್‍ಲೈನ್‍ನಲ್ಲಿ ಹಲವಾರು ಮ್ಯಾಟ್ರಿಮೊನಿ ವೇದಿಕೆಗಳಿದ್ದರೂ ಜಾಗರೂಕರಾಗಿ ಇರಲೇಬೇಕಿದೆ.

ತಂತ್ರಜ್ಞಾನ ಬೆಳೆದಂತೆ ಎಲ್ಲದಕ್ಕೂ ಹೊಸ ಹೊಸ ಅವಕಾಶಗಳು ಸೃಷ್ಟಿಯಾಗುತ್ತಿವೆ. ಇದಕ್ಕೆ ಮದುವೆಯೂ ಹೊರತಲ್ಲ. ಬಾಳ ಪಯಣದಲ್ಲಿ ತನ್ನೊಂದಿಗೆ ಪಯಣಿಸುವ ಜೊತೆಗಾರ ಅಥವಾ ಜೊತೆಗಾರ್ತಿ ಹೀಗೇ ಇರಬೇಕೆಂಬ ಸ್ಪಷ್ಟ ಕಲ್ಪನೆ, ನಿರೀಕ್ಷೆ ಎಲ್ಲರಲ್ಲೂ ಇವೆ. ಈ ಕೆಲಸವನ್ನು ಸುಲಭ ಮಾಡಿಕೊಟ್ಟಿವೆ ಆನ್‍ಲೈನ್‍ ಮ್ಯಾಟ್ರಿಮೊನಿ ವೆಬ್‍ಸೈಟ್‍ಗಳು.

ಬಾಳ ಸಂಗಾತಿ ಹೇಗಿರಬೇಕು, ಎಷ್ಟು ವಯಸ್ಸಿರಬೇಕು, ಯಾವ ಶಿಕ್ಷಣ ಪಡೆದಿರಬೇಕು, ಯಾವ ಕೆಲಸ ಮಾಡುತ್ತಿರಬೇಕು, ಎಂತಹ ಕುಟುಂಬದ ಹಿನ್ನೆಲೆ ಇರಬೇಕು, ಎಲ್ಲಿ ಜೀವನ ಸಾಗಿಸುತ್ತಿರಬೇಕು, ಎಷ್ಟು ಸಂಬಳ ಪಡೆಯುತ್ತಿರಬೇಕು, ತಮ್ಮದೇ ಜಾತಿಯವರಾಗಿಬೇಕೇ ಅಥವಾ ಯಾವುದೇ ಜಾತಿಯಾಗಿದ್ದರೂ ಸರಿಯೇ ಎಂಬಿತ್ಯಾದಿ ನಿರೀಕ್ಷೆಗಳನ್ನು ಎಲ್ಲರ ಬಳಿಯೂ ಹೇಳಿಕೊಳ್ಳಲಾಗದು. ಆದರೆ, ಆನ್‍ಲೈನ್‍ ವೇದಿಕೆಗಳಲ್ಲಿ ಇಷ್ಟು ಮಾಹಿತಿ ನೀಡಿದರೆ ಸಾಕು ನಿರೀಕ್ಷೆ ತಕ್ಕಂತೆ, ಒಮ್ಮೊಮ್ಮೆ ನಿರೀಕ್ಷೆಗೂ ಮೀರಿ, ಇಲ್ಲವೇ ಸಮಾಧಾನವಾದರೂ ಆಗುವಂತಹ ವ್ಯಕ್ತಿಗಳ ಮಾಹಿತಿ ನಮ್ಮೆದುರು ತೆರೆದುಕೊಳ್ಳುತ್ತದೆ.

ಊರೂರು ತಿರುಗಿ, ಅವರಿವರನ್ನು ವಿಚಾರಿಸಿ, ಹಲವಾರು ನಿರೀಕ್ಷೆಗಳನ್ನು ಹೊತ್ತು ವರನನ್ನೋ/ ವಧುವನ್ನೋ ನೋಡುವ ಶಾಸ್ತ್ರ, ತನ್ನ ನಿರೀಕ್ಷೆಯಂತೆ ಇರದಿದ್ದರೆ ಮತ್ತೆ ಹುಡುಕುವ ತ್ರಾಸು, ಇದಕ್ಕಾಗಿ ಬ್ರೋಕರ್‌ಗಗಳಿಗೆ ಗಂಟುಬೀಳುವ ತಾಪತ್ರಯ ಆನ್‍ಲೈನ್‍ ಮ್ಯಾಟ್ರಿಮೊನಿ ವೇದಿಕೆಗಳಿಂದ ತಪ್ಪಿದೆ. ವಿಚ್ಛೇದಿತರು, ತುಂಬಾ ವಯಸ್ಸಾದವರು, ವಿಧವೆ ಅಥವಾ ವಿಧುರರು, ಎರಡನೇ ಮದುವೆಯ ಇಚ್ಛೆ ಉಳ್ಳವರು ಸಂಗಾತಿ ಹುಡುಕುವಾಗ ಮುಜುಗರ ಅನುಭವಿಸುವುದರಿಂದಲೂ ಇದು ಪಾರುಮಾಡುತ್ತದೆ.

ಇತ್ತೀಚಿನ ಕಾಲಘಟ್ಟದಲ್ಲಿ ಎಷ್ಟೋ ಮಂದಿಯ ಮದುವೆಗೆ ಮ್ಯಾಟ್ರಿಮೊನಿ ವೆಬ್‍ಸೈಟ್‍ಗಳೇ ಕಾರಣವಾಗಿವೆ. ನಮ್ಮ ನಿರೀಕ್ಷೆಗೆ ತಕ್ಕಂತೆ ಯೋಗ್ಯ ಸಂಗಾತಿಯನ್ನು ಸೂಚಿಸುವ, ವ್ಯಕ್ತಿಸ್ವಾತಂತ್ರ್ಯ ಕಾಪಾಡುವ, ನಂಬಿಕೆ ಉಳಿಸಿಕೊಂಡ ಹಲವಾರು ಮ್ಯಾಟ್ರಿಮೊನಿ ವೆಬ್‍ಸೈಟ್‍ಗಳಿವೆ. ಜಾತಿ, ವೃತ್ತಿ, ಸ್ಥಳ ಆಧರಿಸಿ ಆಯಾ ಜನರಿಗೆ ಸೇವೆ ಒದಗಿಸುತ್ತಿವೆ. ಗಂಡು-ಹೆಣ್ಣಿನ ವೈವಾಹಿಕ ಬದುಕಿಗೆ ಸಂಪರ್ಕ ಸೇತುವೆಯಾಗಿವೆ.

ಆನ್‍ಲೈನ್‍ನಲ್ಲಿ ಒಳಿತೂ ಇದೆ, ಕೆಡುಕೂ ಇದೆ. ಇದಕ್ಕೆ ಆನ್‍ಲೈನ್‍ ಮ್ಯಾಟ್ರಿಮೊನಿ ವ್ಯವಸ್ಥೆಯೂ ಹೊರತಲ್ಲ. ನಕಲಿ ವೆಬ್‍ಸೈಟ್‍ಗಳಿಂದ ಹಿಡಿದು ನಕಲಿ ವ್ಯಕ್ತಿಗಳು ಮದುವೆ ಹೆಸರಲ್ಲಿ ಮೋಸ ಮಾಡಿದ್ದಾರೆ. ಹಲವರು ಆನ್‍ಲೈನ್‍ ವೇದಿಕೆಗಳ ಮೂಲಕ ಆಗಂತುಕರ ಸಂಪರ್ಕಕ್ಕೆ ಬಂದು, ನಂತರ ಸಮಸ್ಯೆಗೆ ಸಿಲುಕಿದ ಹಲವು ಘಟನೆಗಳು ನಡೆದಿವೆ. ಹಾಗಾಗಿ, ಈ ವಿಚಾರದಲ್ಲೂ ವರ-ವಧುವಿನೊಂದಿಗೆ ಕುಟುಂಬದವರೂ ಎಚ್ಚರ ವಹಿಸುವುದು ಅತ್ಯಗತ್ಯ. ಇಂತಹ ವಂಚನೆಯಿಂದ ರಕ್ಷಣೆ ಪಡೆಯಲು ಮೈಯೆಲ್ಲ ಕಣ್ಣಾಗಿರಬೇಕು.

ಹಾಗಾದರೆ ನೀವು ಮಾಡಬೇಕಿರುವುದೇನು…?

ಆನ್‍ಲೈನ್‍ನಲ್ಲಿ ಸಂಗಾತಿ ಹುಡುಕಬೇಕಾದರೆ ಮೊದಲು ವಿಶ್ವಾಸಾರ್ಹ ಮ್ಯಾಟ್ರಿಮೊನಿ ವೆಬ್‍ಸೈಟ್‌ ಅಥವಾ ಆ್ಯಪ್‍ ಅನ್ನೇ ಆಯ್ಕೆ ಮಾಡಿಕೊಳ್ಳಿ. ಇದಕ್ಕಾಗಿ ಆ ವೆಬ್‌ಸೈಟ್‌ ಅಥವಾ ಆ್ಯಪ್‍ಗಳಿಗೆ ಸಿಕ್ಕಿರುವ ರೇಟಿಂಗ್‍, ಜನರ ಪ್ರತಿಕ್ರಿಯೆಗಳು, ಡೌನ್‍ಲೋಡ್‍ ಆಗಿರುವ ಹಾಗೂ ಬಳಕೆ ಆಗುತ್ತಿರುವ ಅಂಕಿ-ಸಂಖ್ಯೆಯನ್ನು ಕೂಲಂಕಶವಾಗಿ ಗಮನಿಸಬೇಕು. ಹೆಚ್ಚಿನ ಮಾಹಿತಿ ಪಡೆಯಲು ಸರ್ಚ್‌ ಎಂಜಿನ್‍ಗಳ ನೆರವು ಪಡೆಯಬೇಕು. ಸೂಕ್ತ, ನಂಬಿಕಾರ್ಹ ಮ್ಯಾಟ್ರಿಮೊನಿ ವೆಬ್‍ಸೈಟ್‍ ಯಾವುದೆಂದು ತಿಳಿಯಲು ಒಂದಿಷ್ಟು ಸಮಯ ಮೀಸಲಿಡಿ. ಇದು ಅಡಿಪಾಯವಾಗಿದೆ.

ವೆಬ್‍ಸೈಟ್‍ ಅಥವಾ ಆ್ಯಪ್‍ನಲ್ಲಿನ ನಿಯಮಗಳು, ಆಯ್ಕೆಗಳು, ಭದ್ರತೆ, ಮಾಹಿತಿ ಲಭ್ಯತೆ ಬಗ್ಗೆ ಖಚಿತಪಡಿಸಿಕೊಳ್ಳಿ. ಆನಂತರವಷ್ಟೇ ಅಗತ್ಯ ಮಾಹಿತಿ ನೀಡಿ, ನಿಮಗೆ ಬೇಕಾದ ಮಾಹಿತಿ ಪಡೆಯಿರಿ. ಯಾರೋ ಹೇಳಿದರೆಂದು ವಿಶ್ವಾಸಾರ್ಹವಲ್ಲದ ವೆಬ್‍ಸೈಟ್‍ ಅಥವಾ ಆ್ಯಪ್‍ ಮೊರೆ ಹೋಗದಿರಿ.

ಮ್ಯಾಟ್ರಿಮೊನಿ ವೆಬ್‍ಸೈಟ್‍ ಅಥವಾ ಆ್ಯಪ್‍ನಲ್ಲಿ ನಿಮ್ಮ ಎಲ್ಲಾ ಮಾಹಿತಿಯನ್ನು ನೀಡುವ ಅಗತ್ಯ ಇರುವುದಿಲ್ಲ. ಭದ್ರತೆ ಹಾಗೂ ಖಾಸಗಿತನದ ದೃಷ್ಟಿಯಿಂದ ಈ ಅಂಶದ ಕಡೆ ಹೆಚ್ಚಿನ ಗಮನಹರಿಸಿ. ನಿಮ್ಮ ಪ್ರೊಫೈಲ್‍ನಲ್ಲಿ ಫೋಟೊ, ಮಾಹಿತಿ ಹೆಚ್ಚು ಆಕರ್ಷಕವಾಗಿರುವಂತೆಯೇ, ಹೆಚ್ಚು ನಿಖರವಾಗಿರಬೇಕು. ಇದಿಷ್ಟೇ ನಿಮ್ಮ ಗಮನದಲ್ಲಿ ಇರಲಿ.

ಸಾರ್ವಜನಿಕವಾಗಿ ವೀಕ್ಷಿಸಬಹುದಾದಂತಹ, ನಿಮ್ಮ ಇರುವಿಕೆಯನ್ನು ಸ್ಪಷ್ಟವಾಗಿ ತಿಳಿಸುವಂತಹ ಫೋಟೊಗಳನ್ನು ಪ್ರೊಫೈಲ್‍ಗೆ ಹಾಕಿದರೆ ಸೂಕ್ತ. ಇದು ತಾನು ನಿರೀಕ್ಷಿಸುತ್ತಿರುವ ಸಂಗಾತಿಯನ್ನಷ್ಟೇ ಅಲ್ಲದೆ, ಅವರ ಕುಟುಂಬದವರಿಗೂ ಇಷ್ಟವಾಗುವಾಗುತ್ತದೆ. ಖಾಸಗಿ ಫೋಟೊಗಳನ್ನು ಪ್ರೊಫೈಲ್‍ನಲ್ಲಿ ಮಾತ್ರವಲ್ಲದೆ, ನಿಮಗೆ ಇಷ್ಟವಾದ ಸಂಗಾತಿಯೊಂದಿಗೂ ಹಂಚಿಕೊಳ್ಳಬೇಡಿ. ಇದು ದುರ್ಬಳಕೆಯಾಗುವ, ಸಲುಗೆಗೆ ಕಾರಣವಾಗಿ ದೌರ್ಜನ್ಯಕ್ಕೆ ಅವಕಾಶ ಮಾಡಿಕೊಡುವ ಅಪಾಯ ತಂದೊಡ್ಡಬಹುದು.

ನಿಮ್ಮ ನಿರೀಕ್ಷೆಯ ಗುಣಗಳುಳ್ಳ ಸಂಗಾತಿಯ ಮಾಹಿತಿ ಸಿಕ್ಕಿದರೆ ಫೋಟೊ, ಪ್ರೊಫೈಲ್‍ ನೋಡಿ ತಕ್ಷಣಕ್ಕೆ ಮಾರುಹೋಗಬೇಡಿ. ಮೊದಲು, ಅವನ/ ಅವಳ ಪ್ರೊಫೈಲ್‍ನಲ್ಲಿನ ಫೋಟೊ, ಮಾಹಿತಿ ನಿಜವೇ ಎಂದು ಪರೀಕ್ಷಿಸಿ. ಫೋಟೊದ ನೈಜತೆ ಪರೀಕ್ಷಿಸಲು ಆನ್‍ಲೈನ್‍ನಲ್ಲಿ ಹಲವಾರು ಆಯ್ಕೆಗಳಿವೆ. ಅವನ/ ಅವಳ ಪ್ರೊಫೈಲ್‍ನಲ್ಲಿರುವ ಮಾಹಿತಿಯನ್ನು ಇತರೆ ಸಾಮಾಜಿಕ ಮಾಧ್ಯಗಳಲ್ಲಿರುವ (ಫೇಸ್‌ಬುಕ್‌, ಇನ್‌ಸ್ಟಗ್ರಾಂ, ಸ್ವಿಟ್ಟರ್‌, ಥ್ರೆಡ್ಸ್‌...) ಮಾಹಿತಿಯನ್ನು ತಾಳೆ ಮಾಡಿ. ವಿದ್ಯಾರ್ಹತೆಗೂ, ವೃತ್ತಿಗೂ, ಮಾತಿನ ರೀತಿಗೂ ವ್ಯತ್ಯಾಸ ಇದೆಯೇ ಅಥವಾ ಇಲ್ಲವೇ ಎಂಬುದನ್ನು ಗುರುತಿಸುವುದು ನಿಮ್ಮ ವಿವೇಚನೆಯನ್ನು ಆಧರಿಸುತ್ತದೆ.

ವೆಬ್‍ಟೈಟ್‍ ಅಥವಾ ಆ‍್ಯಪ್‍ನಲ್ಲಿ ಇಷ್ಟವಾದ ಅವನ/ ಅವಳೊಂದಿಗೆ ಮಾತುಕತೆ, ಅಗತ್ಯ ಮಾಹಿತಿಯ ವಿಚಾರಣೆ, ನಿರೀಕ್ಷೆ ಹಾಗೂ ಭಾವನೆಗಳ ಹಂಚಿಕೆ ಎಲ್ಲವೂ ಆ್ಯಪ್‍ ಅಥವಾ ವೆಬ್‍ಸೈಟ್‍ ವೇದಿಕೆಯಲ್ಲೇ ನಡೆದರೆ ಒಳಿತು. ಕಾರಣ, ಇದರಲ್ಲಿ ಇಂತಿಷ್ಟು ನಿಯಂತ್ರಣ ಇರುತ್ತದೆ. ನೀವು ಹೆಚ್ಚು ಮಾಹಿತಿ ನೀಡುವಲು, ಪಡೆಯಲು ಇಲ್ಲಿ ಸಾಧ್ಯವಾಗುವುದಿಲ್ಲ. ವಿಶ್ವಾಸ ಬಂದ ನಂತರವಷ್ಟೇ ಹೆಚ್ಚಿನ ಮಾಹಿತಿ ಹಂಚಿಕೆಗೆ ಮುಂದಾಗಿ. ಅಲ್ಲಿಯವರೆಗೆ ಖಾಸಗಿ ಸಂಪರ್ಕ ಸಂಖ್ಯೆ, ಇಮೇಲ್‍, ಮನೆ ವಿಳಾಸ ಬೇರಾವುದೇ ಸಂಪರ್ಕ ಮಾಹಿತಿ ನೀಡದಿರಿ.

ಮ್ಯಾಟ್ರಿಮೊನಿ ವೆಬ್‍ಸೈಟ್ ಅಥವಾ ಆ್ಯಪ್‍ನಲ್ಲಿ ನಿಮ್ಮದೊಂದು ಪ್ರೊಫೈಲ್‍ ಇರುವ ಬಗ್ಗೆ, ಇಷ್ಟದ ಸಂಗಾತಿಯನ್ನು ಹುಡುಕುತ್ತಿರುವ ಬಗ್ಗೆ ಹಾಗೂ ಅಲ್ಲಿ ಯಾರಾದರೂ ನಿಮಗೆ ಇಷ್ಟವಾಗಿದ್ದರೆ, ಆ ವಿಚಾರವನ್ನು ಆಪ್ತರಿಗೆ, ಸ್ನೇಹಿತರಿಗೆ, ಕುಟುಂಬದವರಿಗೆ ತಿಳಿಸಿರಿ. ಈ ವಿಚಾರದಲ್ಲಿ ಯಾವುದೇ ಕಾರಣಕ್ಕೂ ಆಪ್ತರು, ಕುಟುಂಬದವರನ್ನು ದೂರವಿರಿಸಬೇಡಿ.

ಇಷ್ಟಪಟ್ಟವರೊಂದಿಗೆ ಮಾತುಕತೆ ನಡೆಸುವಾಗ ಸಾಧ್ಯವಾದಷ್ಟು ಹೆಚ್ಚು ಪ್ರಶ್ನೆಗಳನ್ನು ಕೇಳಿ, ಅವರ ಬಗ್ಗೆ ತಿಳಿದುಕೊಳ್ಳಿ. ನಿಮಗೆ ಸ್ಪಷ್ಟ ಉತ್ತರ ಸಿಗುವವರೆಗೆ ಪ್ರಶ್ನಿಸುತ್ತಿರಿ. ಇದರಿಂದ ವಿಶ್ವಾಸ ಗಟ್ಟಿಯಾಗುತ್ತದೆ. ಉತ್ತರಗಳ ನಡುವಿನ ವ್ಯತ್ಯಾಸವನ್ನೂ ಸುಲಭವಾಗಿ ಪತ್ತೆ ಮಾಡಬಹುದು. ನಿರೀಕ್ಷೆ-ಭಾವನೆಗಳನ್ನು ಹಂಚಿಕೊಂಡು, ಮನದಟ್ಟು ಮಾಡಿಸಲೂ ಈ ವಿಧಾನ ಅನುಕೂಲವಾಗುತ್ತದೆ.

ನಿಮಗೆ ಸೂಕ್ತ ಎನಿಸಿದವರ ಇಷ್ಟ–ಕಷ್ಟಗಳು, ಹಿನ್ನೆಲೆ, ಕುಟುಂಬದ ಮಾಹಿತಿಯನ್ನು ಕೇಳಿ, ತಿಳಿದುಕೊಳ್ಳಿ. ಅವನ/ ಅವಳ ಹಾಗೂ ಕುಟುಂಬದವರ ಸಾಮಾಜಿಕ ಮಾಧ್ಯಗಳಲ್ಲಿನ ಚಟುವಟಿಕೆಯ ಮೇಲೂ ನಿಗಾ ಇರಿಸಿ. 

ಅವನ/ ಅವಳ ಸಹೋದ್ಯೋಗಿಗಳು, ಆಪ್ತರು, ಕುಟುಂಬದವರೊಂದಿಗೆ ವಿಡಿಯೊ ಕರೆಯಲ್ಲಿ ಮಾತನಾಡಿ

ಸಾಕಷ್ಟು ನಂಬಿಕೆ ಮೂಡಿದ ನಂತರವಷ್ಟೇ ವಿಡಿಯೊ ಕರೆ ಅಥವಾ ನೇರ ಭೇಟಿಗೆ ಸಮಯ, ಜಾಗ ನಿಗದಿ ಮಾಡಿಕೊಳ್ಳಿ. ಸಂದೇಶ, ಕರೆಯಲ್ಲೇ ಮಗ್ನರಾಗಬಾರದು. ವಿಡಿಯೊ ಕರೆಯಲ್ಲಿ ಸಂಭಾಷಣೆ ನಡೆಸುವುದಾದರೆ ಮಾತಿನ ಲಹರಿ, ಇರುವ ಸ್ಥಳವನ್ನು ಪದೇ ಪದೇ ಸೂಕ್ಷ್ಮವಾಗಿ ಗಮನಿಸಿ. ಇಲ್ಲವಾದರೆ, ನಿಮ್ಮ ವಿಡಿಯೊ ಸಂಭಾಷಣೆಯನ್ನು ಲೈವ್‍ ರೆಕಾರ್ಡಿಂಗ್ ಮಾಡಿಕೊಂಡು, ಅಶ್ಲೀಲ ಹಾಗೂ ಅಪರಾಧ ಕೃತ್ಯಗಳಿಗೆ ಬಳಸುವ ಸಾಧ್ಯತೆ ಇರುತ್ತದೆ.

ನೇರ ಭೇಟಿಗೆ ನಿರ್ಧರಿಸಿದರೆ, ಹೆಚ್ಚು ಜನ ಸೇರುವ ಸ್ಥಳವನ್ನೇ ಆಯ್ಕೆ ಮಾಡಿಕೊಳ್ಳಿ. ಜನರಿಲ್ಲದ, ಏಕಾಂತ ಸ್ಥಳದ ಆಯ್ಕೆ ಬೇಡವೇ ಬೇಡ. ತೀರಾ ದೂರದ ಪ್ರದೇಶವೂ ಬೇಡ. ನಿಗದಿತ ಸ್ಥಳಕ್ಕೆ ನಿಮ್ಮದೇ ವಾಹನದಲ್ಲಿ ತೆರಳಿ. ಹೆಚ್ಚು ಜನರಿರುವ ಹೋಟೆಲ್‍, ರೆಸಾರ್ಟ್‌, ಉದ್ಯಾನ, ಸಾರ್ವಜನಿಕ ಸ್ಥಳಗಳಿಗೆ ಆದ್ಯತೆ ನೀಡಿ. ನಿಮ್ಮ ಮನೆಗೆ ಕರೆದರೂ ಅಥವಾ ನಿಗದಿಪಡಿಸಿದ ಜಾಗಕ್ಕೆ ಕುಟುಂಬದವರೊಂದಿಗೆ ಹೋದರೂ ತಪ್ಪಿಲ್ಲ. ನೀವೇ ಹೋಗುವುದಾದರೆ ಕುಟುಂಬಸ್ಥರು, ಆಪ್ತರಿಗೆ ಹೇಳಿ ಹೋಗಿ.

* ಕರೆ, ಸಂದೇಶ, ವಿಡಿಯೊ ಕರೆ ಅಥವಾ ನೇರ ಭೇಟಿ ಸಮಯದಲ್ಲಿ ಯಾವುದಾದರೂ ವಿಚಾರದ ಬಗ್ಗೆ ಅನುಮಾನವಿದ್ದರೆ ಅಥವಾ ಸಂಶಯ ಮೂಡುವ ಹಾಗೆ ಅವನು/ ಅವಳು ನಡೆದುಕೊಂಡರೆ ತಕ್ಷಣ ಎಚ್ಚರ ವಹಿಸಬೇಕು. ನಾಜೂಕಾಗಿ ನಡೆದುಕೊಂಡು, ಅಲ್ಲಿಂದ ಸುರಕ್ಷಿತವಾಗಿ ತೆರಳಬೇಕು. ನಂತರ ದೂರು ನೀಡಬೇಕು. ಇಲ್ಲವೇ, ಮೊಬೈಲ್‍ ಫೋನ್‍ನಲ್ಲಿ ಆ್ಯಪ್ ಮೂಲಕ ಎಮರ್ಜೆನ್ಸಿ ಅಲರ್ಟ್‌ ಮಾಡುವಷ್ಟು ಜಾಣ್ಮೆಯೂ ನಿಮ್ಮಲ್ಲಿರಬೇಕು.

* ಬಹುಮುಖ್ಯವಾಗಿ ಅವನು/ ಅವಳೊಂದಿಗೆ ಹಣಕಾಸಿನ ವ್ಯವಹಾರ ಇಟ್ಟುಕೊಳ್ಳಲೇಬೇಡಿ. ಎಂತಹುದೇ ಸಂಕಷ್ಟದ ಸಂದರ್ಭವೆಂದರೂ, ಕನಿಕರ ಮೂಡಿಸುವಂತೆ ಗೋಗರೆದರೂ, ಈ ವಿಚಾರದಲ್ಲಿ ಎಡವಬೇಡಿ. ಹಣ ಹೂಡಿಕೆ ಮಾಡಲು, ಯಾವುದೋ ಆ್ಯಪ್ ಡೌನ್‍ಲೋಡ್‍ ಮಾಡಿಕೊಳ್ಳಲು, ಬ್ಯಾಂಕ್‍ ಅಥವಾ ಯುಪಿಐ ಮಾಹಿತಿ ಕೇಳಿದರೆ ಸ್ಪಂದಿಸಬೇಡಿ.

ಎಲ್ಲ ರೀತಿಯಲ್ಲಿ ಸರಿ ಎನಿಸಿದರೂ, ಸಂಪೂರ್ಣ ನಂಬಿಕೆ ಮೂಡುವವರೆಗೆ ಕಾಯಿರಿ. ಪ್ರತಿ ಹೆಜ್ಜೆಯನ್ನು ಎಚ್ಚರಿಕೆಯಿಂದ ಇಡಿ. ಇಂತಹ ಸುರಕ್ಷತಾ ಕ್ರಮಗಳನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬೇಡಿ…

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.