ADVERTISEMENT

ಹುಬ್ಬಳ್ಳಿ ನೃಪತುಂಗ ಬೆಟ್ಟದಲ್ಲಿ ಚಿರತೆ?: ಬೆಟ್ಟಕ್ಕೆ ಪ್ರವೇಶ ತಾತ್ಕಾಲಿಕ ಬಂದ್

ಹೆಜ್ಜೆಗುರುತು ಪತ್ತೆಗೆ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2021, 13:37 IST
Last Updated 16 ಸೆಪ್ಟೆಂಬರ್ 2021, 13:37 IST
ಹುಬ್ಬಳ್ಳಿಯ ನೃಪತುಂಗ ಬೆಟ್ಟದಲ್ಲಿ ಚಿರತೆ ಕಾಣಿಸಿಕೊಂಡ ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಗುರುವಾರ ಸಾರ್ವಜನಿಕರ ಬೆಟ್ಟ ಪ್ರವೇಶ ನಿಷೇಧಿಸಲಾಗಿತ್ತು
ಹುಬ್ಬಳ್ಳಿಯ ನೃಪತುಂಗ ಬೆಟ್ಟದಲ್ಲಿ ಚಿರತೆ ಕಾಣಿಸಿಕೊಂಡ ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಗುರುವಾರ ಸಾರ್ವಜನಿಕರ ಬೆಟ್ಟ ಪ್ರವೇಶ ನಿಷೇಧಿಸಲಾಗಿತ್ತು   

ಹುಬ್ಬಳ್ಳಿ: ನಗರದ ಪ್ರಮುಖ ವಾಯುವಿಹಾರ ತಾಣ ಹಾಗೂ ಉದ್ಯಾನವಾದ ನೃಪತುಂಗ ಬೆಟ್ಟದಲ್ಲಿ ಚಿರತೆ ಕಾಣಿಸಿಕೊಂಡಿದೆ ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಅರಣ್ಯ ‌ಇಲಾಖೆ ಸಿಬ್ಬಂದಿ ಸಾರ್ವಜನಿಕರಿಗೆ ಬೆಟ್ಟದ ಪ್ರವೇಶಕ್ಕೆ ತಾತ್ಕಾಲಿಕ ನಿಷೇಧ ಹೇರಿದ್ದಾರೆ.

ಬೆಟ್ಟ ಹಾಗೂ ಅದರ ಸುತ್ತಲಿನ ಪ್ರದೇಶದಲ್ಲಿ ಬುಧವಾರ ರಾತ್ರಿ ಚಿರತೆ ಓಡಾಡಿದೆ ಎಂದು ಸ್ಥಳೀಯರು ಮಾಹಿತಿ‌ ನೀಡಿದ್ದರು. ಇದರಿಂದ ಜನ ಆತಂಕಕ್ಕೆ ಒಳಗಾಗಿದ್ದಾರೆ.

ಇದರಿಂದಾಗಿ ಅರಣ್ಯ ಇಲಾಖೆ ಸಿಬ್ಬಂದಿ ಗುರುವಾರ ದಿನಪೂರ್ತಿ ಕಾರ್ಯಾಚರಣೆ ನಡೆಸಿದರೂ ಚಿರತೆ ಅಥವಾ ಅದರ ಹೆಜ್ಜೆಗುರುತು ಪತ್ತೆಯಾಗಲಿಲ್ಲ. ಇಲಾಖೆ ಸಿಬ್ಬಂದಿ ಬೆಟ್ಟದ ಸುತ್ತಲೂ ಓಡಾಡಿದರೂ ಅದರ ಸುಳಿವು ಸಿಗಲಿಲ್ಲ. ಡ್ರೋಣ್‌ ಮೂಲಕವೂ ಬೆಟ್ಟ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಹುಡುಕಾಟ ನಡೆಸಲಾಯಿತು.

ADVERTISEMENT

ಬೆಳಿಗ್ಗೆ ವಿಷಯ ತಿಳಿಯದ ಕೆಲವರು ಎಂದಿನಂತೆ ಬೆಟ್ಟಕ್ಕೆ ಬಂದಿದ್ದರು. ಅವರನ್ನು ತಡೆದು ಸಿಬ್ಬಂದಿ ವಾಪಸ್‌ ಕಳುಹಿಸಿದರು. ಕೆಲ ದಿನಗಳ ತನಕ ಕತ್ತಲಾದ ಮೇಲೆ ಬೆಟ್ಟದ ಬಳಿ ಓಡಾಡದಂತೆ ತಿಳಿಸಿದರು.

ವಲಯ ಅರಣ್ಯ ಅಧಿಕಾರಿ ಎಸ್.ಎಂ ತೆಗ್ಗಿನಮನಿ ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ‘ಚಿರತೆ ಕಾಣಿಸಿಕೊಂಡಿದೆ ಎಂದು ಜನ ಹೇಳಿದ ಬಳಿಕ ಗೊತ್ತಾಗಿದೆ. ಜನವಸತಿ ಪ್ರದೇಶವನ್ನು ದಾಟಿ ನೃಪತುಂಗ ಬೆಟ್ಟಕ್ಕೆ ಬಂದಿದೆ ಎಂದರೆ ಅಚ್ಚರಿ. ಈ ಕುರಿತು ಜನಜಾಗೃತಿ ಮೂಡಿಸಲಾಗಿದೆ’ ಎಂದರು.

ಧಾರವಾಡ ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ್ ಕ್ಷೀರಸಾಗರ ‘ಚಿರತೆ ಕಾಣಿಸಿಕೊಂಡಿದೆ ಎನ್ನುವ ಸುದ್ದಿಯ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲಾಗಿದೆ. ಬೆಳಗಿನ ಜಾವ ಹಾಗೂ ಸಂಜೆಯಾದ ಬಳಿಕ ಬೆಟ್ಟದ ಬಳಿ ಹೋಗಬಾರದು ಎಂದು ತಿಳಿಸಲಾಗಿದೆ. ಕಪ್ಪತಗುಡ್ಡದಿಂದ ಕ್ಯಾಮೆರಾ ಟ್ರ್ಯಾಪ್‌ಗಳನ್ನು ತಂದು ಇಲ್ಲಿನ ಮರಗಳ ಮೇಲೆ ಅಳವಡಿಸಿ ಚಿರತೆ ಇರುವಿಕೆ ಬಗ್ಗೆ ಖಚಿತಪಡಿಸಿಕೊಳ್ಳಲಾಗುವುದು. ಕ್ಯಾಮೆರಾ ಅಳವಡಿಸಿದರೆ ಒಂದು ದಿನದಲ್ಲಿ ಈ ಕುರಿತು ನಮಗೆ ಖಚಿತತೆ ಸಿಗುತ್ತದೆ. ಇಲ್ಲವಾದರೆ ಬೋನು ಅಳವಡಿಸಲಾಗುವುದು. ನಮ್ಮ ತಂಡ ಮೂರ್ನಾಲ್ಕು ದಿನ ಕಾರ್ಯಾಚರಣೆ ನಡೆಸಲಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.