ADVERTISEMENT

ಪಂಚಮಸಾಲಿಗೆ 2ಎ ನೀಡಿದರೆ ಉಗ್ರ ಹೋರಾಟ: ರಾಜ್ಯ ಕಾಯಕ ಸಮಾಜಗಳ ಒಕ್ಕೂಟ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2021, 10:22 IST
Last Updated 14 ಡಿಸೆಂಬರ್ 2021, 10:22 IST
   

ಹುಬ್ಬಳ್ಳಿ: ಮುಂದುವರಿದ ಪಂಚಮಸಾಲಿ ಸಮಾಜವನ್ನು ಯಾವುದೇ ಕಾರಣಕ್ಕೂ 2ಎ ಗೆ ಸೇರ್ಪಡೆ ಮಾಡಬಾರದು ಎಂದು ಒತ್ತಾಯಿಸಿ ಬೆಳಗಾವಿಯಲ್ಲಿ ಮುಖ್ಯಮಂತ್ರಿಗೆ ಬುಧವಾರ ಮನವಿ ಸಲ್ಲಿಸಲಾಗುವುದು ಎಂದು ರಾಜ್ಯ ಕಾಯಕ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕೆ.ಸಿ. ಪುಟ್ಟಸಿದ್ದ ಶೆಟ್ಟಿ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಪಂಚಮಸಾಲಿ ಸಮಾಜಕ್ಕೆ ಈಗ ಶೇ 5ರಷ್ಟಿರುವ ಮೀಸಲಾತಿಯನ್ನು ಇನ್ನಷ್ಟು ಹೆಚ್ಚಿಸಲು ನಮ್ಮ ವಿರೋಧವಿಲ್ಲ. ಆದರೆ, 2ಎ ಮೀಸಲಾತಿ ನೀಡಬಾರದು. ಈ ಬೇಡಿಕೆ ಮುಂದಿಟ್ಟು ಹೋರಾಡುತ್ತಿರುವ ಬಸವಜಯ ಮೃತ್ಯುಂಜಯ ಸ್ವಾಮೀಜಿಗೆ ಬಸವಣ್ಣನವರ ಹೆಸರು ಹೇಳುವ ನೈತಿಕತೆಯೇ ಇಲ್ಲ’ ಎಂದು ಅಕ್ರೋಶ ವ್ಯಕ್ತಪಡಿಸಿದರು.

‘ಸ್ವಾಮೀಜಿಯಾದವರು ಎಲ್ಲ ಧರ್ಮದವರನ್ನು ಒಗ್ಗೂಡಿಸಬೇಕು. ಆದರೆ ಈ ಸ್ವಾಮೀಜಿ ಇನ್ನೊಂದು ಸಮಾಜದ ಜನರ ಅನ್ನ ಕಿತ್ತುಕೊಳ್ಳುವ ಕೆಲಸ ಮಾಡುತ್ತಿದ್ದಾರೆ. 2ಎ ಗೆ ಸೇರ್ಪಡೆ ಮಾಡದಿದ್ದರೆ ಚುನಾವಣೆಯಲ್ಲಿ ಜನ ಮತ ಹಾಕುವುದಿಲ್ಲ ಎಂದು ಬ್ಲಾಕ್‌ಮೇಲ್‌ ಮಾಡಿ ರಾಜಕಾರಣಿಗಳನ್ನು ಹೆದರಿಸುತ್ತಿದ್ದಾರೆ. ಇದಕ್ಕೆ ಅಂಜಿ ಕೆಲ ಜನಪ್ರತಿನಿಧಿಗಳು ಅವರಿಗೆ ಬೆಂಬಲ ನೀಡುತ್ತಿದ್ದಾರೆ. ಸ್ವಾಮೀಜಿಗೆ ಪಂಚಮಸಾಲಿ ಸಮಾಜ 2ಎ ಸೇರ್ಡೆಡೆಯೇ ಮುಖ್ಯವಾದರೆ ಕಾವಿ ಕಳಚಿಟ್ಟು ಹೋರಾಟಕ್ಕೆ ಬರಲಿ’ ಎಂದು ಸವಾಲು ಹಾಕಿದರು.

ADVERTISEMENT

‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪಂಚಮಸಾಲಿ ಸ್ವಾಮೀಜಿಯ ರಾಜಕೀಯ ತಂತ್ರಗಾರಿಕೆ ಮಾತುಗಳಿಗೆ ಒಳಗಾಗಿ 2ಎ ಸೇರ್ಪಡೆ ಮಾಡಬಾರದು. ಸ್ವಾಮೀಜಿಯ ಬೆದರಿಕೆ ಮಾತುಗಳಿಗೆ ಬಗ್ಗಬಾರದು’ ಎಂದು ಒತ್ತಾಯಿಸಿದರು.

ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಬೋರಪ್ಪಶೆಟ್ಟಿ, ಉಪಾಧ್ಯಕ್ಷ ಶಿವಪುತ್ರಪ್ಪ ಇಟಗಿ, ‍ಪ್ರಮುಖರಾದ ವಿ.ಡಿ. ಜಾಧವ, ಎಂ.ಪಿ. ಕುಂಬಾರ, ಈಶ್ವರಪ್ಪ ಇಟಗಿ ಹಾಗೂ ಮಾರುತಿ ಹೆಬ್ಬಾರ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.