ಹುಬ್ಬಳ್ಳಿ: 'ರಾಜ್ಯದ ಪೊಲೀಸ್ ಠಾಣೆಗಳಲ್ಲಿನ ಅನುಪಯುಕ್ತ ವಾಹನಗಳನ್ನು ತಿಪಟೂರಿನ ಸಂಸ್ಥೆಗೆ ವಿಲೇವಾರಿ ಮಾಡಬೇಕೆಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಟೆಂಡರ್ ಅಥವಾ ಹರಾಜು ಕರೆಯದೆ ಸರ್ಕಾರದ ವಸ್ತುಗಳನ್ನು ವಿಲೇವಾರಿ ಮಾಡಲು ಮುಂದಾಗಿದ್ದು ಬಹುದೊಡ್ಡ ಹಗರಣಕ್ಕೆ ಕಾರಣವಾಗಲಿದೆ' ಎಂದು ವಿಧಾನಸಭೆ ವಿರೋಧಪಕ್ಷದ ಉಪನಾಯಕ ಅರವಿಂದ ಬೆಲ್ಲದ ಹೇಳಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ತಿಪಟೂರಿನ ರೈತ ಸೇವಾ ಅಗ್ರಿಕಲ್ಚರ್ ಇಂಡಸ್ಟ್ರೀ ಹೆಸರಿನ ಸಂಸ್ಥೆಗೆ ಪೊಲೀಸ್ ಠಾಣೆಗಳ ಗುಜರಿ ವಾಹನಗಳನ್ನು ನೀಡುವಂತೆ ಸರ್ಕಾರ ಆದೇಶಿಸಿದೆ. ಈ ಸಂಸ್ಥೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯ ಮೈಸೂರಿನ ಸಯ್ಯದ್ ಸಮಿವುಲ್ಲ ಅವರ ಹೆಸರಲ್ಲಿದೆ' ಎಂದು ಮಾಹಿತಿ ನೀಡಿದರು.
'ಗುಜರಿ ವ್ಯವಹಾರದಲ್ಲಿ ಸಾಕಷ್ಟು ಮೋಸ, ವಂಚನೆ ಜೊತೆಗೆ ಕೋಟಿಗಟ್ಟಲೆ ಅವ್ಯವಹಾರ ನಡೆಯುತ್ತದೆ. ಮುಸ್ಲಿಂ ಸಮುದಾಯದವರು, ಅವರೆಲ್ಲ ತಮ್ಮ ಪಕ್ಷಕ್ಕೆ ಮತ ಹಾಕುತ್ತಾರೆ ಎನ್ನುವ ಏಕೈಕ ಕಾರಣಕ್ಕೆ ಟೆಂಡರ್ ಇಲ್ಲದೆ ಆದೇಶ ಮಾಡಲಾಗಿದೆ. ಹಾಗೆ ಮಾಡುವುದಿದ್ದರೆ, ಅವರಿಗಾಗಿಯೇ ವಿಶೇಷ ಕಾನೂನು ತರುತ್ತೇವೆ ಎಂದು ಮುಖ್ಯಮಂತ್ರಿ ಹೇಳಿಕೆ ನೀಡಲಿ' ಎಂದು ಆಕ್ರೋಶ ವ್ಯಕ್ತಪಡಿಸಿದರು.
'ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗುವಾಗ ಎರಡೂವರೆ ವರ್ಷದ ನಂತರ, ಡಿ.ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡುವುದಾಗಿ ಹೇಳಿರಬೇಕು. ಈ ಕುರಿತು ಆರಂಭದಿಂದಲೂ ಅವರಿಬ್ಬರ ನಡುವೆ ಒಳಜಗಳವಿದೆ. ಡಿಕೆಶಿ ಮೂಗಿಗೆ ತುಪ್ಪ ಸವರಿರುವ ಸಿದ್ದರಾಮಯ್ಯ, ಈಗ ಒಬ್ಬೊಬ್ಬ ಸಚಿವರ ಮನೆಗೆ ಔತಣಕೂಟಕ್ಕೆ ಹೋಗುತ್ತಿದ್ದಾರೆ. ಮುಖ್ಯಮಂತ್ರಿಯಾಗುವ ಡಿಕೆಶಿ ಕನಸು, ಕನಸಾಗಿಯೇ ಇರುತ್ತದೆ' ಎಂದು ವ್ಯಂಗ್ಯವಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.