ADVERTISEMENT

ಜಿಲ್ಲೆಗೆ ಹತ್ತು ದಿನಕ್ಕಾಗುವಷ್ಟು ಆಮ್ಲಜನಕವಿದೆ: ಜೋಶಿ

ಆಕ್ಸಿಜನ್ ಸೌಲಭ್ಯದ ವಾಹನ ಕೊಡುಗೆ ನೀಡಿದ ಜಿಟೊ ಸಂಘಟನೆ

​ಪ್ರಜಾವಾಣಿ ವಾರ್ತೆ
Published 17 ಮೇ 2021, 14:46 IST
Last Updated 17 ಮೇ 2021, 14:46 IST
ಹುಬ್ಬಳ್ಳಿಯ ಜಿಟೊ (ಜೈನ್ ಇಂಟರ್‌ನ್ಯಾಷನಲ್ ಟ್ರೇಡ್ ಆರ್ಗನೈಸೇಷನ್) ಸಂಘಟನೆಯು ಕೊಡುಗೆಯಾಗಿ ನೀಡಿದ ಆಮ್ಲಜನಕ ಸಹಿತ ತುರ್ತು ವಾಹನವನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸೋಮವಾರ ಕಿಮ್ಸ್‌ ಆಸ್ಪತ್ರೆಗೆ ಹಸ್ತಾಂತರಿಸಿದರು. ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ, ಜಿಟೊ ಅಧ್ಯಕ್ಷ ಶಾಂತಿಲಾಲ್ ಓಸವಾಲ್ ಇದ್ದಾರೆ
ಹುಬ್ಬಳ್ಳಿಯ ಜಿಟೊ (ಜೈನ್ ಇಂಟರ್‌ನ್ಯಾಷನಲ್ ಟ್ರೇಡ್ ಆರ್ಗನೈಸೇಷನ್) ಸಂಘಟನೆಯು ಕೊಡುಗೆಯಾಗಿ ನೀಡಿದ ಆಮ್ಲಜನಕ ಸಹಿತ ತುರ್ತು ವಾಹನವನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸೋಮವಾರ ಕಿಮ್ಸ್‌ ಆಸ್ಪತ್ರೆಗೆ ಹಸ್ತಾಂತರಿಸಿದರು. ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ, ಜಿಟೊ ಅಧ್ಯಕ್ಷ ಶಾಂತಿಲಾಲ್ ಓಸವಾಲ್ ಇದ್ದಾರೆ   

ಹುಬ್ಬಳ್ಳಿ: ‘ಜಿಲ್ಲೆಗೆ ಹತ್ತು ದಿನಗಳಿಗೆ ಸಾಕಾಗುವಷ್ಟು ಆಮ್ಲಜನಕದ ಸಂಗ್ರಹವಿದ್ದು, ಅಗತ್ಯವಿರುವಷ್ಟು ಆಮ್ಲಜನಕ ಸಹಿತ ಹಾಸಿಗೆಗಳನ್ನು ಹೆಚ್ಚಿಸಲಾಗುವುದು’ ಎಂದುಕೇಂದ್ರ ಸಂಸದೀಯ ವ್ಯವಹಾರಗಳು, ಗಣಿ ಹಾಗೂ ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಹುಬ್ಬಳ್ಳಿಯ ಜಿಟೊ (ಜೈನ್ ಇಂಟರ್‌ನ್ಯಾಷನಲ್ ಟ್ರೇಡ್ ಆರ್ಗನೈಸೇಷನ್) ಸಂಘಟನೆಯು ಕೊಡುಗೆಯಾಗಿ ನೀಡಿದ ಆಮ್ಲಜನಕ ಸಹಿತ ತುರ್ತು ವಾಹನವನ್ನು ಸೋಮವಾರ ಕಿಮ್ಸ್‌ ಆಸ್ಪತ್ರೆಗೆ ಹಸ್ತಾಂತರಿಸಿ ಮಾತನಾಡಿದ ಅವರು, ‘ಕಿಮ್ಸ್‌ ಆಸ್ಪತ್ರೆಗೆ ಹೊಸದಾಗಿ 25 ವೆಂಟಿಲೇಟರ್‌ಗಳು ಬಂದಿದ್ದು, ಕೋವಿಡ್ ರೋಗಿಗಳ ಚಿಕಿತ್ಸೆಗೆ ಮತ್ತಷ್ಟು ಸಹಕಾರಿಯಾಗಿದೆ’ ಎಂದರು.

‘ಕುವೈತ್‌ನಿಂದ ಬಂದ 50 ಮೆಟ್ರಕ್ ಟನ್ ಆಮ್ಲಜನಕವನ್ನು ಆದ್ಯತೆ ಮೇರೆಗೆ ವಿವಿಧ ಜಿಲ್ಲೆಗಳಿಗೆ ಹಂಚಲಾಗುವುದು. ಸೋಂಕು ದೃಢಪಟ್ಟ ತಕ್ಷಣ ಜನ ಸಮೀಪದ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಬೇಕು. ಆರಂಭದಲ್ಲಿ ಚಿಕಿತ್ಸೆ ಪಡೆದವರಿಗೆ ಕೋವಿಡ್‌ನಿಂದ ಹೆಚ್ಚಿನ ತೊಂದರೆಯಾಗಿಲ್ಲ’ ಎಂದು ಹೇಳಿದರು.

ADVERTISEMENT

‘ಕೋವಿಡ್ ಬಗ್ಗೆ ಯಾರೂ ನಿರ್ಲಕ್ಷ್ಯ ತೋರಬಾರದು. ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಅಗತ್ಯ ಸಂದರ್ಭವನ್ನು ಹೊರತುಪಡಿಸಿ, ಉಳಿದಂತೆ ಮನೆಯಲ್ಲೇ ಇರಬೇಕು. ಹದಿನೈದು ದಿನಗಳಿಗೆ ಆಗುವಷ್ಟು ದಿನಸಿಗಳನ್ನು ಖರೀದಿಸಿ ಇಟ್ಟುಕೊಳ್ಳಬೇಕು. ಇದರಿಂದ ಪದೇ ಪದೇ ಕಿರಾಣಿ ಅಂಗಡಿಗಳಿಗೆ ಹೋಗುವುದು ತಪ್ಪುತ್ತದೆ’ ಎಂದು ಸಲಹೆ ನೀಡಿದರು.

ಜಿತೊ ಹುಬ್ಬಳ್ಲಿ ಘಟಕದ ಅಧ್ಯಕ್ಷ ಶಾಂತಿಲಾಲ್ ಓಸವಾಲ್ ಮಾತನಾಡಿ, ‘ಸಂಘಟನೆಯು ಶಾಲಾ ವಾಹನವನ್ನು ತುರ್ತು ಸಂದರ್ಭದ ಚಿಕಿತ್ಸೆಗಾಗಿ ಮಾರ್ಪಡಿಸಿದೆ. ಕೋವಿಡ್‌ನಿಂದ ಬಳಲುತ್ತಿರುವ ರೋಗಿಗಳಿಗೆ ಕಿಮ್ಸ್‌ನಲ್ಲಿ ಹಾಸಿಗೆ ಸಿಗುವವರೆಗೆ ವಾಹನದಲ್ಲಿದ್ದು ಚಿಕಿತ್ಸೆ ಪಡೆಯಬಹುದಾಗಿದೆ. ಆರು ಜನರಿಗೆ ಆಮ್ಲಜನಕ ಸಹಿತ ತುರ್ತು ಚಿಕಿತ್ಸೆಯ ಸೌಲಭ್ಯ ವಾಹನದಲ್ಲಿ ಸಿಗಲಿದೆ’ ಎಂದು ಹೇಳಿದರು.

‘₹72 ಸಾವಿರ ವೆಚ್ಚದ 9 ಲೀಟರ್ ಸಾಮರ್ಥ್ಯದ ಆರು ಆಮ್ಲಜನಕ ಕಾನ್ಸಂಟ್ರೇಟರ್‌ಗಳನ್ನು ವಾಹನದಲ್ಲಿ ಅಳವಡಿಸಲಾಗಿದೆ. ದೇಶದಲ್ಲಿ ಆಮ್ಲಜನಕ ಕಾನ್ಸನ್‌ಟ್ರೇಟರ್‌ಗಳ ಕೊರತೆ ಇರುವುದರಿಂದ ದುಬೈನಿಂದ ಆಮದು ಮಾಡಿಕೊಳ್ಳಲಾಗಿದೆ. ತಮಿಳುನಾಡಿನ ಚೆನ್ನೈನಲ್ಲಿ ಇದೇ ರೀತಿಯ 20 ವಾಹನಗಳನ್ನು ಸರ್ಕಾರಕ್ಕೆ ನೀಡಲಾಗಿದೆ. ಮುಂದಿನ ದಿನದಲ್ಲಿ ಧಾರವಾಡದ ಜಿಲ್ಲಾಸ್ಪತ್ರೆಗೂ ನೀಡಲಾಗುವುದು’ ಎಂದು ಭರವಸೆ ನೀಡಿದರು.

ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾಣಿ, ಕೆ.ಎಲ್.ಇ ಸಂಸ್ಥೆಯ ಶಂಕರಣ್ಣ ಮುನವಳ್ಳಿ, ಆರ್‌ಎಸ್‌ಎಸ್‌ನ ಶ್ರೀಧರ್ ನಾಡಗೇರಿ, ಜಿಟೊ ಸಂಘಟನೆಯ ರಾಕೇಶ್ ಕಠಾರಿಯಾ, ಗೌತಮ್ ಓಸವಾಲ್, ಕಿಷನ್ ಕಠಾರಿಯಾ, ವಿನೋದ್ ಪಠವಾನ್ ಹಾಗೂ ಪದಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.