ADVERTISEMENT

ಸಶಕ್ತ ಹಿಂದೂ ರಾಷ್ಟ್ರ ನಿರ್ಮಾಣಕ್ಕಾಗಿ 3 ಮಕ್ಕಳಿಗೆ ಜನ್ಮ ನೀಡಬೇಕು: ತೊಗಾಡಿಯಾ

'ಶಸಕ್ತ ಹಿಂದೂ ರಾಷ್ಟ್ರ ನಮ್ಮ ಧ್ಯೇಯ'

​ಪ್ರಜಾವಾಣಿ ವಾರ್ತೆ
Published 16 ಜೂನ್ 2025, 7:15 IST
Last Updated 16 ಜೂನ್ 2025, 7:15 IST
ಪ್ರವೀಣಭಾಯಿ ತೊಗಾಡಿಯಾ
ಪ್ರವೀಣಭಾಯಿ ತೊಗಾಡಿಯಾ   

ಹುಬ್ಬಳ್ಳಿ: 'ಸಶಕ್ತ ಹಿಂದೂ ರಾಷ್ಟ್ರ ನಿರ್ಮಾಣಕ್ಕಾಗಿ ಹಿಂದೂಗಳು ಮೂರು ಮಕ್ಕಳಿಗೆ ಜನ್ಮ ನೀಡಬೇಕು. ಮೂರನೇ ಮಗುವಿನ ಜವಾಬ್ದಾರಿಯನ್ನು ಪರಿಷತ್ ವಹಿಸಿಕೊಳ್ಳುತ್ತದೆ' ಎಂದು ಅಂತರರಾಷ್ಟೀಯ ಹಿಂದೂ ಪರಿಷತ್ ಸಂಸ್ಥಾಪಕ ಅಧ್ಯಕ್ಷ ಡಾ. ಪ್ರವೀಣಭಾಯಿ ತೊಗಾಡಿಯಾ ಭರವಸೆ ನೀಡಿದರು.

'ಹಿ‌ಂದೂಗಳ ಸುರಕ್ಷತೆ ನಮ್ಮ ಮುಖ್ಯ ಧ್ಯೇಯವಾಗಿದ್ದು, ಅದರಂತೆ ಹಿಂದೂಗಳ ಜನಸಂಖ್ಯೆಯನ್ನೂ ಹೆಚ್ಚಿಸಬೇಕಿದೆ. ಈ ನಿಟ್ಟಿನಲ್ಲಿ ಪ್ರತಿ ಹಿಂದೂ ದಂಪತಿ ಮೂರು ಮಕ್ಕಳಿಗೆ ಜನ್ಮ ನೀಡಬೇಕು. ಮೂರನೇ ಮಗುವಿನ ಶೈಕ್ಷಣಿಕ ಜವಾಬ್ದಾರಿ ನಮ್ಮದಾಗಿದ್ದು, ಅಂತಹ ದಂಪತಿಗಳನ್ನು ಸನ್ಮಾನಿಸಿ ಗೌರವಿಸಲಾಗುವುದು‌‌. ತೀನ್ ಬಚ್ಚೆ, ಹಿಂದೂ ಸಚ್ಚೆ; ಬಾಕಿ ಸಬ್ ಕಚ್ಚೆ' ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

'ಕರ್ನಾಟಕ ರಾಜ್ಯದಲ್ಲಷ್ಟೇ ಅಲ್ಲ, ದೇಶದ ಎಲ್ಲ ರಾಜ್ಯಗಳಲ್ಲಿಯೂ ಹಿಂದೂಗಳ ಸುರಕ್ಷತೆ ಬಗ್ಗೆ ಪ್ರಶ್ನೆ ಮೂಡುವಂತಾಗಿದೆ. ಪೆಹಲ್ಗಾಮ್, ಅಸ್ಸಾಂ, ಪಶ್ಚಿಮ ಬಂಗಾಲ ಸೇರಿದಂತೆ ವಿವಧೆಡೆ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಲೇ ಇದೆ. ಸಂವಿಧಾನದ ಭರವಸೆ, ಆಶಯದ ಮೇಲೆ ರಚಿತವಾದ ಯಾವುದೇ ಪಕ್ಷದ ಸರ್ಕಾರವಾಗಿರಲಿ, ಹಿಂದೂಗಳ ರಕ್ಷಣೆ ವಿಷಯದಲ್ಲಿ ತಾರತಮ್ಯ ಮಾಡಬಾರದು. ರಾಜಕೀಯ, ರಾಜನೀತಿಯನ್ನು ಬದಿಗಿಟ್ಟು ಹಿಂದೂಗಳ ರಕ್ಷಣೆಗೆ ಮುಂದಾಗಬೇಕು' ಎಂದು ಆಗ್ರಹಿಸಿದರು.

ADVERTISEMENT

'ಭಾರತವನ್ನು ಹಿಂದೂ ರಾಷ್ಟ್ರ ಮಾಡುವ ಕನಸು ನಿಮ್ಮದೇ' ಎನ್ನುವ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, 'ಭಾರತ ಹಿಂದೂ ರಾಷ್ಟ್ರವೇ ಆಗಿದೆ. ಆದರೆ, ಅದು ದೇಶದ ಜನತೆಯ ಅನುಭವಕ್ಕೆ ಬರುವಂತೆ ಮಾಡಬೇಕಾಗಿದೆ. ದೇಶವನ್ನು ರಾಜಕೀಯ ಪಕ್ಷಗಳಿಂದ ವಿಂಗಡಿಸಬಾರದು. 1947ರ ಸ್ವಾತಂತ್ರ್ಯಾನಂತರ ಭಾರತ ಸಾಕಷ್ಟು ಅಭಿವೃದ್ಧಿ ಹೊಂದಿ, ಮಹಾನ್ ಭಾರತ ಆಗುತ್ತಿದೆ. ಆರ್ಥಿಕತೆ, ತಂತ್ರಜ್ಞಾನದೊಂದಿಗೆ ಮುಂದುವರಿಯುತ್ತಿದೆ' ಎಂದು ಹೇಳಿದರು.

ದಾಳಿ ಜಾಸ್ತಿ ಆಗಬೇಕಿತ್ತು: 'ಪೆಹಲ್ಗಾಮ್ ದಾಳಿಗೆ ಪ್ರತಿಕಾರವಾಗಿ ಭಾರತ ನಡೆಸಿದ ಆಪರೇಷನ್ ಸಿಂಧೂರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ತೊಗಾಡಿಯಾ, 'ಪಾಕಿಸ್ತಾನದ ಗಡಿದಾಟಿ ಭಾರತದ ಸೈನಿಕರು ದಾಳಿ ನಡೆಸಿದ್ದು ಒಳ್ಳೆಯ ಬೆಳವಣಿಗೆ. ಆದರೆ, ಇದು ಇನ್ನಷ್ಟು ಹೆಚ್ಚಾಗಿದ್ದರೆ ಹಿಂದೂಗಳು ಮತ್ತಷ್ಟು ಸಂತಸಗೊಳ್ಳುತ್ತಿದ್ದರು' ಅಭಿಪ್ರಾಯ ವ್ಯಕ್ತಪಡಿಸಿದರು.

'ಸಮೃದ್ಧ, ಸುರಕ್ಷಿತ, ಸನ್ಮಾನಿತ ಹಾಗೂ ಸ್ವಾಸ್ಥ್ಯ ಹಿಂದೂ ನನ್ನ ಸಂಕಲ್ಪವಾಗಿದೆ. ಈ ನಿಟ್ಟಿನಲ್ಲಿ ಅಂತರರಾಷ್ಟ್ರೀಯ ಹಿಂದೂ ಪರಿಷತ್ ಕಾರ್ಯ ನಿರ್ವಹಿಸುತ್ತಿದೆ‌. ದೌರ್ಜನ್ಯ ಸೇರಿದಂತೆ ಯಾವುದೇ ಸಮಸ್ಯೆಗೆ ಸಿಲುಕುವ ಹಿಂದೂಗಳಿಗೆ, ದೇಶದಾದ್ಯಂತ ಸಹಾಯವಾಣಿ ಆರಂಭಿಸಲಾಗಿದೆ. ಆನ್‌ಲೈನ್ ಮೂಲಕವೂ ಸಮಸ್ಯೆ ಹೇಳಿಕೊಳ್ಳಬಹುದು. ಕಾನೂನು ನೆರವಿಗೆ 'ಅಡ್ವೋಕೇಟ್ ಹೆಲ್ಪ್‌ಲೈನ್' ಸಹ ಆರಂಭಿಸಲಾಗಿದೆ. ಸ್ವಾಸ್ಥ್ಯ ಹಿಂದೂಗಾಗಿ, 10 ಸಾವಿರ ಖಾಸಗಿ ಹಿಂದೂ ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ' ಎಂದು ವಿವರಿಸಿದರು‌.

ವಿಶ್ವ ಹಿಂದೂ ಪರಿಷತ್ ಕಾರ್ಯಾಧ್ಯಕ್ಷ ರಮೇಶ ಕುಲಕರ್ಣಿ, ಉದ್ಯಮಿ ವಿಜಯ ಸಂಕೇಶ್ವರ ಹಾಗೂ ಇತರರು ಇದ್ದರು.

'ಮುಷ್ಠಿ ಅಕ್ಕಿ ಯೋಜನೆ ಜಾರಿ'

'ದೇಶದಲ್ಲಿ ಯಾವ ಹಿಂದೂ ಸಹ ಹಸಿವಿನಿಂದ ಮಲಗಬಾರದು. ಇದಕ್ಕಾಗಿ ಪರಿಷತ್ 'ಮುಷ್ಠಿ ಅಕ್ಕಿ ಯೋಜನೆ'ಯನ್ನು ಜಾರಿಗೆ ತಂದಿದೆ. ಪ್ರತಿಯೊಬ್ಬ ಹಿಂದೂ ಪ್ರತಿನಿತ್ಯ ಮುಷ್ಠಿ ಅಕ್ಕಿ ತೆಗೆದಿಟ್ಟು, ಅಡುಗೆ ಮಾಡಬೇಕು. ಹೀಗೆ ತೆಗೆದಿರಿಸಿದ ಅಕ್ಕಿಯನ್ನು ಪ್ರತಿ ತಿಂಗಳಿಗೊಮ್ಮೆ ಬಡ ಹಿಂದೂಗಳಿಗೆ ಹಂಚಬೇಕು. ಇದರಿಂದ ಯಾವ ಹಿಂದೂ ಹಿಸವಿನಿಂದ ಬಳಲಲಾರ' ಎಂದು ಪ್ರವೀಣಭಾಯಿ ತೊಗಾಡಿಯಾ ಹೇಳಿದರು.

ರಾಮಮಂದಿರ ನಿರ್ಮಾಣದ ಸಂಕಲ್ಪದೊಂದಿಗೆ 1984 ರಿಂದ ನಾನು ಹೋರಾಟಕ್ಕೆ ಇಳಿದಿದ್ದು, ಅದು ಪೂರ್ಣವಾಗಿದೆ. ಹಿಂದೂಗಳ ಸುರಕ್ಷತೆಯ ಹೋರಾಟ ಮುಂದುವರಿಯಲಿದೆ
-ಪ್ರವೀಣಭಾಯಿ ತೊಗಾಡಿಯಾ, ಸಂಸ್ಥಾಪಕ ಅಧ್ಯಕ್ಷ, ಅಂತರರಾಷ್ಟ್ರೀಯ ವಿಶ್ವಹಿಂದೂ ಪರಿಷತ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.