ADVERTISEMENT

ಮೊಮ್ಮಕ್ಕಳು ಕಂಡಂತೆ ಪಾಪು ‘ಪ್ರಪಂಚ’

ಮನೆಯ ಕಿಟಕಿಯ ಗಾಜು ಮುರಿದಾಗ ಚಾಟಿ ಬೀಸಿದ್ದ ಪಾಟೀಲ ಪುಟ್ಟಪ್ಪ

ಪ್ರಮೋದ್
Published 18 ಮಾರ್ಚ್ 2020, 9:02 IST
Last Updated 18 ಮಾರ್ಚ್ 2020, 9:02 IST
ಪಾಪು ಅವರ ಮೊಮ್ಮದ ಶಿವಕುಮಾರ ಪಾಟೀಲ
ಪಾಪು ಅವರ ಮೊಮ್ಮದ ಶಿವಕುಮಾರ ಪಾಟೀಲ   

ಹುಬ್ಬಳ್ಳಿ: ವಿಶ್ವೇಶ್ವರ ನಗರದ ಪಾಟೀಲ ಪುಟ್ಟಪ್ಪ ಅವರ ನಿವಾಸ ‘ಪ್ರಪಂಚ‍’ದ ಅಂಗಳದಲ್ಲಿ ಮಂಗಳವಾರ ಸೇರಿದ್ದ ನೂರಾರು ಜನ ಕನ್ನಡದ ಕಟ್ಟಾಳುವಿನ ಸಾಧನೆಗಳನ್ನು ಕೊಂಡಾಡುತ್ತಿದ್ದರೆ, ಇನ್ನೊಂದೆಡೆ ಅವರ ಸಂಬಂಧಿಕರು ಪಾಪು ಜೊತೆ ಹೊಂದಿದ್ದ ಒಡನಾಟಗಳನ್ನು ಮೆಲುಕು ಹಾಕುತ್ತಿದ್ದರು.

ಕುಟುಂಬದ ಹಿರಿಯಜ್ಜನ ನೆನಪುಗಳನ್ನು ಪರಸ್ಪರ ಹಂಚಿಕೊಳ್ಳುತ್ತ, ಕಣ್ಣೀರಾಗುತ್ತ ಅವರ ಮೊಮ್ಮಕ್ಕಳು ನೆನಪುಗಳ ಅಂಗಳಕ್ಕೆ ಜಾರಿದರು. ಉಮ್ಮಳಿಸಿ ಬರುತ್ತಿದ್ದ ದುಃಖದ ನಡುವೆಯೂ ತಮ್ಮ ಪ್ರೀತಿಯ ಅಜ್ಜನೊಂದಿಗೆ ಕಳೆದ ದಿನಗಳನ್ನು ‘ಪ್ರಜಾವಾಣಿ’ ಜೊತೆ ಹಂಚಿಕೊಂಡರು.

* ಮನೆಯಲ್ಲಿ ಎಲ್ಲರೂ ನನಗೆ ಶಿವು ಎನ್ನುತ್ತಿದ್ದರು. ತಾತ ಮಾತ್ರ ಶಿವರಾಜ ಎಂದೇ ಕರೆಯುತ್ತಿದ್ದರು. ಬಾಲ್ಯದಲ್ಲಿ ಅವರು ಊಟ ಮಾಡಿಸಿದ ನೆನಪು ಈಗಲೂ ಕಾಡುತ್ತಿದೆ. ತಪ್ಪು ಮಾಡಿದರೆ ತಿದ್ದಿ ಹೇಳುತ್ತಿದ್ದರು. ಮನೆಯಲ್ಲಿ ಯಾರೂ ಇಲ್ಲದಾಗ ಮಾತ್ರ ನನ್ನ ತಪ್ಪುಗಳನ್ನು ತಿಳಿಸಿ, ಮುಂದೆ ಇದೇ ರೀತಿ ಮಾಡಬಾರದು ಎಂದು ಬುದ್ಧಿವಾದ ಹೇಳುತ್ತಿದ್ದರು.

ADVERTISEMENT

– ಶಿವಕುಮಾರ, ಪಾಪು ಪುತ್ರ ಅಶೋಕ ಪಾಟೀಲ ಅವರ ಮಗ

***

* ಅದು 1999ನೇ ಇಸವಿ; ವಿಶ್ವೇಶ್ವರ ನಗರದ ಮನೆಯ ಅಂಗಳದಲ್ಲಿ ಏಳೆಂಟು ಜನ ಸೇರಿ ಕ್ರಿಕೆಟ್‌ ಆಡುತ್ತಿದ್ದೆವು. ಚೆಂಡು ಮನೆಯ ಕಿಟಕಿಯ ಗಾಜಿಗೆ ಅಪ್ಪಳಿಸಿದಾಗ ಗಾಜು ಚೂರುಚೂರಾಯಿತು. ಆಗ ಮನೆಯಲ್ಲಿದ್ದ ಅಜ್ಜ ಓಡೋಡಿ ಬಂದು ಗದರಿಸಿದಾಗ ನಾವೆಲ್ಲರೂ ಹೆದರಿದ್ದೆವು. ಆಗ ಅಜ್ಜಿ (ಪಾಪು ಅವರ ಪತ್ನಿ ಇಂದುಮತಿ ಪಾಟೀಲ) ನಮ್ಮ ರಕ್ಷಣೆಗೆ ಬಂದಿದ್ದಳು. ವಾರಕ್ಕೊಮ್ಮೆ ಪ್ರವಾಸಕ್ಕೆ ಕರೆದುಕೊಂಡು ಹೋಗುತ್ತಿದ್ದ ಕಾರಣ ನಮಗೆ ಅವರು ಅಚ್ಚುಮೆಚ್ಚಿನ ಅಜ್ಜ ಆಗಿದ್ದರು.

–ಸಂತೋಷ ಪಾಟೀಲ, ಅಶೋಕ ಅವರ ಮಗ

***

* ಅಜ್ಜ ಹಾಗೂ ನಾನು ಇಬ್ಬರೂ ಹುಟ್ಟಿದ್ದು ಒಂದೇ ದಿನ. ಆದ್ದರಿಂದ ಅವರೊಂದಿಗೆ 40 ವರ್ಷ ಜೊತೆಯಲ್ಲೇ ಕೇಕ್‌ ಕತ್ತರಿಸಿದ್ದೇನೆ. ಶಾಲೆಗೆ ಬರೆದುಕೊಂಡು ಹೋಗಿದ್ದ ಹೋಮ್‌ವರ್ಕ್‌ನ ಕಾಪಿಯನ್ನು ನನ್ನ ಸ್ನೇಹಿತ ಆಕಸ್ಮಿಕವಾಗಿ ಹರಿದು ಹಾಕಿದ್ದ. ಆಗ ಅಜ್ಜ ನನ್ನನ್ನು ಹೊಡೆದಿದ್ದರು. ಅಜ್ಜ ಮನೆಯಲ್ಲಿದ್ದಾರೆಂದರೆ ಎಲ್ಲರಿಗೂ ಒಂದು ರೀತಿಯಲ್ಲಿ ಭಯಮಿಶ್ರಿತ ಗೌರವ ಇರುತ್ತಿತ್ತು. ಮನೆಯ ವಾತಾವರಣವೂ ಶಾಂತವಾಗಿರುತ್ತಿತ್ತು.

–ಸುಮೀತ್‌ ಎಸ್‌. ವಾಲಿ. ಪಾಪು ಮಗಳು ಶೈಲಜಾ ಅವರ ಪುತ್ರ

***

* ಅಜ್ಜ ನನ್ನನ್ನು ಯಾವತ್ತೂ ಬೈದಿಲ್ಲ. ಏನೇ ಮಾಡಿದರೂ ಬೆಂಬಲ ನೀಡುತ್ತಿದ್ದರು. ಬಾಲ್ಯದಲ್ಲಿದ್ದಾಗ ಸುಂದರ ಬದುಕು ರೂಪಿಸಿಕೊಳ್ಳುವ ನೈತಿಕ ಮೌಲ್ಯಗಳನ್ನು ಹೇಳಿಕೊಟ್ಟಿದ್ದಾರೆ. ಅವರು ತಿಳಿಹೇಳಿದ ಮಾತುಗಳಿಂದ ನಮಗೆ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿದೆ. ಅಜ್ಜ ಸಾಕಷ್ಟು ಓದುತ್ತಿದ್ದರು. ಸದಾಕಾಲ ಒಂದಿಲ್ಲೊಂದು ಕೆಲಸ ಮಾಡುತ್ತಿದ್ದರು. ಹೀಗೆ ಹೇಳುತ್ತ ಹೋದರೆ ಮಾತೇ ಮುಗಿಯುವುದಿಲ್ಲ. ಅವರಿಲ್ಲ ಎನ್ನುವ ನೋವು ಸದಾ ಕಾಡುತ್ತಲೇ ಇರುತ್ತದೆ. ಮಾತುಗಳೇ ಬರುತ್ತಿಲ್ಲ.

ಸ್ಮಿತಾ, ಶೈಲಜಾ ಅವರ ಪುತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.